ನವದೆಹಲಿ : ಚುನಾವಣಾ ಆಯೋಗ, ನ್ಯಾಯಾಂಗ ಸೇರಿದಂತೆ ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಉದ್ದೇಶದ ನಿರಂತರ ಅಭಿಯಾನದ ಬಗ್ಗೆ ಸುಪ್ರೀಂ ಕೋರ್ಟ್ ಹಾಗೂ ವಿವಿಧ ಹೈಕೋರ್ಟ್ಗಳ ಮಾಜಿ ನ್ಯಾಯಮೂರ್ತಿಗಳು ಸೇರಿದಂತೆ 42 ಮಂದಿ ಮಾಜಿ ನ್ಯಾಯಾಧೀಶರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗುರುವಾರ ಬಿಡುಗಡೆ ಮಾಡಿರುವ ಬಹಿರಂಗ ಪತ್ರದಲ್ಲಿ, ಯಾವುದೇ ಪೂರಕ ಸಾಕ್ಷ್ಯಾಧಾರಗಳಿಲ್ಲದೆ ‘ಮತ ಕಳ್ಳತನ’ದಂತಹ ಆರೋಪಗಳನ್ನು ಮಾಡುತ್ತಿರುವುದನ್ನು ಮಾಜಿ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ. ಸಂವಿಧಾನಾತ್ಮಕ ಸಂಸ್ಥೆಗಳನ್ನು ಪದೇಪದೆ ‘ಕಳ್ಳರು’ ಹಾಗೂ ‘ರಾಜಿ ಮಾಡಿಕೊಂಡವರು’ ಎಂದು ಬಿಂಬಿಸುವುದರಿಂದ ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆ ಕುಸಿಯುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
“ಸಂಸ್ಥೆಗಳನ್ನು ಟೀಕಿಸುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ ಸಂಸ್ಥೆಗಳನ್ನು ಹೀನಾಯವಾಗಿ ಬಿಂಬಿಸುವುದು ಪ್ರಜಾಪ್ರಭುತ್ವದ ಹಕ್ಕಲ್ಲ” ಎಂದು ಪತ್ರದಲ್ಲಿ ಹೇಳಲಾಗಿದೆ. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಪಂಕj ಮಿತ್ತಲ್ ಸೇರಿದಂತೆ 42 ಮಂದಿ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ತಾವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುತ್ತಿಲ್ಲ. ಆದರೆ “ಮೌನ ಇನ್ನು ಮುಂದೆ ತಟಸ್ಥ ಆಯ್ಕೆಯಲ್ಲ” ಹೀಗಾಗಿ ಮಾತನಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಸಮರ್ಥಿಸಿರುವ ಮಾಜಿ ನ್ಯಾಯಮೂರ್ತಿಗಳು, ಇದು ಕಾನೂನುಬದ್ಧವಾಗಿ ರೂಪಿಸಲಾಗಿರುವ ಪ್ರಕ್ರಿಯೆಯಾಗಿದ್ದು, ನಿಖರವಾದ ಮತದಾರರ ಪಟ್ಟಿಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.
“ನಂಬಿಕೆಯೇ ಪ್ರಜಾಪ್ರಭುತ್ವದ ಕರೆನ್ಸಿ” ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಅವರು, ಚುನಾವಣೆಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಅಥವಾ ಅವುಗಳನ್ನು ಅಕ್ರಮವೆಂದು ಬಿಂಬಿಸುವ ಪ್ರಯತ್ನಗಳು ಅಶಾಂತಿಗೆ ಕಾರಣವಾಗಬಹುದು ಮತ್ತು ಅರಾಜಕ ಶಕ್ತಿಗಳಿಗೆ ಉತ್ತೇಜನ ನೀಡಬಹುದು ಎಂದು ಎಚ್ಚರಿಸಿದ್ದಾರೆ.
ಈ ಪತ್ರಕ್ಕೆ ಸಹಿ ಹಾಕಿದವರಲ್ಲಿ ಮೂವರು ವಿವಿಧ ಹೈಕೋರ್ಟ್ಗಳ ಮಾಜಿ ಮುಖ್ಯ ನ್ಯಾಯಮೂರ್ತಿಗಳೂ ಇದ್ದಾರೆ. ಜಮ್ಮು-ಕಾಶ್ಮೀರ ಮತ್ತು ದೆಹಲಿ ಹೈಕೋರ್ಟ್ಗಳ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಸಿ. ಪಟೇಲ್, ಕರ್ನಾಟಕ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಸುಭ್ರೋ ಕಮಲ್ ಮುಖರ್ಜಿ ಹಾಗೂ ಸಿಕ್ಕಿಂ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಪರ್ಮೋದ್ ಕೊಹ್ಲಿ ಅವರು ಸಹಿ ಹಾಕಿದವರಲ್ಲಿ ಸೇರಿದ್ದಾರೆ.
ಇವರಲ್ಲದೆ ವಿವಿಧ ಹೈಕೋರ್ಟ್ಗಳ ಮಾಜಿ ನ್ಯಾಯಮೂರ್ತಿಗಳು, ಶಾಸನಬದ್ಧ ಸಂಸ್ಥೆಗಳು ಹಾಗೂ ನಿಯಂತ್ರಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದ ಮಾಜಿ ಸದಸ್ಯರೂ ಪತ್ರಕ್ಕೆ ಸಹಿ ಹಾಕಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ