ʼಒಂದು ವರ್ಷ ಶಾಂತಿ ಕದಡುವಂತಿಲ್ಲ’ : ಸಿಜೆಪಿಯ ಅಭಿಜೀತ ದೀಪ್ಕೆ, ಸೌರವ ದಾಸ್, ಅಶುತೋಷ ರಂಕಾಗೆ ಷರತ್ತುಬದ್ಧ ಬಿಡುಗಡೆ

ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ  ಜ್ಞಾನೇಶಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ರಾಷ್ಟ್ರ ರಾಜಧಾನಿ ದೆಹಲಿಗೆ ಆಗಮಿಸಿದ್ದ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಸುಮಾರು 24 ಗಂಟೆಗಳ ಬಳಿಕ ಭಾನುವಾರ ಬಿಡುಗಡೆ ಮಾಡಿದ್ದಾರೆ. ಅವರೊಂದಿಗೆ ಸಿಜೆಪಿಯ ಸಹ ಸಂಚಾಲಕ ಸೌರವ ದಾಸ್‌ ಮತ್ತು ರಾಷ್ಟ್ರೀಯ ವಕ್ತಾರ ಅಶುತೋಚ ರಂಕಾ ಅವರನ್ನೂ ಬಿಡುಗಡೆ ಮಾಡಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಬಂಧನಕ್ಕೊಳಗಾಗಿದ್ದ ಈ ಮೂವರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ (ಎಸ್‌ಇಎಂ) ಷರತ್ತುಬದ್ಧವಾಗಿ ಬಿಡುಗಡೆ ಮಾಡಿದ್ದಾರೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ದೇಶದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಬಾರದು ಎಂಬ ಷರತ್ತನ್ನು ವಿಧಿಸಲಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ   ಮಾಹಿತಿ ನೀಡಿರುವ ದೆಹಲಿ ಪೊಲೀಸರು, “ಅಭಿಜೀತ ದೀಪ್ಕೆ, ಅಶುತೋಷ ರಾಂಕಾ ಮತ್ತು ಸೌರವ ದಾಸ್‌ ಅವರನ್ನು 2026ರ ಅಕ್ಟೋಬರ್‌ 10ರಂದು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌)ಯ ಸೆಕ್ಷನ್‌ 126 ಮತ್ತು 170ರ ಅಡಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿತ್ತು. ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪಾಲಿಸಿದ ಬಳಿಕ, ಅಕ್ಟೋಬರ್‌ 11ರಂದು ದೆಹಲಿಯ ಕಂಟೋನ್ಮೆಂಟ್‌ನಲ್ಲಿರುವ ಎಸ್‌ಇಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು” ಎಂದು ತಿಳಿಸಿದೆ.
“ಶಾಂತಿ ಕಾಪಾಡುವುದು ಮತ್ತು ಉತ್ತಮ ನಡವಳಿಕೆಯನ್ನು ಖಚಿತಪಡಿಸುವ ಉದ್ದೇಶದಿಂದ ಒಂದು ವರ್ಷದ ಅವಧಿಗೆ 50,000 ರೂಪಾಯಿಗಳ ಜಾಮೀನು ಬಾಂಡ್‌ ಹಾಗೂ ಶ್ಯೂರಿಟಿ ಬಾಂಡ್‌ ಸಲ್ಲಿಸಲಾಯಿತು. ಬಳಿಕ ಎಸ್‌ಇಎಂ ನ್ಯಾಯಾಲಯವು ಅವರನ್ನು ಬಿಡುಗಡೆ ಮಾಡಿತು” ಎಂದು ಪೊಲೀಸರು ಹೇಳಿದ್ದಾರೆ.
ಅಕ್ಟೋಬರ್ 10 ರಂದು ಸಿಜೆಪಿ ಸಂಚಾಲಕ ಮತ್ತು ಸಹ-ಸಂಚಾಲಕರನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್ 126 ಮತ್ತು 170ರ ಅಡಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ದೆಹಲಿ ಪೊಲೀಸರು ಬಂಧಿಸಿದ್ದರು. ಮುಂಬೈನಿಂದ ದೆಹಲಿಗೆ ಬಂದಿಳಿದ ತಕ್ಷಣವೇ ಏರ್ ಇಂಡಿಯಾ ವಿಮಾನದಿಂದ ಅವರನ್ನು ವಶಕ್ಕೆ ಪಡೆದು ಬಂಧಿಸಲಾಗಿತ್ತು.
ತಮ್ಮ ನಾಯಕರ ಬಿಡುಗಡೆಗೆ ಸಿಜೆಪಿ ಸ್ವಾಗತ ವ್ಯಕ್ತಪಡಿಸಿದೆ. ಭಾನುವಾರ ಸುದ್ದಿಗೋಷ್ಠಿ ನಡೆಸಿದ ಪಕ್ಷದ ಮುಖಂಡರು, ಪ್ರತಿಭಟನಾ ಹೋರಾಟವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
 ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಜ್ಞಾನೇಶ್‌ ಕುಮಾರ್‌ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಶನಿವಾರ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಉಲ್ಲೇಖಿಸಿದ ದೆಹಲಿ ಪೊಲೀಸರು, ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನಿರಾಕರಿಸಿದ್ದರು.
ಪ್ರತಿಭಟನೆ ಆರಂಭವಾಗುವ ಮೊದಲೇ ದೆಹಲಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು. ಬಂಧಿತರಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್‌, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಸೇರಿದ್ದರು. ಆದರೆ, ಅವರೆಲ್ಲರನ್ನೂ ಶನಿವಾರ ರಾತ್ರಿಯ ವೇಳೆಗೆ ಬಿಡುಗಡೆ ಮಾಡಲಾಗಿತ್ತು.
ಸರ್ಕಾರದ ನೀತಿಗಳನ್ನು ಟೀಕಿಸುತ್ತಿರುವ ಮತ್ತು ವಿದೇಶದಲ್ಲಿ ನೆಲೆಸಿರುವ ಯೂಟ್ಯೂಬರ್‌ ಧ್ರುವ್‌ ರಾಠಿ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಅವರನ್ನು ಶನಿವಾರ ರಾತ್ರಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಸಾಮೂಹಿಕ ಬಂಧನಕ್ಕೆ ವಿಪಕ್ಷಗಳ ಆಕ್ರೋಶ
ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಸಾಮೂಹಿಕ ಬಂಧನಗಳು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿವೆ. ಬಂಧಿತರನ್ನೆಲ್ಲ ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ವಿರೋಧ ಪಕ್ಷಗಳ ನಾಯಕರು, ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಇಂಡಿಯಾ (INDIA) ಮೈತ್ರಿಕೂಟದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದೆ. ಶನಿವಾರದ ಪ್ರತಿಭಟನೆ ವಿಫಲವಾಗಿದೆ ಎಂದು ಹೇಳಿರುವ ಬಿಜೆಪಿ, ದೇಶದಲ್ಲಿ ಅಶಾಂತಿಯನ್ನು ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement