ಹುಬ್ಬಳ್ಳಿ: ಗಾಳಿಪಟ ಹಾರಿಸಲು ಬಳಸುವ ಅಪಾಯಕಾರಿ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ ಶಿವಶಂಕರ ಕಾಲೋನಿ ಸಮೀಪ ಗುರುವಾರ ನಡೆದಿದೆ ಎಂದು ವರದಿಯಾಗಿದೆ.
ಹುಬ್ಬಳ್ಳಿಯ ಭರತ ನಗರದ ನಿವಾಸಿಯಾಗಿರುವ ವಿದ್ಯಾ ಮಂಜುನಾಥ ಗೌಡರ (38) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಅವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮಧ್ಯಾಹ್ನ ಮಹಿಳೆ ಮನೆಯಿಂದ ಸ್ಕೂಟಿಯಲ್ಲಿ ಕೆಲಸಕ್ಕೆ ಹೊರಟಿದ್ದರು. ಹುಬ್ಬಳ್ಳಿ ನಗರದ ಶಿವಶಂಕರ ಕಾಲೋನಿ ಬಳಿ ಸಾಗುತ್ತಿದ್ದಾಗ, ಗಾಳಿಪಟ ಹಾರಿಸಲು ಬಳಸಲಾಗುವ ಹರಿತವಾದ ಮಾಂಜಾ ದಾರ ದಿಢೀರನೆ ಅವರ ಕುತ್ತಿಗೆಗೆ ಬಿಗಿಯಾಗಿ ಸಿಲುಕಿದೆ. ಇದರಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಅವರಿಗೆ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ