ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ರೇಹಾನ್ ವಾದ್ರಾ ಅವರ ಛಾಯಾಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದ ವಿವಾದ ಈಗ ಗಾಂಧಿ ಕುಟುಂಬದೊಳಗಿನ ರಾಜಕೀಯ ಭಿನ್ನಾಭಿಪ್ರಾಯದ ಚರ್ಚೆಗೆ ಕಾರಣವಾಗಿದೆ. ರೇಹಾನ್ ಅವರ ಛಾಯಾಚಿತ್ರ ಪ್ರದರ್ಶನದಲ್ಲಿ ರಾಜಕೀಯ ಛಾಯಾಚಿತ್ರಗಳನ್ನು ಕುಟುಂಬದ ಒತ್ತಡದ ಮೇರೆಗೆ ಕೊನೆಯ ಕ್ಷಣದಲ್ಲಿ ಸೇರಿಸಲಾಗಿತ್ತು ಎಂದು ಆರೋಪಿಸಿರುವ ಬಿಜೆಪಿ, ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೌನವಾಗಿರುವುದನ್ನು ಪ್ರಶ್ನಿಸಿದೆ.
ದೆಹಲಿಯ ಬಿಕಾನೇರ್ ಹೌಸ್ನಲ್ಲಿ ನಡೆಯಬೇಕಿದ್ದ ರೇಹಾನ್ ವಾದ್ರಾ ಅವರ ‘ನೋ ಐಡಿಯಾ ಈಸ್ ಫೈನಲ್’ (No Idea Is Final) ಎಂಬ ಛಾಯಾಚಿತ್ರ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಬಿಕಾನೇರ್ ಹೌಸ್ ಆಡಳಿತ ಮಂಡಳಿ ಹೊರಡಿಸಿದ ನೋಟಿಸ್ ಅನ್ನು ಬಿಜೆಪಿ ವಕ್ತಾರ ಪ್ರದೀಪ ಭಂಡಾರಿ ಹಂಚಿಕೊಂಡಿದ್ದಾರೆ. ಅಕ್ಟೋಬರ್ 21ರಂದು ಕೆಲವು ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಆಡಳಿತ ಮಂಡಳಿ ಸೂಚಿಸಿತ್ತು ಎಂದು ಅವರು ತಿಳಿಸಿದ್ದಾರೆ. ಕುಟುಂಬದ ಒತ್ತಡದ ಹಿನ್ನೆಲೆಯಲ್ಲಿ ಪ್ರದರ್ಶನದಲ್ಲಿ ರಾಜಕೀಯ ಛಾಯಾಚಿತ್ರಗಳನ್ನು ನಂತರ ಸೇರಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರದೀಪ ಭಂಡಾರಿ, ರೇಹಾನ್ ವಾದ್ರಾ ಅವರು ಜೂನ್ 10ರಂದು ಬಿಕಾನೇರ್ ಹೌಸ್ಗೆ ಇ-ಮೇಲ್ ಕಳುಹಿಸಿದ್ದರು. ಅದರಲ್ಲಿ ಛಾಯಾಚಿತ್ರದ ಪ್ರದರ್ಶನದ ಪ್ರಸ್ತಾವನೆಯನ್ನೂ ಸಲ್ಲಿಸಿದ್ದರು. ಪ್ರಕೃತಿ, ವನ್ಯಜೀವಿಗಳು, ಕಲಾಕೃತಿಗಳು ಮತ್ತು ಶಿಲ್ಪಕಲೆಗಳನ್ನು ಒಳಗೊಂಡ ಪ್ರದರ್ಶನ ಇದಾಗಿರುತ್ತದೆ ಎಂದು ಅವರು ತಿಳಿಸಿದ್ದರು. ಅದರಲ್ಲಿ ಯಾವುದೇ ರಾಜಕೀಯ ವಿಷಯ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ಪ್ರಸ್ತಾವನೆಗೆ ಬಿಕಾನೇರ್ ಹೌಸ್ ಆಡಳಿತ ಮಂಡಳಿ ಜೂನ್ 30ರಂದು ಇ-ಮೇಲ್ ಮೂಲಕ ಒಪ್ಪಿಗೆ ನೀಡಿತ್ತು ಎಂದು ಭಂಆರಿ ‘ಎಕ್ಸ್’ (X) ನಲ್ಲಿ ಬರೆದುಕೊಂಡಿದ್ದಾರೆ
ಆದರೆ, ನಂತರ ರಾಜಕೀಯ ಛಾಯಾಚಿತ್ರಗಳು ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದರಿಂದ ಅವುಗಳನ್ನು ತೆಗೆದುಹಾಕುವಂತೆ ಅಕ್ಟೋಬರ್ 21ರಂದು ಸೂಚಿಸಲಾಗಿದೆ ಎಂಬದು ಬಿಜೆಪಿ ವಕ್ತಾರರು ಹೇಳಿದ್ದಾರೆ. ಈ ಬೆಳವಣಿಗೆಯನ್ನು ಮುಂದಿಟ್ಟುಕೊಂಡು ಗಾಂಧಿ ಕುಟುಂಬದೊಳಗಿನ ಭಿನ್ನಾಭಿಪ್ರಾಯದ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.
ರಾಹುಲ್ ಗಾಂಧಿ ಮೌನದ ಬಗ್ಗೆ ಬಿಜೆಪಿ ಪ್ರಶ್ನೆ
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಈ ವಿವಾದದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸದಿರುವುದನ್ನು ಪ್ರದೀಪ ಭಂಡಾರಿ ಪ್ರಶ್ನಿಸಿದ್ದಾರೆ. ವಿಯೆಟ್ನಾಂನಲ್ಲಿದ್ದರೂ ವಿವಿಧ ವಿಚಾರಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುವ ರಾಹುಲ್ ಗಾಂಧಿ, ರೇಹಾನ್ ವಾದ್ರಾ ಪರವಾಗಿ ಈವರೆಗೆ ಒಂದೇ ಒಂದು ಬಹಿರಂಗ ಪೋಸ್ಟ್ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಿಯಾಂಕಾ ವಾದ್ರಾ ಅವರು ವಿವಾದವೊಂದನ್ನು ಸೃಷ್ಟಿಸುವ ಮೂಲಕ ತಮ್ಮ ಪುತ್ರನನ್ನು ರಾಜಕೀಯವಾಗಿ ಪರಿಚಯಿಸುವ ಪ್ರಯತ್ನ ನಡೆಸಿದ್ದಾರೆ ಎಂಬುದಾಗಿ ಆರೋಪಿಸಿರುವ ಭಂಡಾರಿ, ಈ ವಿಚಾರದಲ್ಲಿ ಪ್ರಿಯಾಂಕಾ ಅವರು ರಾಹುಲ್ ಗಾಂಧಿ ಮೇಲಿನ ರಾಜಕೀಯ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದೂ ಹೇಳಿದ್ದಾರೆ.
ರೇಹಾನ್ ವಾದ್ರಾ ಅವರ ಛಾಯಾಚಿತ್ರಗಳನ್ನು ಏಕೆ ತೆಗೆದುಹಾಕಲಾಯಿತು?
ರೇಹಾನ್ ವಾದ್ರಾ ಅವರು ತಮ್ಮ ಛಾಯಾಚಿತ್ರ ಪ್ರದರ್ಶನದಲ್ಲಿದ್ದ ಕೆಲವು ಚಿತ್ರಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ ಎಂದು ಇನ್ಸ್ಟಾಗ್ರಾಂನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಈ ವಿವಾದ ಆರಂಭವಾಯಿತು.
‘ನೋ ಐಡಿಯಾ ಈಸ್ ಫೈನಲ್’ ಎಂಬ ಶೀರ್ಷಿಕೆಯ ಪ್ರದರ್ಶನ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಬಿಕಾನೇರ್ ಹೌಸ್ ಆಡಳಿತ ಮಂಡಳಿ ಹಲವು ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಸೂಚಿಸಿತ್ತು ಎಂದು ರೇಹಾನ್ ಆರೋಪಿಸಿದ್ದಾರೆ.
ಅಕ್ಟೋಬರ್ 21ರ ಬುಧವಾರ ಮಧ್ಯಾಹ್ನ 3:30ರೊಳಗೆ ಪ್ರದರ್ಶನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಬಿಕಾನೇರ್ ಹೌಸ್ಗೆ ಸಲ್ಲಿಸಿದ್ದೆ ಎಂದು ಅವರು ತಿಳಿಸಿದ್ದಾರೆ. ಆದರೂ, ಕೊನೆಯ ಕ್ಷಣದಲ್ಲಿ 70ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ತೆಗೆದುಹಾಕಲಾಯಿತು. ಪರಿಣಾಮವಾಗಿ ಪ್ರದರ್ಶನದಲ್ಲಿ ಸುಮಾರು 40 ಛಾಯಾಚಿತ್ರಗಳು ಮಾತ್ರ ಉಳಿದವು ಎಂದು ಅವರು ಆರೋಪಿಸಿದ್ದಾರೆ.
ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳ ಬಗ್ಗೆಯೂ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಆ ಚಿತ್ರಗಳನ್ನು ತೆಗೆದುಹಾಕದಿದ್ದರೆ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಲಾಗಿತ್ತು ಎಂದೂ ಅವರು ದೂರಿದ್ದಾರೆ.
ದೆಹಲಿಯ ಬಿಕಾನೇರ್ ಹೌಸ್ನಲ್ಲಿ ಗುರುವಾರ ಸಂಜೆ 7 ಗಂಟೆಗೆ ಪ್ರದರ್ಶನ ಆರಂಭಿಸಲು ನಿಗದಿಯಾಗಿತ್ತು. ಪ್ರದರ್ಶನ ಆರಂಭಕ್ಕೆ ಸ್ವಲ್ಪ ಮೊದಲು ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿದೆ ಎಂಬ ಆರೋಪವು ಯಾವ ಚಿತ್ರಗಳನ್ನು ಪ್ರದರ್ಶಿಸಬೇಕು ಮತ್ತು ಪ್ರದರ್ಶನಕ್ಕೆ ಯಾವ ಷರತ್ತುಗಳನ್ನು ವಿಧಿಸಬಹುದು ಎಂಬ ವಿಚಾರದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಪುತ್ರ ರೇಹಾನ್ಗೆ ಬೆಂಬಲ ವ್ಯಕ್ತಪಡಿಸಿದ್ದರು.
ಬಿಕಾನೇರ್ ಹೌಸ್ ಆಡಳಿತ ಮಂಡಳಿ ಹೇಳಿದ್ದೇನು?
ವಿವಾದದ ಕುರಿತು ಪ್ರತಿಕ್ರಿಯಿಸಿರುವ ಬಿಕಾನೇರ್ ಹೌಸ್ ಮ್ಯಾನೇಜ್ಮೆಂಟ್ ಸೊಸೈಟಿ, ರೇಹಾನ್ ವಾದ್ರಾ ಅವರ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ಕೆಲವು ಛಾಯಾಚಿತ್ರಗಳು ಸಂಸ್ಥೆಯ ನೀತಿಗಳಿಗೆ ಅನುಗುಣವಾಗಿರಲಿಲ್ಲ ಎಂದು ತಿಳಿಸಿದೆ. ಈ ಕಾರಣದಿಂದಲೇ ಕೆಲವು ಚಿತ್ರಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿತ್ತು ಎಂದು ಆಡಳಿತ ಮಂಡಳಿ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಉಳಿದ ಛಾಯಾಚಿತ್ರಗಳ ಪ್ರದರ್ಶನ ಮುಂದುವರಿದಿದೆ ಎಂದೂ ಅದು ತಿಳಿಸಿದೆ.
ತನ್ನ ಹೇಳಿಕೆಯಲ್ಲಿ, ಬಿಕಾನೇರ್ ಹೌಸ್ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಮೀಸಲಾದ ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆ ಎಂದು ಸೊಸೈಟಿ ವಿವರಿಸಿದೆ. ಇಲ್ಲಿ ನಡೆಯುವ ಪ್ರದರ್ಶನಗಳು ಮತ್ತು ಸಂಬಂಧಿತ ಚಟುವಟಿಕೆಗಳು ‘ಬಿಕಾನೇರ್ ಹೌಸ್ ಮ್ಯಾನೇಜ್ಮೆಂಟ್ ಸೊಸೈಟಿ’ಯ ನೀತಿಗಳಿಗೆ ಬದ್ಧವಾಗಿರಬೇಕು ಎಂದು ಅದು ಹೇಳಿದೆ. ಕೆಲವು ಚಿತ್ರಗಳನ್ನು ತೆಗೆದುಹಾಕಲು ಕೋರಿದ್ದಕ್ಕೆ ಆಡಳಿತ ಮಂಡಳಿಯು ಈ ಮೂಲಕ ತನ್ನ ವಿವರಣೆಯನ್ನು ನೀಡಿದೆ.
ಕೆಲವು ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದಕ್ಕೆ ಆಡಳಿತ ಮಂಡಳಿ ನೀಡಿರುವ ಅಧಿಕೃತ ಕಾರಣ ಇದಾಗಿದೆ. ಆದರೆ, ಪ್ರದರ್ಶನ ಆರಂಭವಾಗುವ ಕೆಲವೇ ಗಂಟೆಗಳ ಮೊದಲು ಚಿತ್ರಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿತ್ತು ಎಂಬ ರೇಹಾನ್ ಅವರ ಆರೋಪದ ಹಿನ್ನೆಲೆಯಲ್ಲಿ ವಿವಾದ ತೀವ್ರಗೊಂಡಿದೆ.
ಒಂದೆಡೆ, ತಮ್ಮ ಪ್ರದರ್ಶನದಲ್ಲಿನ 70ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಕೊನೆಯ ಕ್ಷಣದಲ್ಲಿ ತೆಗೆದುಹಾಕಲಾಗಿದೆ ಎಂದು ರೇಹಾನ್ ವಾದ್ರಾ ಆರೋಪಿಸಿದ್ದಾರೆ. ಮತ್ತೊಂದೆಡೆ, ತಮ್ಮ ನೀತಿಗಳಿಗೆ ವಿರುದ್ಧವಾದ ಚಿತ್ರಗಳನ್ನು ಮಾತ್ರ ತೆಗೆದುಹಾಕುವಂತೆ ಸೂಚಿಸಲಾಗಿದೆ ಎಂದು ಬಿಕಾನೇರ್ ಹೌಸ್ ಆಡಳಿತ ಮಂಡಳಿ ಹೇಳಿದೆ. ಈ ವಿವಾದವನ್ನು ಮುಂದಿಟ್ಟುಕೊಂಡು ಬಿಜೆಪಿ ಗಾಂಧಿ ಕುಟುಂಬದೊಳಗಿನ ರಾಜಕೀಯ ಸಂಬಂಧಗಳ ಬಗ್ಗೆಯೂ ಪ್ರಶ್ನೆಗಳನ್ನು ಬಿಜೆಪಿ ಎತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ