ನವದೆಹಲಿ: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಸೋಮವಾರ (ಅಕ್ಟೋಬರ್ 12) ತಮ್ಮನ್ನು ಭೇಟಿಯಾಗಲು ಮಾಡಿದ ಮನವಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ ನಿರಾಕರಿಸಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಮೂಲಗಳನ್ನು ಉಲ್ಲೇಖಿಸಿ ʼಬಾರ್ ಆ್ಯಂಡ್ ಬೆಂಚ್ʼ ವದಿ ಮಾಡಿದೆ. ವರದಿಯ ಪ್ರಕಾರ, ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಲು ಉದ್ದೇಶಿಸಿದ್ದ ವಿಷಯಗಳು ಈಗಾಗಲೇ ಸುಪ್ರೀಂ ಕೋರ್ಟ್‌ನ ವಿಚಾರಣೆಯಲ್ಲಿವೆ ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ. ಸಂವಿಧಾನದ ವ್ಯವಸ್ಥೆಯ ಪ್ರಕಾರ, ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವ ಆಡಳಿತಾತ್ಮಕ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇಲ್ಲ ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕರು ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿಪತ್ರವನ್ನು ಸಲ್ಲಿಸಲು ಉದ್ದೇಶಿಸಿದ್ದರಿಂದ, ಇಂತಹ ವಿಷಯಗಳ ಕುರಿತು ಸುಪ್ರೀಂ ಕೋರ್ಟ್ ಆಡಳಿತಾತ್ಮಕ ವಿಭಾಗದ ಮೂಲಕ ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ನಾಯಕರಿಗೆ ಸ್ವಾತಂತ್ರ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವಿಷಯಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಮಂಗಳವಾರ (ಅಕ್ಟೋಬರ್ 13) ಸುಪ್ರೀಂ ಕೋರ್ಟ್‌ನಲ್ಲಿ ನಿಗದಿಯಾಗಿದೆ. ಕಾಂಗ್ರೆಸ್ ನಾಯಕರು ಈ ಸಂಬಂಧ ಯಾವುದೇ ಅರ್ಜಿ ಸಲ್ಲಿಸಿದರೆ, ಅದನ್ನು ಈಗಾಗಲೇ ವಿಚಾರಣೆಗೆ ನಿಗದಿಯಾಗಿರುವ ಪ್ರಕರಣಗಳ ಜೊತೆಯಲ್ಲೇ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಸುಪ್ರೀಂ ಕೋರ್ಟ್‌ನತ್ತ ಮೆರವಣಿಗೆ ನಡೆಸುವ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳ ನಾಯಕರ ಉದ್ದೇಶಿತ ಕಾರ್ಯಕ್ರಮದ ಕುರಿತು ಮುಖ್ಯ ನ್ಯಾಯಮೂರ್ತಿಗಳು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.
ಚುನಾವಣಾ ಅಕ್ರಮಗಳು ನಡೆದಿವೆ ಎಂಬ ಆರೋಪ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮತ್ತು ದೆಹಲಿಯಲ್ಲಿ ಪ್ರತಿಭಟನಾಕಾರರ ವಿರುದ್ಧ ಇತ್ತೀಚೆಗೆ ಪೊಲೀಸರು ಕೈಗೊಂಡ ಕ್ರಮಗಳನ್ನು ವಿರೋಧಿಸಿ, ಪ್ರತಿಪಕ್ಷಗಳ ನಾಯಕರು ಸುಪ್ರೀಂ ಕೋರ್ಟ್‌ನತ್ತ ಮೆರವಣಿಗೆ ನಡೆಸಲು ಯೋಜಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗುವ ಉದ್ದೇಶಿತ ನಿಯೋಗದಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ಪ್ರತಿಪಕ್ಷಗಳ ನಾಯಕರು ಭಾಗವಹಿಸುವ ನಿರೀಕ್ಷೆಯಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ