ವಿಧಾನ ಪರಿಷತ್ ಚುನಾವಣೆ; 4 ಕ್ಷೇತ್ರಗಳಲ್ಲಿ ಎರಡರಲ್ಲಿ ಎನ್‌ಡಿಎ ಗೆಲುವು, ಉಳಿದ ಎರಡರಲ್ಲೂ ಗೆಲುವು ಬಹುತೇಕ ಖಚಿತ

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣೆಯಲ್ಲಿ  ಬಿಜೆಪಿ–ಜೆಡಿಎಸ್‌ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮೇಲುಗೈ ಸಾಧಿಸಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌–ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ ಅವರು ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ  ಪುಟ್ಟಣ್ಣ ಅವರನ್ನು 908 ಮತಗಳ ಅಂತರದಿಂದ ಸೋಲಿಸಿ ಗೆಲುವು ದಾಖಲಿಸಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್‌ ಜಿ. ನಮೋಶಿ ಅವರು ಕಾಂಗ್ರೆಸ್‌ನ ಶರಣಪ್ಪ ಮಟ್ಟೂರ ವಿರುದ್ಧ 3,296 ಮತಗಳ ಅಂತರದಿಂದ ಜಯಗಳಿಸಿ ಐದನೇ ಬಾರಿಗೆ ವಿಧಾನ ಪರಿಷತ್‌ ಪ್ರವೇಶಿಸಿದ್ದಾರೆ. ಉಳಿದಂತೆ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಎಸ್‌.ವಿ.ಸಂಕನೂರ ಗೆಲುವಿನ ಸನಿಹದಲ್ಲಿದ್ದು, ಆಗ್ನೇಯ ಕ್ಷೇತ್ರದಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿ ಕೆ.ಎಂ. ಸುರೇಶ ಅವರು ಮುನ್ನಡೆ ಸಾಧಿಸಿದ್ದಾರೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ ಅವರು ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಹಾಗೂ ಹಲವು ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಪುಟ್ಟಣ್ಣ ಅವರನ್ನು ಸೋಲಿಸುವ ಮೂಲಕ ಗಮನ ಸೆಳೆದಿದ್ದಾರೆ.  ಮತ ಎಣಿಕೆ ಕೇಂದ್ರದಲ್ಲಿ ಅಂತಿಮ ಸುತ್ತಿನ ಎಣಿಕೆ ಪೂರ್ಣಗೊಂಡ ಬಳಿಕ ಚುನಾವಣಾಧಿಕಾರಿಗಳು ರಂಗನಾಥಅವರ ಗೆಲುವನ್ನು ಅಧಿಕೃತವಾಗಿ ಘೋಷಿಸಿದರು.
ಕ್ಷೇತ್ರದಲ್ಲಿ ಒಟ್ಟು 27,405 ಮತದಾರರಿದ್ದು, 22,468 ಮತಗಳು ಚಲಾವಣೆಯಾಗಿದ್ದವು. ಇವುಗಳಲ್ಲಿ 20,611 ಮತಗಳು ಸಿಂಧುವಾಗಿದ್ದು, 1,857 ಮತಗಳು ಅಸಿಂಧುವಾಗಿವೆ. ಜೆಡಿಎಸ್‌ ಅಭ್ಯರ್ಥಿ ಎ.ಪಿ. ರಂಗನಾಥ 10,810 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಅವರಿಗೆ 9,902 ಮತಗಳು ಲಭಿಸಿವೆ. ಈ ಮೂಲಕ ರಂಗನಾಥ 908 ಮತಗಳಿಂದ ಜಯಗಳಿಸಿದ್ದಾರೆ.
ಇತರ ಅಭ್ಯರ್ಥಿಗಳ ಪೈಕಿ ಕೆಆರ್‌ಎಸ್‌ ಪಕ್ಷದ ಜಿ.ಎಸ್‌. ಹೆಬ್ಬೂರು 94 ಮತಗಳನ್ನು ಪಡೆದರೆ, ಪಕ್ಷೇತರ ಅಭ್ಯರ್ಥಿ ಉಮೇಶ್‌ 215 ಮತಗಳನ್ನು ಗಳಿಸಿದ್ದಾರೆ. ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ನಾಗರಾಜು 11 ಮತಗಳನ್ನು ಪಡೆದಿದ್ದು, ಲಕ್ಷ್ಮಣ ಸ್ವಾಮಿ ಅವರಿಗೆ 24 ಮತಗಳು ಲಭಿಸಿವೆ.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ನಮೋಶಿಗೆ ಐದನೇ ಗೆಲುವು
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್‌ ಜಿ. ನಮೋಶಿ ಅವರು ಭರ್ಜರಿ ಜಯಗಳಿಸಿದ್ದಾರೆ. ಅವರು ಕಾಂಗ್ರೆಸ್‌ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರನ್ನು 3,296 ಮತಗಳ ಅಂತರದಿಂದ ಸೋಲಿಸಿ ಈ ಕ್ಷೇತ್ರದಿಂದ ಐದನೇ ಬಾರಿಗೆ ವಿಧಾನ ಪರಿಷತ್‌ ಪ್ರವೇಶಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕಲಬುರಗಿ ವಿಶ್ವವಿದ್ಯಾಲಯದಲ್ಲಿ ನಡೆದ ಮತ ಎಣಿಕೆಯಲ್ಲಿ ನಮೋಶಿ ಅವರು ಮೊದಲ ಪ್ರಾಶಸ್ತ್ಯದ ಮತಗಳಲ್ಲಿಯೇ ಗೆಲುವಿಗೆ ಅಗತ್ಯವಿದ್ದ ಕೋಟಾ ತಲುಪಿದರು. ಬಿಜೆಪಿ ಅಭ್ಯರ್ಥಿ ಶಶೀಲ್‌ ಜಿ. ನಮೋಶಿ ಅವರಿಗೆ 15,596 ಮತಗಳು ಲಭಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರು 12,299 ಮತಗಳನ್ನು ಪಡೆದರು. ನಮೋಶಿ ಅವರು 3,296 ಮತಗಳಿಂದ ಜಯಗಳಿಸಿದ್ದಾರೆ.
ಉಳಿದ ಎರಡು ಕ್ಷೇತ್ರಗಳಲ್ಲಿಯೂ ಎನ್‌ಡಿಎ ಮುನ್ನಡೆ
 ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವಿನ ಸನಿಹದಲ್ಲಿದ್ದರೆ, ಮೂರು ಸುತ್ತುಗಳಲ್ಲಿ ಎಣಿಕೆಯಾದ ಒಟ್ಟು 42001 ಮತಗಳಲ್ಲಿ ಸಂಕನೂರ ಎಸ್.ವಿ ಅವರು 18811 ಮತಗಳನ್ನು ಮತ್ತು ಮೋಹನ್ ಲಿಂಬಿಕಾಯಿ ಅವರು 9091 ಮತಗಳನ್ನು ಪಡೆದುಕೊಂಡಿದ್ದು, ಎಸ್.ವಿ. ಸಂಕನೂರ ಅವರು 9720 ಮತಗಳಿಂದ ಮುನ್ನಡೆ ಸಾಧಿಸಿದ್ದು, ಘೋಷಣೆಯೊಂದೇ ಬಾಕಿ ಇದೆ..  ಆಗ್ನೇಯ ಕ್ಷೇತ್ರದಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿ ಮುನ್ನಡೆ ಕಾಯ್ದುಕೊಂಡಿದ್ದಾರೆ. 3 ನೇ ಸುತ್ತಿನ ಅಂತ್ಯಕ್ಕೆ ಅವರು  2,300 ಮತಗಳ   ಮುನ್ನಡೆ ಪಡೆದಿದ್ದು, ಅವರ ಗೆಲುವು ಸಹ ಬಹುತೇಕ ನಿಚ್ಚಳವಾಗಿದೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement