ಧಾರವಾಡ: ದಸರಾ ಹಬ್ಬದ ವಿಜಯದಶಮಿ ಹಾಗೂ ಆಯುಧಪೂಜೆಯ ಸಂದರ್ಭದಲ್ಲಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರು ಮಳೆ-ಬೆಳೆ, ಜನಜೀವನ, ಪ್ರಕೃತಿಯ ಆಗುಹೋಗುಗಳ ಕುರಿತು ಭವಿಷ್ಯ ನುಡಿದಿದ್ದಾರೆ
ಯುಗಾದಿ ವೇಳೆ ಮುಂಗಾರು ಮಳೆಯ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು ಈಗ ದಸರಾ ವೇಳೆ ಹಿಂಗಾರು ಮಳೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ಧಾರವಾಡದಲ್ಲಿ ನಡೆದ ಜಂಬೂಸವಾರಿ ಉತ್ಸವದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ ಅವರು, “ಈ ಹಿಂದೆ ಮುಂಗಾರು ಮಳೆ ಸಮರ್ಪಕವಾಗಿ ಆಗದೆ, ನೀರಿನ ಅಭಾವ, ಅನ್ನದ ಕೊರತೆ ಹಾಗೂ ಜನಜೀವನದಲ್ಲಿ ತೀವ್ರ ಸಂಕಷ್ಟಗಳು ಎದುರಾಗುತ್ತವೆ ಎಂದು ಹೇಳಿದ್ದೆ. ಅದೇ ಪ್ರಕಾರ ಆಗಿದೆ. ಮುಂಗಾರು ಮಳೆ ಸಮಪರ್ಕವಾಗಿ ಆಗಿಲ್ಲ. ಆದರೆ, ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಮುಂದೆ ಹಿಂಗಾರು ಮಳೆ ಉತ್ತಮವಾಗಿ ಸುರಿಯಲಿದೆ. ಇದರಿಂದ ನಾಡಿನಲ್ಲಿ ಸುಭಿಕ್ಷ ಉಂಟಾಗಿ, ಜನರಿಗೆ ನೆಮ್ಮದಿ ಮತ್ತು ಶಾಂತಿ ಸಿಗಲಿದೆ. ಜಲಚರಗಳಿಗೂ ಒಳಿತಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ ರಾಜ್ಯ ರಾಜಕೀಯದಲ್ಲಿ ಮಹತ್ವದಬದಲಾವಣೆಗಳು ಸಂಭವಿಸುತ್ತವೆಯೇ ಎಂದು ಪ್ರಶ್ನೆಗೆ ಈ ವಿಚಾರ ಮಾಧ್ಯಮದವರಾದ ನಿಮಗೇ ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದಷ್ಟೇ ಉತ್ತರಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ