ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC Scam) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ ಗಂಗ್ವಾರ್ (IAS Gyanendra Kumar) ವಿರುದ್ಧ ನ್ಯಾಯಾಲಯದಲ್ಲಿ ಕಾನೂನು ಕ್ರಮ ಜರುಗಿಸಲು ಮತ್ತು ಚಾರ್ಜ್ಶೀಟ್ ಸಲ್ಲಿಸಲು ರಾಜ್ಯ ಸರ್ಕಾರ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರಅವರು ಕಡತ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಅಭಿಯೋಜನಾ ಮಂಜೂರಾತಿ ಆದೇಶ ಹೊರಡಿಸಿದ್ದಾರೆ.
ಶಿವಕುಮಾರ ಅವರು, ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಯುವಜನತೆಯ ಭವಿಷ್ಯದ ಜೊತೆ ಆಟವಾಡುವ ಯಾವುದೇ ಕೃತ್ಯಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಸಾರ್ವಜನಿಕ ನೇಮಕಾತಿ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಭ್ರಷ್ಟಾಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಆದ್ಯತೆ ನೀಡುವುದು ನಮ್ಮ ಬದ್ಧತೆ ಎಂದು ಬರೆದುಕೊಂಡಿದ್ದಾರೆ.
2016ರ ಬ್ಯಾಚ್ನ ಐಎಎಸ್ ಅಧಿಕಾರಿಯಾದ ಜ್ಞಾನೇಂದ್ರಕುಮಾರ ಕೆಪಿಎಸ್ಸಿಯಲ್ಲಿ ಪರೀಕ್ಷಾ ನಿಯಂತ್ರಕರಾಗಿ ಸೇವೆ ಸಲ್ಲಿಸುತ್ತಿದ್ದ ಅವಧಿಯಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪವಿದೆ. ಕೆಪಿಎಸ್ಸಿಯ ಅಂದಿನ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರಕುಮಾರ ತಮ್ಮ ಬಳಿಯಿದ್ದ ಅತ್ಯಂತ ರಹಸ್ಯ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಮಧ್ಯವರ್ತಿಗಳಾದ ಬಸವರಾಜ ಕನ್ನಾಳೆ ಮೂಲಕ ಆಯ್ದ ಕೆಲವು ಅಭ್ಯರ್ಥಿಗಳನ್ನು ಬೆಂಗಳೂರಿನ ಹೊರವಲಯದ ರೆಸಾರ್ಟ್ಗಳು ಮತ್ತು ವಿಲ್ಲಾಗಳಿಗೆ ಕರೆದೊಯ್ದು, ಪರೀಕ್ಷೆಗೂ ಮುನ್ನವೇ ಸೋರಿಕೆಯಾಗಿದ್ದ 60 ರಿಂದ 80 ಪ್ರಶ್ನೆಗಳ ಸರಿಯಾದ ಉತ್ತರಗಳನ್ನು ಬಾಯಿಪಾಠ ಮಾಡಿಸಲಾಗಿತ್ತು ಎಂಬ ಆರೋಪವೂ ಇದೆ.


ನಿಮ್ಮ ಕಾಮೆಂಟ್ ಬರೆಯಿರಿ