ಎಲ್ಲ ಎಸ್‌ಐಆರ್‌ ನಿರ್ಧಾರ ಸರ್ವಾನುಮತದಿಂದಲೇ ತೆಗೆದುಕೊಂಡಿದ್ದು ; ಫಾರಂ 6ಕ್ಕೆ ತಿದ್ದುಪಡಿ ಮಾಡಿಲ್ಲ: ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಚುನಾವಣಾ ಆಯೋಗ

ನವದೆಹಲಿ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision — SIR)ಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನೂ ಚುನಾವಣಾ ಆಯೋಗವು (ECI) ಸರ್ವಾನುಮತದಿಂದ ಕೈಗೊಂಡಿದೆ ಎಂದು ಭಾರತದ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ಅವರ ಕಾರ್ಯವೈಖರಿ ಹಾಗೂ ಚುನಾವಣಾ ಆಯೋಗದ ಕೆಲವು ನಿರ್ಧಾರಗಳ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್‌ ಅರ್ಜಿಗೆ ಪ್ರತಿಯಾಗಿ ಸಲ್ಲಿಸಿರುವ ಕೌಂಟರ್‌ ಅಫಿಡವಿಟ್‌ ((counter-affidavit)ನಲ್ಲಿ, ಇತರ ಇಬ್ಬರು ಚುನಾವಣಾ ಆಯುಕ್ತರ ಆಕ್ಷೇಪಗಳ ನಡುವೆಯೂ ಎಸ್‌ಐಆರ್‌ಗೆ ಸಂಬಂಧಿಸಿದ ನಿರ್ಧಾರಗಳನ್ನು ಸಿಇಸಿ ಏಕಪಕ್ಷೀಯವಾಗಿ ಕೈಗೊಂಡಿದ್ದಾರೆ ಎಂಬ ಆರೋಪವನ್ನು ಆಯೋಗ ನಿರಾಕರಿಸಿದೆ.
ರಾಕೇಶಕುಮಾರ ಸಿಂಗ್‌ ಸಲ್ಲಿಸಿದ್ದ ರಿಟ್‌ ಅರ್ಜಿಗೆ ಪ್ರತಿಯಾಗಿ ಈ ಅಫಿಡವಿಟ್‌ ಸಲ್ಲಿಸಲಾಗಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಿತ್ತು.
ಎಸ್‌ಐಆರ್‌ ಪ್ರಕ್ರಿಯೆಗೆ ಸಂಬಂಧಿಸಿದ 14 ಪ್ರಮುಖ ನಿರ್ಧಾರಗಳನ್ನು, ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದರೂ, ಚುನಾವಣಾ ಆಯೋಗದ ಹೆಸರಿನಲ್ಲಿ ಕೈಗೊಳ್ಳಲಾಗಿದೆ ಎಂದು ಪತ್ರಿಕೆಯೊಂದರಲ್ಲಿ  ಪ್ರಕಟವಾದ ವರದಿಯ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಸಲಾಗಿತ್ತು.
ಈ ಆರೋಪಗಳನ್ನು ತಳ್ಳಿಹಾಕಿರುವ ಚುನಾವಣಾ ಆಯೋಗವು, 2025ರ ಜೂನ್‌ 24, 2025ರ ಅಕ್ಟೋಬರ್‌ 27 ಹಾಗೂ 2026ರ ಮೇ 14ರಂದು ಹೊರಡಿಸಲಾದ ಎಸ್‌ಐಆರ್‌ಗೆ ಸಂಬಂಧಿಸಿದ ಮೂರು ಆದೇಶಗಳೂ ಆಯೋಗದ ಸರ್ವಾನುಮತದ ನಿರ್ಧಾರಗಳಾಗಿವೆ ಎಂದು ತಿಳಿಸಿದೆ. ಉಪ ಚುನಾವಣಾ ಆಯುಕ್ತ ಭಾನು ಪ್ರಕಾಶ ಯೆತೂರು ಸಲ್ಲಿಸಿರುವ ಅಫಿಡವಿಟ್‌ ನಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಇಬ್ಬರು ಚುನಾವಣಾ ಆಯುಕ್ತರು ಸರ್ವಾನುಮತದಿಂದ ಅನುಮೋದನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಅರ್ಜಿದಾರರು ಸಂಪೂರ್ಣವಾಗಿ ಪತ್ರಿಕಾ ವರದಿಯನ್ನೇ ಆಧಾರವಾಗಿಟ್ಟುಕೊಂಡಿದ್ದು, ಅದರಲ್ಲಿರುವ ವಾಸ್ತವಾಂಶಗಳನ್ನು ಪ್ರತಿವಾದಿಗಳೊಂದಿಗೆ ಸ್ವತಂತ್ರವಾಗಿ ಪರಿಶೀಲಿಸಿಲ್ಲ ಎಂದು ಆಯೋಗ ವಾದಿಸಿದೆ. ಹೀಗಾಗಿ, ಈ ಅರ್ಜಿಯು ವಿಚಾರಣೆಗೆ ಯೋಗ್ಯವಲ್ಲ ಎಂದು ಹೇಳಿದೆ. ಅಲ್ಲದೆ, ಆಂತರಿಕ ಟಿಪ್ಪಣಿ ಅಥವಾ ಕಡತಗಳನ್ನು ಮಾಧ್ಯಮಗಳಿಗೆ ತಾನು ಎಂದಿಗೂ ಬಿಡುಗಡೆ ಮಾಡಿಲ್ಲ ಅಥವಾ ಅವುಗಳನ್ನು ಬಿಡುಗಡೆ ಮಾಡಲು ಅನುಮತಿಯನ್ನೂ ನೀಡಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

ಆಂತರಿಕ ಟಿಪ್ಪಣಿಗಳು ಆಯೋಗದ ನಿರ್ಧಾರಗಳಲ್ಲ
ಕಡತಗಳ ವಿಲೇವಾರಿ ಪ್ರಕ್ರಿಯೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಅಥವಾ ಇತರ ಚುನಾವಣಾ ಆಯುಕ್ತರು ದಾಖಲಿಸುವ ಟಿಪ್ಪಣಿಗಳು, ಪ್ರಶ್ನೆಗಳು, ಸಲಹೆಗಳು ಅಥವಾ ಅಭಿಪ್ರಾಯಗಳು ಸ್ವತಃ ಚುನಾವಣಾ ಆಯೋಗದ ನಿರ್ಧಾರಗಳೆಂದು ಪರಿಗಣಿಸಲಾಗುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ವಿವರಿಸಿರುವ ಆಯೋಗ, ಸಾಮಾನ್ಯವಾಗಿ ಕಡತಗಳು ಮೊದಲು ಒಬ್ಬ ಚುನಾವಣಾ ಆಯುಕ್ತರ ಬಳಿ, ನಂತರ ಮತ್ತೊಬ್ಬ ಚುನಾವಣಾ ಆಯುಕ್ತರ ಬಳಿ ಹಾಗೂ ಅಂತಿಮವಾಗಿ ಮುಖ್ಯ ಚುನಾವಣಾ ಆಯುಕ್ತರ ಬಳಿ ಹೋಗುತ್ತವೆ ಎಂದು ತಿಳಿಸಿದೆ.
ಪ್ರಶ್ನಾರ್ಹ ನಿರ್ಧಾರಗಳು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ, 2023ರ ಸೆಕ್ಷನ್‌ 18ರಲ್ಲಿ ನಿಗದಿಪಡಿಸಿರುವ ಕಾನೂನು ಚೌಕಟ್ಟಿಗೆ ಅನುಗುಣವಾಗಿವೆ ಎಂದು ಆಯೋಗ ಹೇಳಿದೆ.
ಈ ಸೆಕ್ಷನ್‌ ಪ್ರಕಾರ, ಸಾಧ್ಯವಾದಷ್ಟು ಮಟ್ಟಿಗೆ ಚುನಾವಣಾ ಆಯೋಗದ ನಿರ್ಧಾರಗಳು ಸರ್ವಾನುಮತದಿಂದ ಆಗಬೇಕು. ಸರ್ವಾನುಮತ ಸಾಧ್ಯವಾಗದಿದ್ದರೆ ಬಹುಮತದ ಆಧಾರದಲ್ಲಿ ನಿರ್ಧಾರ ಕೈಗೊಳ್ಳಬೇಕು.

ಪ್ರಮುಖ ಸುದ್ದಿ :-   ಕೊಲೆ ಪ್ರಕರಣದಿಂದ ಪಾರಾಗಲು ಎಐ ಬಳಸಿ ತನ್ನದೇ ಸಾವಿನ ನಾಟಕ ; ಮೇಕೆ ಅಂತ್ಯಕ್ರಿಯೆ, ನಕಲಿ ಡೆತ್‌ ಸರ್ಟಿಫಿಕೆಟ್‌ ಸಲ್ಲಿಕೆ ; ಆದ್ರೂ ಸಿಕ್ಕಿಬಿದ್ದ !

ಫಾರಂ 6ಕ್ಕೆ ತಿದ್ದುಪಡಿ ಮಾಡಿಲ್ಲ
ಎಸ್‌ಐಆರ್‌ ಆದೇಶಗಳ ಮೂಲಕ ಫಾರಂ 6ಕ್ಕೆ ತಿದ್ದುಪಡಿ ಮಾಡಲಾಗಿದೆ ಎಂಬ ಆರೋಪವನ್ನೂ ಚುನಾವಣಾ ಆಯೋಗ ನಿರಾಕರಿಸಿದೆ. ಮತದಾರರ ನೋಂದಣಿ ನಿಯಮಗಳು, 1960ರ ಅಡಿಯಲ್ಲಿ ನಿಗದಿಪಡಿಸಲಾದ ಫಾರಂ 6ಕ್ಕೆ ತಿದ್ದುಪಡಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದು ಆಯೋಗ ತಿಳಿಸಿದೆ. ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅರ್ಜಿದಾರರಿಂದ ಪಡೆಯಲಾಗುತ್ತಿರುವ ಘೋಷಣಾ ಪತ್ರವು (Declaration) ಪ್ರತ್ಯೇಕ ದಾಖಲೆಯಾಗಿದ್ದು, ಅದನ್ನು ಫಾರಂ 6ಕ್ಕೆ ತಿದ್ದುಪಡಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಆಯೋಗ ವಿವರಿಸಿದೆ.

ಆದರೆ, ಆನ್‌ಲೈನ್‌ ಅರ್ಜಿ ಸಲ್ಲಿಕೆ ವ್ಯವಸ್ಥೆಯಲ್ಲಿ ಘೋಷಣಾ ಪತ್ರವನ್ನು ಪ್ರದರ್ಶಿಸಿದ ರೀತಿಯಿಂದಾಗಿ ಫಾರಂ 6ಕ್ಕೆ ತಿದ್ದುಪಡಿ ಮಾಡಲಾಗಿದೆ ಎಂಬ ಅಭಿಪ್ರಾಯ ಮೂಡಲು ಅವಕಾಶವಿತ್ತು ಎಂಬುದನ್ನು ಚುನಾವಣಾ ಆಯೋಗ ಒಪ್ಪಿಕೊಂಡಿದೆ.
ಈ ಗೊಂದಲವನ್ನು ನಿವಾರಿಸಲು, 2026ರ ಅಕ್ಟೋಬರ್‌ 21ರಿಂದ ಆನ್‌ಲೈನ್‌ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಎರಡು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಲಾಗುವುದು ಎಂದು ಆಯೋಗ ತಿಳಿಸಿದೆ. ಭೌತಿಕವಾಗಿ ಅರ್ಜಿ ಸಲ್ಲಿಸುವಾಗ ಅನುಸರಿಸುವ ವಿಧಾನಕ್ಕೆ ಅನುಗುಣವಾಗಿ, ಒಂದು ವಿಭಾಗದಲ್ಲಿ ಫಾರಂ 6 ಮತ್ತು ಮತ್ತೊಂದು ವಿಭಾಗದಲ್ಲಿ ಎಸ್‌ಐಆರ್‌ ಘೋಷಣಾ ಪತ್ರ ಇರಲಿದೆ ಎಂದು ಸ್ಪಷ್ಟಪಡಿಸಿದೆ.
ಹಿಂದಿನ ಮತದಾರರ ಪಟ್ಟಿಗಳಲ್ಲಿನ ದಾಖಲೆಗಳೊಂದಿಗೆ ಹೊಸ ಅರ್ಜಿದಾರರ ವಿವರಗಳನ್ನು ತಾಳೆ ಹಾಕಲು ಅನುಕೂಲವಾಗುವಂತೆ ಘೋಷಣಾ ಪತ್ರವನ್ನು ಪರಿಚಯಿಸಲಾಗಿದೆ ಎಂದು ಆಯೋಗ ಹೇಳಿದೆ. ಈ ಬದಲಾವಣೆಗಳು ಶಾಸನಬದ್ಧ ನಮೂನೆಗೆ ತಿದ್ದುಪಡಿ ಮಾಡಿದಂತಾಗುವುದಿಲ್ಲ ಎಂದೂ ಪ್ರತಿಪಾದಿಸಿದೆ.
ಹಿಂದಿನ ಪಟ್ಟಿಗಳ ಜೊತೆಗೆ ಹೆಸರುಗಳನ್ನು ತಾಳೆಯಾಗದ ಮತದಾರರು ವಿಚಾರಣೆಗೆ ಹಾಜರಾಗಬೇಕಿಲ್ಲ
ಎಸ್‌ಐಆರ್‌ ಪ್ರಕ್ರಿಯೆಯನ್ನು ಸುಗಮಗೊಳಿಸಲು ಹಾಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವುದಕ್ಕೆ ಅನುಕೂಲ ಕಲ್ಪಿಸಲು ಕೈಗೊಂಡಿರುವ ನಿರ್ಧಾರಗಳ ಬಗ್ಗೆಯೂ ಚುನಾವಣಾ ಆಯೋಗ ವಿವರಣೆ ನೀಡಿದೆ.

ಪ್ರಮುಖ ಸುದ್ದಿ :-   ₹100 ಕೋಟಿ ಶಾಲಾ ಭ್ರಷ್ಟಾಚಾರ ಪ್ರಕರಣ: ತಮಿಳುನಾಡಿನ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ ಬಂಧನ

ಹಿಂದಿನ ಮತದಾರರ ಪಟ್ಟಿಗಳ ಜೊತೆಗೆ ತಮ್ಮ ಹೆಸರುಗಳನ್ನು ತಾಳೆ ಹಾಕಲು ಸಾಧ್ಯವಾಗದ ಮತದಾರರು ಸಾಮಾನ್ಯವಾಗಿ ಖುದ್ದಾಗಿ ವಿಚಾರಣೆಗೆ ಹಾಜರಾಗುವ ಅಗತ್ಯವಿರುವುದಿಲ್ಲ ಎಂದು ಆಯೋಗ ತಿಳಿಸಿದೆ. ಅಂತಹ ಮತದಾರರಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಬೂತ್‌ ಮಟ್ಟದ ಅಧಿಕಾರಿಗಳು (BLOs) ಅವರ ಮನೆಗಳಿಂದಲೇ ಸಂಗ್ರಹಿಸಿ, ಚುನಾವಣಾ ನೋಂದಣಾಧಿಕಾರಿ (ERO) ಪರಿಶೀಲನೆಗೆ ಅನುಕೂಲವಾಗುವಂತೆ ಇಸಿಐನೆಟ್‌ (ECINet) ವೇದಿಕೆಯಲ್ಲಿ ಅಪ್‌ಲೋಡ್‌ ಮಾಡಲಿದ್ದಾರೆ ಎಂದು ಹೇಳಿದೆ. ಅಪರೂಪದ ಸಂದರ್ಭಗಳಲ್ಲಿ ಮಾತ್ರ ವಿಚಾರಣೆ ಅಗತ್ಯವಾಗಲಿದ್ದು, ಸಾಧ್ಯವಾದಷ್ಟು ಅಂತಹ ವಿಚಾರಣೆಗಳನ್ನು ಆನ್‌ಲೈನ್‌ ಮೂಲಕ ನಡೆಸಬೇಕು ಎಂದು ಆಯೋಗ ತಿಳಿಸಿದೆ.
ಇಸಿಐನೆಟ್‌ ವ್ಯವಸ್ಥೆಯ ಕುರಿತು ಸ್ಪಷ್ಟನೆ ನೀಡಿರುವ ಆಯೋಗ, ಸಕ್ಷಮ ಚುನಾವಣಾ ನೋಂದಣಾಧಿಕಾರಿ ಹೊರಡಿಸಿದ ಆದೇಶದ ಆಧಾರವಿಲ್ಲದೆ ಮತದಾರರ ಪಟ್ಟಿಗೆ ಯಾವುದೇ ಹೆಸರನ್ನು ಸೇರಿಸಲು ಅಥವಾ ಪಟ್ಟಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.
ಅಲ್ಲದೆ, ಅನ್ವಯವಾಗುವ ನಿಯಮಗಳು ಹಾಗೂ ಅವಶ್ಯಕತೆಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಮತ್ತು ಇಸಿಐನೆಟ್‌ ಪ್ಲಾಟ್‌ಫಾರ್ಮ್‌ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಮದ್ರಾಸ್‌ ಐಐಟಿ (IIT Madras) ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science — IISc) ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ವಿಚಾರಣೆಗೆ ಯೋಗ್ಯವಲ್ಲ
ಜ್ಞಾನೇಶಕುಮಾರ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಕಾರ್ಯನಿರ್ವಹಿಸುವುದನ್ನು ತಡೆಯಬೇಕೆಂದು ಕೋರಿರುವ ಅರ್ಜಿಯು ವಿಚಾರಣೆಗೆ ಯೋಗ್ಯವಲ್ಲ ಎಂದು ಚುನಾವಣಾ ಆಯೋಗ ವಾದಿಸಿದೆ.
ಭಾರತದ ಸಂವಿಧಾನದ 324(5)ನೇ ವಿಧಿಯನ್ನು ಉಲ್ಲೇಖಿಸಿರುವ ಆಯೋಗ, ಮುಖ್ಯ ಚುನಾವಣಾ ಆಯುಕ್ತರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯನ್ನು ವಜಾಗೊಳಿಸಲು ಅನುಸರಿಸುವ ಅದೇ ವಿಧಾನ ಮತ್ತು ಅದೇ ಆಧಾರಗಳ ಮೇಲೆ ಮಾತ್ರ ಹುದ್ದೆಯಿಂದ ತೆಗೆದುಹಾಕಲು ಸಾಧ್ಯ ಎಂದು ತಿಳಿಸಿದೆ.
ಎಲೆಕ್ಟ್ರಾನಿಕ್‌ ಮತಯಂತ್ರಗಳ (Electronic Voting Machines — EVMs) ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಪದೇಪದೆ ಸಲ್ಲಿಸಲಾಗುತ್ತಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಈಗಾಗಲೇ ಪರಿಶೀಲಿಸಿದೆ ಎಂದೂ ಚುನಾವಣಾ ಆಯೋಗ ಹೇಳಿದೆ.
ದಸರಾ ರಜೆ ಮಧ್ಯೆ ಬಂದಿರುವುದರಿಂದ ಸದ್ಯಕ್ಕೆ ಸಂಕ್ಷಿಪ್ತ ಪ್ರತಿಕ್ರಿಯೆಯನ್ನು ಮಾತ್ರ ಸಲ್ಲಿಸುತ್ತಿರುವುದಾಗಿ ತಿಳಿಸಿರುವ ಆಯೋಗ, ಅರ್ಜಿಯಲ್ಲಿನ ಪ್ರತಿಯೊಂದು ಅಂಶಕ್ಕೂ ಪ್ರತ್ಯೇಕವಾಗಿ ಉತ್ತರಿಸುವ ವಿವರವಾದ ಅಫಿಡವಿಟ್‌ ಸಲ್ಲಿಸುವ ಹಕ್ಕನ್ನು ಕಾಯ್ದಿರಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement