ಮಹಿಳೆಯಿಂದ ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಟಿಎಂಸಿ ಆರೋಪ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಸಂಜೆ ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ತಮ್ಮ ನಿವಾಸದಿಂದ ಹೊರಬರುತ್ತಿದ್ದಾಗ ಮಹಿಳೆಯೊಬ್ಬರು ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆರೋಪಿಸಿದೆ. ಘಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಪೊಲೀಸರು ತಮ್ಮ ಹೇಳಿಕೆಯಲ್ಲಿ ದಾಳಿ ಅಥವಾ ಹರಿತವಾದ ಆಯುಧದ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ.
ಟಿಎಂಸಿ ಪ್ರಧಾನ ಕಾರ್ಯದರ್ಶಿ ಡೋಲಾ ಸೇನ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ, ಮಹಿಳೆಯನ್ನು ತನ್ನಿಷ್ಠಾ ಸಾಹಾ ಎಂದು ಗುರುತಿಸಿದ್ದಾರೆ. ಆಕೆ ಪೌರ ಸ್ವಯಂಸೇವಕಿಯಾಗಿದ್ದು, ಮಮತಾ ಬ್ಯಾನರ್ಜಿ ಅವರ ಸೋದರ ಸೊಸೆ ಎಂದು ಹೇಳಿಕೊಂಡಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಂಗಳವಾರ ಸಂಜೆ ಸುಮಾರು 6 ಗಂಟೆಗೆ ಮಮತಾ ಬ್ಯಾನರ್ಜಿ ಅವರು ಕಾಳಿಘಾಟ್‌ನಲ್ಲಿರುವ ತಮ್ಮ ನಿವಾಸದಿಂದ ಹೊರಬಂದಾಗ, ಸಾಹಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾಳೆ ಎಂದು ಸೇನ್ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆ ಮತ್ತು ಕೋಲ್ಕತ್ತಾ ಪೊಲೀಸರು ಸಂಚಾರ ನಿರ್ವಹಣೆ, ಜನಸಂದಣಿ ನಿಯಂತ್ರಣ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದ ಕರ್ತವ್ಯಗಳಲ್ಲಿ ನೆರವಾಗಲು ಗುತ್ತಿಗೆ ಆಧಾರದಲ್ಲಿ ಪೌರ ಸ್ವಯಂಸೇವಕರನ್ನು ನೇಮಿಸಿಕೊಳ್ಳುತ್ತಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣವು, ಮಹಿಳೆ ಮಾದಕವಸ್ತು ವ್ಯಸನಿಯಾಗಿದ್ದಾಳೆ ಎಂದು ಆರೋಪಿಸಿದೆ. ಝಡ್‌-ಪ್ಲಸ್ (Z+) ಭದ್ರತೆ ಹೊಂದಿರುವ ವ್ಯಕ್ತಿಯ ನಿವಾಸದ ಸಮೀಪಕ್ಕೆ ಮಹಿಳೆಯೊಬ್ಬಳು ಹೇಗೆ ತಲುಪಲು ಸಾಧ್ಯವಾಯಿತು ಎಂದು ಪ್ರಶ್ನಿಸಿರುವ ಪಕ್ಷ, ಇದರ ಹಿಂದೆ ಪಿತೂರಿ ಇರುವ ಸಾಧ್ಯತೆಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದೆ.
ದೂರಿನಲ್ಲಿ ಘಟನೆಯನ್ನು ವಿವರಿಸಿರುವ ಡೋಲಾ ಸೇನ್, “ಆಕೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು. ಅಮಲಿನ ಸ್ಥಿತಿಯಲ್ಲಿದ್ದ ಆಕೆ ಮಮತಾ ಬ್ಯಾನರ್ಜಿ ಅವರತ್ತ ಹಿಂಸಾತ್ಮಕವಾಗಿ ಧಾವಿಸಲು ಯತ್ನಿಸಿದ್ದಳು. ಅಲ್ಲದೆ, ಹಾನಿ ಉಂಟುಮಾಡುವ ಉದ್ದೇಶದಿಂದ ರಸ್ತೆಯ ಮೇಲೆ ಮಲಗಿಕೊಂಡಿದ್ದಳು” ಎಂದು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ಗಂಗಾ ನದಿಯಲ್ಲಿ ದೋಣಿ ಮುಳುಗಿ 14 ಮಂದಿ ಸಾವು

ಈ ದೂರಿನ ಪ್ರತಿಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಟಿಎಂಸಿ ವಕ್ತಾರ ಸಾಕೇತ್ ಗೋಖಲೆ, “ಮಾದಕವಸ್ತು ವ್ಯಸನಿಯೊಬ್ಬಳು ಇಂದು ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಬಂದು, ಚಾಕುವಿನಿಂದ ಅವರ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾಳೆ. ಝಡ್‌-ಪ್ಲಸ್ ಭದ್ರತೆ ಹೊಂದಿರುವ ಹಾಗೂ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಗೂ ಸುರಕ್ಷತೆ ಇಲ್ಲದಂತಹ ಸ್ಥಿತಿ ಬಂಗಾಳದಲ್ಲಿದೆ. ದೀದಿ ದೆಹಲಿಯಲ್ಲಿ ಬಿಜೆಪಿಯನ್ನು ಸೋಲಿಸಲು ದೃಢನಿಶ್ಚಯ ಮಾಡಿರುವುದರಿಂದ, ಇದು ಬಿಜೆಪಿಯ ಪೂರ್ವಯೋಜಿತ ಪಿತೂರಿಯೇ?” ಎಂದು ಪ್ರಶ್ನಿಸಿದ್ದಾರೆ.
ಆದರೆ, ಘಟನೆಯ ಬಗ್ಗೆ ಕೆಲವೇ ಗಂಟೆಗಳ ಬಳಿಕ ಹೇಳಿಕೆ ನೀಡಿದ ಪೊಲೀಸರು, ಮಹಿಳೆಯನ್ನು 38 ವರ್ಷದ ಅನುಸೂಯಾ ಸಾಹಾ ಎಂದು ಗುರುತಿಸಿದ್ದಾರೆ. ಈ ಘಟನೆಯನ್ನು ಅವರು ವಾಗ್ವಾದ ಎಂದು ಬಣ್ಣಿಸಿದ್ದು, ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
“ಮಾಜಿ ಮುಖ್ಯಮಂತ್ರಿಯವರು ತಮ್ಮ ನಿವಾಸದಿಂದ ಹೊರಬರುತ್ತಿದ್ದಾಗ ಈ ಘಟನೆ ನಡೆದಿದೆ. ಅನುಸೂಯಾ ಸಾಹಾ ಎಂಬ ಮಹಿಳೆ ಮುಖಾಮುಖಿಯಾದಾಗತೀವ್ರ ವಾಗ್ವಾದ ಉಂಟಾಗಿದೆ. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಬಳಿಕ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ, ಟಿಎಂಸಿ ಸದಸ್ಯರು ದೂರು ದಾಖಲಿಸಿದ್ದಾರೆ. ಕಾನೂನಿನ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ| ‘ರಾಹುಲ್‌ ಗಾಂಧಿ ತಳ್ಳಿದ್ದರಿಂದ ಕೆಳಗೆ ಬಿದ್ದೆ ; ಕ್ಯಾಮೆರಾಮನ್‌ಗೂ ನೂಕಿದರು’: ಆಸ್ಪತ್ರೆಗೆ ದಾಖಲಾದ ಗರ್ಭಿಣಿ ಪತ್ರಕರ್ತೆ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement