ನೇಹಾ ಬೋರಾಗೆ ಹಿನ್ನಡೆ: ಶಾಂತಿ ಬಾಂಡ್‌ ನೋಟಿಸ್‌ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಶಾಂತಿ ಕಾಪಾಡುವ ಭರವಸೆ ನೀಡಿ ಬಾಂಡ್‌ ಸಲ್ಲಿಸುವಂತೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಅಖಿಲ ಭಾರತ ವಿದ್ಯಾರ್ಥಿ ಸಂಘದ (ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ ಅವರು ಶುಕ್ರವಾರ ಸಂಜೆ 6 ಗಂಟೆಯ ಬಳಿಕ ತೀರ್ಪು ಪ್ರಕಟಿಸಿದರು. ಗುರುವಾರ ವಾದ ಆಲಿಸಿದ ಬಳಿಕ ತೀರ್ಪನ್ನು ಕಾಯ್ದಿರಿಸಿದ್ದರು.
ಅಕ್ಟೋಬರ್‌ 16ರಂದು ದೆಹಲಿಯ ಮಂಡಿ ಹೌಸ್‌ನಲ್ಲಿ ನಡೆದ ಪ್ರತಿಭಟನೆ ಸೇರಿದಂತೆ ಇತ್ತೀಚಿನ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ನೇಹಾ ಬೋರಾ ಅವರಿಗೆ ಈ ನೋಟಿಸ್‌ ನೀಡಲಾಗಿತ್ತು.

ಬಂಧನದಿಂದ ಬಿಡುಗಡೆಯಾದ ಮರುದಿನವಾದ ಅಕ್ಟೋಬರ್‌ 17ರಂದು ನವದೆಹಲಿ ಜಿಲ್ಲಾ ವ್ಯಾಪ್ತಿಯ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಈ ನೋಟಿಸ್‌ ಜಾರಿಗೊಳಿಸಿದ್ದರು. ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗಿ 10,000 ರೂ. ವೈಯಕ್ತಿಕ ಬಾಂಡ್‌ ಸಲ್ಲಿಸುವುದರ ಜತೆಗೆ ಒಬ್ಬರು ಜಾಮೀನುದಾರರ ಖಾತರಿಯನ್ನೂ ನೀಡುವಂತೆ ಸೂಚಿಸಲಾಗಿತ್ತು.

ವಕೀಲ ಅಭಿಕ್‌ ಚಿಮ್ನಿ ಮೂಲಕ ಅರ್ಜಿ ಸಲ್ಲಿಸಿದ್ದ ನೇಹಾ ಬೋರಾ, ನೋಟಿಸ್‌ನಲ್ಲಿ ಸ್ಪಷ್ಟವಾದ ಮಾಹಿತಿ ಇಲ್ಲ ಎಂದು ವಾದಿಸಿದ್ದರು. ಶಾಂತಿಭಂಗ ಉಂಟಾಗುವ ಸಾಧ್ಯತೆಯಿದೆ ಎನ್ನುವುದಕ್ಕೆ ಸೂಕ್ತ ಕಾರಣಗಳನ್ನು ನೀಡಿಲ್ಲ. ಯಾವ ಘಟನೆ ಅಥವಾ ಯಾವ ಅವಧಿಯಲ್ಲಿ ಶಾಂತಿಭಂಗ ಉಂಟಾಗಬಹುದು ಎಂಬುದನ್ನೂ ತಿಳಿಸಿಲ್ಲ ಎಂದು ಆಕ್ಷೇಪಿಸಿದ್ದರು. ಈ ನೋಟಿಸ್‌ ಸಂವಿಧಾನದ 19 ಮತ್ತು 21ನೇ ವಿಧಿಗಳ ಅಡಿಯಲ್ಲಿ ತಮಗೆ ದೊರೆತಿರುವ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದೂ ಅವರು ವಾದಿಸಿದ್ದರು.

ಪೊಲೀಸರ ವಾದವೇನು?
ಗುರುವಾರದ ವಿಚಾರಣೆಯಲ್ಲಿ ದೆಹಲಿ ಪೊಲೀಸರ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಚೇತನ್‌ ಶರ್ಮಾ, ನೇಹಾ ಬೋರಾ ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾದ 12 ಘಟನೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದರು. ಅವರ ವಿರುದ್ಧ ಕೈಗೊಂಡಿರುವುದು ಮುಂದೆ ಶಾಂತಿಭಂಗ ಉಂಟಾಗದಂತೆ ತಡೆಯುವ ಮುನ್ನೆಚ್ಚರಿಕೆ ಕ್ರಮ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಭೂಷಣ್‌ ಮತ್ತು ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಮುಖಂಡರು ಆಡಳಿತ ಬದಲಾವಣೆಗೆ ಕರೆ ನೀಡಿದ ಸಭೆಯಲ್ಲಿ ನೆಹಾ ಬೋರಾ ಭಾಗವಹಿಸಿದ್ದರು ಎಂದೂ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನೇಹಾ ಬೋರಾ ಪರ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌, “ಪ್ರಜಾಪ್ರಭುತ್ವದಲ್ಲಿ ಆಡಳಿತ ಬದಲಾವಣೆಯಾಗುವುದರಲ್ಲಿ ತಪ್ಪೇನಿಲ್ಲ” ಎಂದರು.
ಆಗ ಪೊಲೀಸರ ಪರ ವಕೀಲರು, “ಆಡಳಿತ ಬದಲಾವಣೆಯಾಗಬೇಕಾದರೆ ಅದು ಮತಗಳ ಮೂಲಕ ಆಗಬೇಕು. ನವದೆಹಲಿಯಲ್ಲಿ ಗುಂಪುಗೂಡುವ ಮೂಲಕ ಅಲ್ಲ” ಎಂದು ಪ್ರತಿಕ್ರಿಯಿಸಿದರು.
ಅಕ್ಟೋಬರ್‌ 16ರಂದು ಕನ್ನಾಟ್‌ ಪ್ಲೇಸ್‌ನ ಸೆಂಟ್ರಲ್‌ ಪಾರ್ಕ್‌ನಲ್ಲಿ ಕಾಕ್ರೋಚ್‌ ಜನತಾ ಪಾರ್ಟಿ ಪ್ರತ್ಯೇಕ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ, ಆ ಪ್ರತಿಭಟನೆಯಲ್ಲಿ ನೇಹಾ ಬೋರಾ ಭಾಗವಹಿಸಿರಲಿಲ್ಲ ಎಂದು ಅವರ ಪರ ವಕೀಲರು ಸ್ಪಷ್ಟಪಡಿಸಿದರು. “ಅವರು ಮಂಡಿ ಹೌಸ್‌ನಲ್ಲಿ ತಮ್ಮದೇ ಪ್ರತಿಭಟನಾ ಕಾರ್ಯಕ್ರಮದ ಕೆಲಸದಲ್ಲಿ ತೊಡಗಿದ್ದರು” ಎಂದು ಹೇಳಿದರು.

ಪ್ರಮುಖ ಸುದ್ದಿ :-   ವಿಡಿಯೋ | ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು‘ಆತ್ಮಹತ್ಯೆ ನಿರೋಧಕ ಫ್ಯಾನ್‌’ ಅಳವಡಿಸಿದ ಗುಜರಾತಿನ ವಿಶ್ವವಿದ್ಯಾಲಯ; ಹೇಗೆ ?

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಐಎಸ್‌ಎ ಕಾರ್ಯಕರ್ತರೊಂದಿಗೆ ಧ್ವಜ ಮೆರವಣಿಗೆ ಆರಂಭಿಸಿದ್ದ ನೇಹಾ ಬೋರಾ ಅವರನ್ನು ಅಕ್ಟೋಬರ್‌ 16ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಮರುದಿನ ಬೆಳಗ್ಗೆ ಸುಮಾರು 6 ಗಂಟೆಗೆ ಬಿಡುಗಡೆ ಮಾಡಿದ್ದರು.
ಇದೇ ದಿನ ಕಾಕ್ರೋಚ್‌ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ ದೀಪ್ಕೆ ಅವರನ್ನು ಅವರ ಮನೆಯಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದರು. ಕನ್ನಾಟ್‌ ಪ್ಲೇಸ್‌ನಲ್ಲಿ ಆಯೋಜಿಸಿದ್ದ ‘ಲಹರಾ ದೋ ತಿರಂಗಾ’ (ತ್ರಿವರ್ಣ ಧ್ವಜ ಹಾರಿಸಿ) ರ‍್ಯಾಲಿಗೂ ಮುನ್ನ ಈ ಕ್ರಮ ಕೈಗೊಳ್ಳಲಾಗಿತ್ತು.
ಅಕ್ಟೋಬರ್‌ 13ರಂದು ಜಂತರ್‌ ಮಂತರ್‌ನಲ್ಲಿ ರಾಷ್ಟ್ರಧ್ವಜ ಪ್ರದರ್ಶಿಸಿದ್ದ ಸಿಜೆಪಿ ಸದಸ್ಯರಾದ ಸೌರವ್‌ ದಾಸ್‌ ಮತ್ತು ಅಶುತೋಷ ರಾಂಕಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಇದನ್ನು ವಿರೋಧಿಸಿ ರ‍್ಯಾಲಿಗೆ ಕರೆ ನೀಡಲಾಗಿತ್ತು. ಅಭಿಜೀತ್‌ ದೀಪ್ಕೆ ಅವರನ್ನು ಮರುದಿನ ಬಿಡುಗಡೆ ಮಾಡಲಾಗಿತ್ತು. ಸೌರವ್‌ ದಾಸ್‌ ಮತ್ತು ಅಶುತೋಷ ರಾಂಕಾ ಅವರು ಏಳು ದಿನಗಳ ನ್ಯಾಯಾಂಗ ಬಂಧನದ ಬಳಿಕ ಗುರುವಾರ ಬಿಡುಗಡೆಯಾಗಿದ್ದರು.

ಪ್ರಮುಖ ಸುದ್ದಿ :-   ಸ್ಟಿಂಗ್‌ ಆಪರೇಶನ್‌ ಪ್ರಕರಣ : ರಾಕೇಶ ಶೆಟ್ಟಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು

29 ವರ್ಷದ ನೇಹಾ ಬೋರಾ ರಂಗಭೂಮಿ ಕಲಾವಿದೆ. ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕಲಾ ಮತ್ತು ಸೌಂದರ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಡಾಕ್ಟರೇಟ್‌ ಸಂಶೋಧನೆ ನಡೆಸುತ್ತಿದ್ದಾರೆ.
ಈ ತಿಂಗಳು ಎಡಪಕ್ಷಗಳು, ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತು ಕಾಕ್ರೋಚ್‌ ಜನತಾ ಪಾರ್ಟಿ ಪ್ರತ್ಯೇಕವಾಗಿ ಆಯೋಜಿಸಿದ್ದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಹಲವು ಬಾರಿ ವಶಕ್ಕೆ ಪಡೆದು ಬಿಡುಗಡೆ ಮಾಡಲಾಗಿದೆ. ಪೊಲೀಸ್‌ ವಾಹನಗಳು ಮತ್ತು ಬಂಧನ ಕೇಂದ್ರಗಳ ಒಳಗಿನಿಂದಲೇ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊಗಳನ್ನು ಹಂಚಿಕೊಂಡಿದ್ದರು.
ಅಕ್ಟೋಬರ್‌ 10ರಂದು ಪೊಲೀಸರು ಜಂತರ್‌ ಮಂತರ್‌ಗೆ ತೆರಳುವ ದಾರಿಯನ್ನು ನಿರ್ಬಂಧಿಸಿದಾಗ, ಪ್ರತಿಭಟನಾಕಾರರು ಮತ್ತೆ ಒಗ್ಗೂಡಿ ದಿಲ್ಲಿ ಹಾತ್‌ನಲ್ಲಿ ಸೇರಬೇಕೆಂದು ನೇಹಾ ಕರೆ ನೀಡಿದ್ದರು. ಆ ಬಳಿಕ ವಿಡಿಯೊದಲ್ಲಿ ಮಾತನಾಡಿದ್ದ ಅವರು, “ನಾನು ಬಂಧನದಲ್ಲಿದ್ದೇನೆ. ಆದರೆ, ಚಳವಳಿ ಬಂಧನದಲ್ಲಿಲ್ಲ” ಎಂದು ಹೇಳಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement