3000ಕ್ಕೂ ಹೆಚ್ಚು ಮಂದಿ ಬಿಡುಗಡೆ; ಸಿಜೆಪಿ ನಾಯಕ ಅಭಿಜೀರ ದೀಪ್ಕೆ ಸೇರಿ ಪ್ರಮುಖರು ಇನ್ನೂ ಪೊಲೀಸ್ ವಶದಲ್ಲಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶಕುಮಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ಗೆ ಮೆರವಣಿಗೆ ನಡೆಸಲು ಯತ್ನಿಸಿದ ಸಂದರ್ಭದಲ್ಲಿ ದೆಹಲಿಯ ವಿವಿಧೆಡೆ ವಶಕ್ಕೆ ಪಡೆಯಲಾಗಿದ್ದ ಬಹುತೇಕ ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಆದರೆ, ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮತ್ತು ಸಹ ಸಂಚಾಲಕ ಸೌರವ ದಾಸ್ ಇನ್ನೂ ಪೊಲೀಸ್ ವಶದಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ವೇಳೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ದೆಹಲಿಯನ್ನು ಯಾರೂ ಒತ್ತೆಯಾಳಾಗಿ ಇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ತಮ್ಮ ‘ಬಿ-ಟೀಮ್’ ಆಗಿರುವ ಸಿಜೆಪಿ ಜತೆ ಸೇರಿಕೊಂಡು ದೆಹಲಿಯನ್ನು ಸಂಘರ್ಷದ ಅಖಾಡವನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ,   ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರೋಧ ಹಾಗೂ ಪ್ರತಿಭಟನಾಕಾರರ ಬಂಧನದ ವಿಚಾರವಾಗಿ ರಾಜಕೀಯ ಸಂಘರ್ಷ ತೀವ್ರಗೊಂಡಿದ್ದು, ದೆಹಲಿ ಮಾತ್ರವಲ್ಲದೆ ಮುಂಬೈನಲ್ಲಿಯೂ ಪ್ರತಿಭಟನೆಗಳು ನಡೆದಿವೆ.
ಭಾನುವಾರವೂ ಪ್ರತಿಭಟನೆ ಮುಂದುವರಿಸಲು ಸಿಜೆಪಿ ಕರೆ
ಜಂತರ್ ಮಂತರ್‌ನಲ್ಲಿ ಭಾನುವಾರ ಹೊಸದಾಗಿ ಪ್ರತಿಭಟನೆ ನಡೆಸುವುದಾಗಿ ಸಿಜೆಪಿ ಘೋಷಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ದೇಶಾದ್ಯಂತ ನಾಗರಿಕ ಅಸಹಕಾರ ಚಳವಳಿ ಹಾಗೂ ಬೀದಿ ಪ್ರತಿಭಟನೆಗಳನ್ನು  ಮುಂದುವರಿಸುವುದಾಗಿ ಅದು ತಿಳಿಸಿದೆ.
 25 ಗಂಟೆಗಳ ಬಳಿಕ ಮೆಟ್ರೊ ನಿಲ್ದಾಣಗಳ ಪ್ರವೇಶ, ನಿರ್ಗಮನ ದ್ವಾರಗಳು ಪುನರಾರಂಭ
ಸಿಜೆಪಿಯ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಶನಿವಾರ ಮುಚ್ಚಲಾಗಿದ್ದ ದೆಹಲಿ ಮೆಟ್ರೊದ 45 ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು 25 ಗಂಟೆಗಳ ಬಳಿಕ ಪುನರಾರಂಭಿಸಲಾಗಿದೆ. ತನ್ನ ಜಾಲದ ಎಲ್ಲ ಮೆಟ್ರೊ ನಿಲ್ದಾಣಗಳ ದ್ವಾರಗಳು ಮತ್ತೆ ತೆರೆಯಲ್ಪಟ್ಟಿವೆ ಎಂದು ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ) ತಿಳಿಸಿದೆ.
ಶನಿವಾರ ತಡರಾತ್ರಿ ಪ್ರಯಾಣಿಕರಿಗೆ ಮಾಹಿತಿ ನೀಡಿದ ಡಿಎಂಆರ್‌ಸಿ, ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಬಂಧಿತ ನಿಲ್ದಾಣಗಳಲ್ಲಿ ಒಂದು ಮಾರ್ಗದಿಂದ ಮತ್ತೊಂದು ಮಾರ್ಗಕ್ಕೆ ಬದಲಾವಣೆ ಮಾಡಿಕೊಳ್ಳುವ ಇಂಟರ್‌ಚೇಂಜ್ ಸೌಲಭ್ಯಗಳೂ ಲಭ್ಯವಿವೆ ಎಂದು ಸ್ಪಷ್ಟಪಡಿಸಿದೆ.
3,000ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ
ಸಿಜೆಪಿ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ 3,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಯೂಟ್ಯೂಬರ್ ಧ್ರುವ್ ರಾಠಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ಕಾರ್ಯಕರ್ತರು ಈ ಕ್ರಮಕ್ಕೆ ಒಳಗಾಗಿದ್ದಾರೆ.
ವಿಪಕ್ಷಗಳ ನಾಲ್ವರು ಮಾಜಿ ಮುಖ್ಯಮಂತ್ರಿಗಳಾದ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ದೆಹಲಿಯ ಅರವಿಂದ್ ಕೇಜ್ರಿವಾಲ್, ಕೇರಳದ ಪಿಣರಾಯಿ ವಿಜಯನ್ ಮತ್ತು ತ್ರಿಪುರದ ಮಾಣಿಕ್ ಸರ್ಕಾರ್ ಅವರ ಹೆಸರೂ ವಶಕ್ಕೆ ಪಡೆದವರ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಮತ್ತು ವಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ತಮ್ಮನ್ನು ಮತ್ತು ಪಕ್ಷದ ನಾಯಕರನ್ನು ವಶಕ್ಕೆ ಪಡೆದಿರುವುದನ್ನು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರವಾಗಿ ಖಂಡಿಸಿದ್ದಾರೆ.
ದೆಹಲಿಯಲ್ಲಿನ ಪರಿಸ್ಥಿತಿ ಘೋಷಿತ ತುರ್ತು ಪರಿಸ್ಥಿತಿಯನ್ನೂ ಮೀರಿಸಿದೆ ಎಂಬರ್ಥದಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ನಡೆಸುವ ಹಕ್ಕನ್ನು ನಿರ್ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸಲಾಗುತ್ತಿದೆ ಎಂಬುದು ಅವರ ಆಕ್ಷೇಪವಾಗಿದೆ.
ತಮ್ಮನ್ನು ಪೊಲೀಸರು ವಶಕ್ಕೆ ಪಡೆದ ರೀತಿಯನ್ನು ವಿವರಿಸಿದ ಮಮತಾ ಬ್ಯಾನರ್ಜಿ, ಪ್ರತಿಭಟನಾಕಾರರಿಗೆ ಸಂಚರಿಸಲು ಅವಕಾಶ ನೀಡದ ಕಾರಣ ಮನೆಯ ಎದುರಿನ ಬಸ್ ನಿಲ್ದಾಣದಲ್ಲಿ ಕುಳಿತು ಬೆಂಬಲ ಸೂಚಿಸುತ್ತಿದ್ದೆವು ಎಂದು ಹೇಳಿದ್ದಾರೆ.
“ನಾವು ನಮ್ಮ ಮನೆಯ ಎದುರಿನ ಬಸ್ ನಿಲ್ದಾಣದಲ್ಲಿ ಕುಳಿತಿದ್ದೆವು. ನಮಗೆ ಮುಂದೆ ಹೋಗಲು ಅವಕಾಶ ನೀಡುತ್ತಿರಲಿಲ್ಲ. ಬೆಂಬಲ ಸೂಚಿಸುವುದಕ್ಕಾಗಿ ಅಲ್ಲಿಗೆ ಬಂದಿದ್ದೆವು. ಆಗ ಪೊಲೀಸ್ ಪಡೆ ಬಂದು, ಮೂವರು ಒಟ್ಟಿಗೆ ನಿಲ್ಲಲೂ ಅವಕಾಶವಿಲ್ಲ ಎಂದು ಹೇಳಿತು. ಹೀಗಾಗಿ ನಾವು ಮೂರು ಜನರ ಗುಂಪುಗಳಾಗಿ ಅಂತರ ಕಾಯ್ದುಕೊಂಡು ಕುಳಿತೆವು. ಆದರೆ, ಒಂದು ನಿಮಿಷದೊಳಗೆ ಪೊಲೀಸರು ನಮ್ಮನ್ನು ಬಲವಂತವಾಗಿ ಅಲ್ಲಿಂದ ತೆರವುಗೊಳಿಸಿ, ಜೈಲಿನಲ್ಲಿರುವ ಅಪರಾಧಿಗಳಂತೆ ಪೊಲೀಸ್ ವಾಹನಕ್ಕೆ ಹತ್ತಿಸಿದರು.ನನ್ನ ಜೀವನದಲ್ಲಿ ಇಂತಹ ಅನುಭವ ಎಂದಿಗೂ ಆಗಿರಲಿಲ್ಲ. ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು. ಸುಮಾರು ಎರಡು ಗಂಟೆಗಳ ಕಾಲ ನಮ್ಮನ್ನು ವಾಹನದಲ್ಲಿ ಸುತ್ತಾಡಿಸಿದರು. ಒಂದು ಪೊಲೀಸ್ ಠಾಣೆಗೆ, ನಂತರ ಮತ್ತೊಂದು ಠಾಣೆಗೆ, ಅಲ್ಲಿಂದ ಇನ್ನೊಂದು ಠಾಣೆಗೆ ಕರೆದೊಯ್ದರು. ಆದರೆ, ಪ್ರತಿಯೊಂದು ಠಾಣೆಯಲ್ಲಿಯೂ ನಮ್ಮನ್ನು ಇರಿಸಿಕೊಳ್ಳಲು ಸ್ಥಳವಿಲ್ಲ ಎಂದು ಹೇಳಿದರು” ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ ಸೋನಮ್ ವಾಂಗ್‌ಚುಕ್
ದೆಹಲಿ ಪೊಲೀಸರು ವಿದ್ಯಾರ್ಥಿ ಮತ್ತು ಯುವ ನಾಯಕರನ್ನು ಬಂಧಿಸಿರುವುದನ್ನು ಪರಿಸರ ಹೋರಾಟಗಾರ ಹಾಗೂ ಶಿಕ್ಷಣ ಸುಧಾರಣೆಯ ಪ್ರತಿಪಾದಕ ಸೋನಮ್ ವಾಂಗ್‌ಚುಕ್ ಶನಿವಾರ ಖಂಡಿಸಿದ್ದಾರೆ. ಸಿಜೆಪಿ ಪ್ರತಿಭಟನೆಯನ್ನು ತಡೆಯುವ ಉದ್ದೇಶದಿಂದ ಬಂಧನಗಳನ್ನು ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ದೇಶದಲ್ಲಿ ಘೋಷಣೆಯಾಗದ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ವಾಂಗ್‌ಚುಕ್, ಬಂಧನಗಳನ್ನು ನಿಲ್ಲಿಸಿ, ಸಂಬಂಧಿತ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಂದಿನ 24 ಗಂಟೆಗಳೊಳಗೆ ನಿರ್ಬಂಧಗಳನ್ನು ಹಿಂಪಡೆಯದಿದ್ದರೆ ಲೇಹ್ ಅಥವಾ ದೆಹಲಿಯಲ್ಲಿ ಶಾಂತಿಯುತ ಧರಣಿ, ಉಪವಾಸ ಸತ್ಯಾಗ್ರಹ ಅಥವಾ ಮೆರವಣಿಗೆ ನಡೆಸುವ ಬಗ್ಗೆ ಚಿಂತನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement