ಬೆಂಗಳೂರು: ಕೆಎಂಎಫ್ (KMF) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪರಿಷ್ಕೃತ ದರ ನವೆಂಬರ್ 1ರಿಂದ ಜಾರಿಗೆ ಬರಲಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಹಾಲಿನ ದರ ಹೆಚ್ಚಿಸುವಂತೆ ರಾಜ್ಯದ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದವು. ಕೆಎಂಎಫ್ ಕಳೆದ ತಿಂಗಳೇ ಹಾಲಿನ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಸರ್ಕಾರ ದರ ಏರಿಕೆಗೆ ಸಮ್ಮತಿ ಸೂಚಿಸಿದೆ.
ಇದು ಸರ್ವಾನುಮತದಿಂದ ಕೈಗೊಂಡ ತೀರ್ಮಾನ ಆಗಿದೆ. ಹಾಲಿನ ದರ ಏರಿಕೆಯಿಂದ ಪ್ರತಿ ಲೀಟರ್‌ಗೆ ಹೆಚ್ಚುವರಿಯಾಗಿ ಸಂಗ್ರಹವಾಗುವ 8 ರೂಪಾಯಿಗಳಲ್ಲಿ 7 ರೂಪಾಯಿಯನ್ನು ಹಾಲು ಉತ್ಪಾದಕ ರೈತರಿಗೆ ನೀಡಲು ನಿರ್ಧರಿಸಲಾಗಿದೆ. ಉಳಿದ ಒಂದು ರೂಪಾಯಿ ಹಾಲು ಒಕ್ಕೂಟಗಳಿಗೆ ಸಿಗಲಿದೆ. ಇನ್ಮುಂದೆ ರೈತರಿಗೆ ಪ್ರತಿ ಲೀಟರಿಗೆ 35 ರೂ. ಬದಲು 42 ರೂ. ಸಿಗಲಿದೆ. ಜೊತೆಗೆ ಪ್ರೋತ್ಸಾಹ ಧನ 5 ರೂ. ಸೇರಿ ರೈತರಿಗೆ ಒಟ್ಟು 47 ರೂ. ಪ್ರತಿ ಲೀಟರ್ ಹಾಲಿಗೆ ಸಿಗಲಿದೆ ಎಂದು ಸಚಿವ ಕೃಷ್ಣಭೈರೇ ಗೌಡ ಮಾಹಿತಿ ನೀಡಿದರು.
ಪ್ರಸ್ತುತ ನಂದಿನಿ ಹಾಲಿನ ದರ ಎಷ್ಟಿದೆ?
ಪ್ರಸ್ತುತ ಅರ್ಧ ಲೀಟರ್ ಟೋನ್ಡ್ ಹಾಲಿನ ದರ 24 ರೂಪಾಯಿ ಇದ್ದರೆ, ಒಂದು ಲೀಟರ್‌ಗೆ 46 ರೂಪಾಯಿ ಇದೆ. ಶುಭಂ ಹಾಲಿನ ಅರ್ಧ ಲೀಟರ್ ಪ್ಯಾಕೆಟ್‌ಗೆ 26 ರೂಪಾಯಿ ಹಾಗೂ ಒಂದು ಲೀಟರ್‌ಗೆ 52 ರೂಪಾಯಿ ದರವಿದೆ. ಸಮೃದ್ಧಿ ಹಾಲಿನ ದರ ಅರ್ಧ ಲೀಟರ್‌ಗೆ 28 ರೂಪಾಯಿ ಮತ್ತು ಒಂದು ಲೀಟರ್‌ಗೆ 56 ರೂಪಾಯಿ ಇದೆ. ಹೋಮೋಜಿನೈಸ್ಡ್ ಹಸುವಿನ ಹಾಲಿನ ದರ ಅರ್ಧ ಲೀಟರ್‌ಗೆ 26 ರೂಪಾಯಿ ಹಾಗೂ ಒಂದು ಲೀಟರ್‌ಗೆ 52 ರೂಪಾಯಿ ಇದೆ. ಸ್ಪೆಷಲ್ ಹಾಲಿನ ಅರ್ಧ ಲೀಟರ್‌ಗೆ 27 ರೂಪಾಯಿ ಮತ್ತು ಒಂದು ಲೀಟರ್‌ಗೆ 54 ರೂಪಾಯಿ ದರವಿದೆ. ಗುಡ್‌ಲೈಫ್ ಹಾಲಿನ ಅರ್ಧ ಲೀಟರ್‌ಗೆ 36 ರೂಪಾಯಿ ಹಾಗೂ ಒಂದು ಲೀಟರ್‌ಗೆ 70 ರೂಪಾಯಿ ಇದೆ. ನಂದಿನಿ ಮೊಸರಿನ ಅರ್ಧ ಲೀಟರ್‌ಗೆ 26 ರೂಪಾಯಿ ಮತ್ತು ಒಂದು ಲೀಟರ್‌ಗೆ 50 ರೂಪಾಯಿ ದರವಿದೆ. ನಂದಿನಿ ಶುದ್ಧ ತುಪ್ಪದ ಅರ್ಧ ಲೀಟರ್‌ಗೆ 340ರಿಂದ 350 ರೂಪಾಯಿ ಹಾಗೂ ಒಂದು ಲೀಟರ್‌ಗೆ 680ರಿಂದ 700 ರೂಪಾಯಿ ಇದೆ.
ಹೊಸ ದರ ಎಷ್ಟಾಗಬಹುದು?
ದರ ಏರಿಕೆಯ ಬಳಿಕ ಟೋನ್ಡ್ ಹಾಲಿನ (ನೀಲಿ ಪ್ಯಾಕೆಟ್) ಒಂದು ಲೀಟರ್‌ಗೆ 46 ರೂಪಾಯಿಯಿಂದ 54 ರೂಪಾಯಿಗೆ, ಶುಭಂ ಹಾಲಿನ (ಕಿತ್ತಳೆ ಪ್ಯಾಕೆಟ್) ದರ 52 ರೂಪಾಯಿಯಿಂದ 60 ರೂಪಾಯಿಗೆ ಹಾಗೂ ಸಮೃದ್ಧಿ ಫುಲ್ ಕ್ರೀಮ್ ಹಾಲಿನ ದರ 56 ರೂಪಾಯಿಯಿಂದ 64 ರೂಪಾಯಿಗೆ ಏರಿಕೆಯಾಗುವ ನಿರೀಕ್ಷೆಯಿದೆ.
ಕೆಎಂಎಫ್ ಅಧಿಕೃತವಾಗಿ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಬೇಕಿದೆ. ದರಪಟ್ಟಿ ಪ್ರಕಟವಾದ ಬಳಿಕ ವಿವಿಧ ಹಾಲಿನ ಉತ್ಪನ್ನಗಳ ಪರಿಷ್ಕೃತ ಬೆಲೆಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ