ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಲ್ಲಿ(ಎಸ್ಐಟಿ) ಬದಲಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಕರ್ನಾಟಕ ಹೈಕೋರ್ಟ್ನ ನಿರ್ದೇಶನದ ಮೇರೆಗೆ ರಚನೆಯಾಗಿರುವ ಈ ಎಸ್ಐಟಿಗೆ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಲೋಕಕುಮಾರ ನೇತೃತ್ವ ವಹಿಸಿದ್ದು, ಪೊಲೀಸ್ ಉಪ ಮಹಾನಿರ್ದೇಶಕಿ (ಡಿಐಜಿ) ದಿವ್ಯಾ ಗೋಪಿನಾಥ ಕೂಡ ತಂಡದಲ್ಲಿದ್ದಾರೆ.
ಎಸ್ಐಟಿ ತನಿಖಾ ತಂಡಕ್ಕೆ ಸಂಬಂಧಿಸಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಹಾಗೂ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅಭ್ಯರ್ಥಿಗಳ ಪರ ವಕೀಲರು ಸುದೀರ್ಘ ವಾದ ಮಂಡಿಸಿದರು.
ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಅಲೋಕಕುಮಾರ ಅವರನ್ನು ಎಸ್ಐಟಿ ಮುಖ್ಯಸ್ಥರನ್ನಾಗಿ ನೇಮಿಸಿರುವುದಕ್ಕೆ ಸಂಬಂಧಿಸಿದಂತೆ ಕೆಲವು ಆತಂಕಗಳಿವೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಈ ಹಿಂದೆ ಅವರ ವಿರುದ್ಧ ಕೇಳಿಬಂದಿದ್ದ ಫೋನ್ ಕದ್ದಾಲಿಕೆ ಆರೋಪಗಳನ್ನು ಉಲ್ಲೇಖಿಸಿದ ಅವರು, ಅಧಿಕಾರಿಯ ಪ್ರಕರಣದ ಹಿನ್ನೆಲೆಗೆ ಸಂಬಂಧಿಸಿದ ವಿವರಗಳನ್ನು ನ್ಯಾಯಾಲಯದ ಪರಿಶೀಲನೆಗಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ತನಿಖಾ ತಂಡಕ್ಕೆ ನೇಮಕ ಮಾಡಬಹುದಾದ ಐವರು ಅಧಿಕಾರಿಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಿದೆ ಎಂದೂ ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದರು. ಈ ಪಟ್ಟಿಯಲ್ಲಿ ಪೊಲೀಸ್ ಮಹಾನಿರೀಕ್ಷಕ (ಐಜಿ) ದರ್ಜೆಯ ಅಧಿಕಾರಿಗಳಾದ ಲಾಭೂರಾಮ ಮತ್ತು ಚೇತನ್ ಸಿಂಗ್ ರಾಥೋಡ್ ಅವರ ಹೆಸರುಗಳೂ ಸೇರಿವೆ. ಸೂಕ್ಷ್ಮ ಸ್ವರೂಪದ ಈ ಪ್ರಕರಣದ ತನಿಖೆಯ ಮೇಲ್ವಿಚಾರಣೆಗಾಗಿ ಈಗಿರುವ ಅಧಿಕಾರಿಗಳ ಬದಲಿಗೆ ಹೊಸ ತಂಡವನ್ನು ನೇಮಿಸಲು ಸರ್ಕಾರ ಬಯಸಿದೆ ಎಂದು ಅವರು ವಿವರಿಸಿದರು.
ಅಲೋಕಕುಮಾರ ವಿರುದ್ಧದ ಪ್ರಕರಣದಲ್ಲಿ ಕ್ಲೀನ್ಚಿಟ್ ನೀಡಲಾಗಿತ್ತು
ರಾಜ್ಯ ಸರ್ಕಾರದ ಈ ಕ್ರಮಕ್ಕೆ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅಭ್ಯರ್ಥಿಗಳ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಅಲೋಕಕುಮಾರ ಅವರಿಗೆ ಈಗಾಗಲೇ ಕ್ಲೀನ್ಚಿಟ್ ನೀಡಲಾಗಿದೆ. ಹೀಗಿರುವಾಗ ರಾಜ್ಯ ಸರ್ಕಾರ ಈಗ ಮತ್ತೆ ಆ ಪ್ರಕರಣವನ್ನು ಮುಂದಿಟ್ಟುಕೊಂಡು ಅವರ ನೇಮಕಾತಿಯನ್ನು ಪ್ರಶ್ನಿಸುತ್ತಿರುವುದೇಕೆ ಎಂದು ಅವರು ಪ್ರಶ್ನಿಸಿದರು.
ಅಲ್ಲದೆ, ರಾಜ್ಯ ಸರ್ಕಾರವೇ ಅಲೋಕಕುಮಾರ ಅವರಿಗೆ ಡಿಜಿಪಿ ದರ್ಜೆಗೆ ಬಡ್ತಿ ನೀಡಿದೆ. ರಾಷ್ಟ್ರಪತಿ ಪದಕಕ್ಕೂ ಅವರ ಹೆಸರನ್ನು ಶಿಫಾರಸು ಮಾಡಿದೆ. ಇಂತಹ ಸಂದರ್ಭದಲ್ಲಿ ಅವರ ವಿರುದ್ಧದ ಹಳೆಯ ಆರೋಪಗಳನ್ನು ಈಗ ಪ್ರಸ್ತಾಪಿಸುತ್ತಿರುವುದರ ಔಚಿತ್ಯವೇನು ಎಂದು ಅಭ್ಯರ್ಥಿಗಳ ಪರ ವಕೀಲರು ವಾದಿಸಿದರು.
ತಮಗೆ ಬೇಕಾದ ಅಧಿಕಾರಿಗಳ ನೇಮಕಕ್ಕೆ ಸರ್ಕಾರ ಯತ್ನಿಸುತ್ತಿದೆ ಎಂಬ ಆರೋಪ
ಎಸ್ಐಟಿ ಮುಖ್ಯಸ್ಥರನ್ನು ಬದಲಾಯಿಸುವ ಸರ್ಕಾರದ ಪ್ರಯತ್ನವನ್ನು ಪ್ರಶ್ನಿಸಿದ ಅಭ್ಯರ್ಥಿಗಳ ಪರ ವಕೀಲರು, ಸರ್ಕಾರಕ್ಕೆ ಅನುಕೂಲವಾಗುವ ಅಧಿಕಾರಿಗಳನ್ನು ತನಿಖಾ ತಂಡಕ್ಕೆ ನೇಮಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ ಮೇಲೆ ತಮಗೆ ವಿಶ್ವಾಸವಿಲ್ಲ ಎಂದು ಹೇಳಿದ ಅವರು, ಕೆಪಿಎಸ್ಸಿ ನೇಮಕಾತಿ ಹಗರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಎಸ್ಐಟಿಯಲ್ಲಿರುವ ಅಲೋಕಕುಮಾರ ಮತ್ತು ದಿವ್ಯಾ ಗೋಪಿನಾಥ್ ಅವರ ಬದಲಿಗೆ ಬೇರೆ ಅಧಿಕಾರಿಗಳನ್ನು ನೇಮಿಸಲು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಬಹುದು ಎಂದು ಅನುಮತಿ ನೀಡಿತು. ಹೊಸದಾಗಿ ನೇಮಕ ಮಾಡಲು ಉದ್ದೇಶಿಸಿರುವ ಅಧಿಕಾರಿಗಳ ಹೆಸರುಗಳನ್ನು ಹೈಕೋರ್ಟ್ಗೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು. ಈ ಹೆಸರುಗಳನ್ನು ಪರಿಶೀಲಿಸಿ ಅಂತಿಮವಾಗಿ ನೇಮಕಾತಿ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಹೈಕೋರ್ಟ್ಗೆ ವಹಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ