2011ರ ಕೆಎಎಸ್‌ ನೇಮಕಾತಿ ಪ್ರಕರಣ: ಕರ್ನಾಟಕದ 2022ರ ಕಾಯ್ದೆಯನ್ನೇ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳ ಹಿನ್ನೆಲೆಯಲ್ಲಿ ಈ ಹಿಂದೆ ರದ್ದುಗೊಳಿಸಲಾಗಿದ್ದ ಕರ್ನಾಟಕದ 2011ನೇ ಬ್ಯಾಚ್‌ನ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ  ನೇಮಕಾತಿಗಳಿಗೆ ಮಾನ್ಯತೆ ನೀಡಿದ್ದ ಕರ್ನಾಟಕ ನಾಗರಿಕ ಸೇವೆಗಳ (2011ನೇ ಬ್ಯಾಚ್‌ನ ಗೆಜೆಟೆಡ್ ಪ್ರೊಬೇಷನರಿಗಳ ಆಯ್ಕೆ ಮತ್ತು ನೇಮಕಾತಿ ಮಾನ್ಯಗೊಳಿಸುವಿಕೆ) ಕಾಯ್ದೆ, 2022 ಅನ್ನು ಸುಪ್ರೀಂ ಕೋರ್ಟ್ ಗುರುವಾರ ಅಸಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿದೆ. ನ್ಯಾಯಾಲಯಗಳೇ ನೇಮಕಾತಿ ರದ್ದತಿ ನಿರ್ಧಾರವನ್ನು ಎತ್ತಿಹಿಡಿದ ಬಳಿಕ, ಆ ನಿರ್ಧಾರವನ್ನು ಶಾಸನದ ಮೂಲಕ ಬದಲಿಸುವ ಅಧಿಕಾರ ರಾಜ್ಯದ ಶಾಸಕಾಂಗಕ್ಕೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರರಿದ್ದ ನ್ಯಾಯಪೀಠವು, 2022ರ ಕಾಯ್ದೆಯನ್ನು ರದ್ದುಗೊಳಿಸಿದ ಬೆನ್ನಲ್ಲೇ, ಅಕ್ರಮಗಳಿಂದ ಕೂಡಿದ್ದ ನೇಮಕಾತಿ ಪ್ರಕ್ರಿಯೆಯಡಿ ಮಾಡಲಾಗಿದ್ದ ನೇಮಕಾತಿಗಳೂ ಅಂತ್ಯಗೊಳ್ಳಲಿವೆ ಎಂದು ಹೇಳಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ. ಈ ಮೂಲಕ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳ ಹಿನ್ನೆಲೆಯಲ್ಲಿ ರದ್ದಾಗಿದ್ದ  ಅಭ್ಯರ್ಥಿಗಳ ನೇಮಕಾತಿಗಳಿಗೆ ಕಾನೂನಿನ ಮೂಲಕ ಮರುಜೀವ ನೀಡಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಹಿನ್ನಡೆಯಾಗಿದೆ.

2022ರ ಕಾಯಿದೆಯನ್ನು ರದ್ದುಪಡಿಸಿದ ನ್ಯಾಯಾಲಯವು, ಅದರ ಆಧಾರದಲ್ಲಿ ಮಾಡಲಾಗಿದ್ದ ನೇಮಕಾತಿಗಳೂ ರದ್ದಾಗಲಿವೆ ಎಂದು ಹೇಳಿದೆ. “ಸಂಬಂಧಪಟ್ಟ ಶಾಸನವು ಅಸಂವಿಧಾನಿಕವಾಗಿದೆ ಎಂಬುದರ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ” ಎಂದು ಪೀಠ ಹೇಳಿದೆ.
ಶ್ರೀನಿವಾಸ ಟಿ. ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾಯಾಲಯವು, ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ಅರ್ಜಿಗಳನ್ನು ನಿರ್ವಹಿಸಿದ ರೀತಿಯ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
2011ರ ನವೆಂಬರ್‌ 3ರಂದು ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಗ್ರೂಪ್‌ ಎ ಮತ್ತು ಬಿ ವೃಂದದ 362 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆದಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಅಭ್ಯರ್ಥಿಗಳು ಮತ್ತು ಆಯೋಗದ ಸದಸ್ಯರ ನಡುವಿನ ಸಂವಹನ, ಅಭ್ಯರ್ಥಿಗಳ ವೈಯಕ್ತಿಕ ಸಾಮರ್ಥ್ಯವನ್ನು ವಸ್ತುನಿಷ್ಠವಾಗಿ ಮೌಲ್ಯಮಾಪನ ಮಾಡದೆ ಹಲವರಿಗೆ ಒಂದೇ ರೀತಿಯ ಸಂದರ್ಶನ ಅಂಕಗಳನ್ನು ನೀಡಿದ್ದು ಹಾಗೂ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಡಿಜಿಟಲ್‌ ವಿಡಿಯೊ ರೆಕಾರ್ಡರ್‌ ಬದಲಾಯಿಸಿದ ಆರೋಪಗಳು ತನಿಖೆಯಲ್ಲಿ ದಾಖಲಾಗಿದ್ದವು.

ಪ್ರಮುಖ ಸುದ್ದಿ :-   ವಿಧಾನ ಪರಿಷತ್ ಚುನಾವಣೆ : ಕರ್ನಾಟಕದಲ್ಲಿ ಅಧಿಕಾರದಲ್ಲಿದ್ರೂ ಶೂನ್ಯ ಸಂಪಾದನೆ ; ಕಾಂಗ್ರೆಸ್‌ಗೆ ಮುಖಭಂಗ

ನೇಮಕಾತಿ ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಆರಂಭದಲ್ಲಿ ರದ್ದುಗೊಳಿಸಿತ್ತು. ಆದರೆ, ಹೈಕೋರ್ಟ್‌ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿತ್ತು. ಬಳಿಕ ನೇಮಕಾತಿ ಪ್ರಕ್ರಿಯೆಯನ್ನು ಲಿಖಿತ ಪರೀಕ್ಷೆಯ ಫಲಿತಾಂಶದ ಹಂತದಿಂದ ಮುಂದುವರಿಸುವ ಪ್ರಯತ್ನವೂ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿನ ಗಂಭೀರ ಅಕ್ರಮಗಳ ಹಿನ್ನೆಲೆಯಲ್ಲಿ ವಿಫಲವಾಗಿತ್ತು.
ಇದರ ಹೊರತಾಗಿಯೂ, ರಾಜ್ಯ ಸರ್ಕಾರವು 2022ರಲ್ಲಿ ಹೊಸ ಕಾಯಿದೆ ಜಾರಿಗೊಳಿಸಿ ನೇಮಕಾತಿ ಪ್ರಕ್ರಿಯೆಯನ್ನು ಪುನರುಜ್ಜೀವನಗೊಳಿಸಿತ್ತು. ಈ ಕಾಯಿದೆಯಡಿ  ಅಭ್ಯರ್ಥಿಗಳಿಗೆ ನೇಮಕಾತಿ ನೀಡಲಾಗಿತ್ತು.

2022ರ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿತ್ತು. ಈ ಆದೇಶವನ್ನು ಆಧರಿಸಿ ಕೆಎಟಿಯು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದ ವಿಫಲ ಅಭ್ಯರ್ಥಿಗಳಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತ್ತು. ನಂತರ ಕೆಎಟಿಯ ಆದೇಶವನ್ನು ಪ್ರಶ್ನಿಸಿದ ಅರ್ಜಿಯನ್ನೂ ಹೈಕೋರ್ಟ್‌ ತಿರಸ್ಕರಿಸಿತ್ತು.
ಈ ಬೆಳವಣಿಗೆಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್‌, ಪಿಐಎಲ್‌ ಸಲ್ಲಿಸಿದ್ದ ವ್ಯಕ್ತಿ ನಂತರದ ಕಾನೂನು ಸವಾಲನ್ನು ಸರಿಯಾಗಿ ಮುಂದುವರಿಸದಿರುವ ಬಗ್ಗೆ ಪ್ರಶ್ನಿಸಿತು. ಸಂಬಂಧವಿಲ್ಲದ ವ್ಯಕ್ತಿಯೊಬ್ಬರು ಕಾನೂನುಬದ್ಧ ಸವಾಲನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿರುವುದನ್ನು ವಿಚಾರಣಾ ಪ್ರಕ್ರಿಯೆ ತೋರಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರು ನ್ಯಾಯಾಲಯದ ಅನುಮತಿಯಿಲ್ಲದೆ ತಮಗೆ ಬೇಕಾದಂತೆ ಅರ್ಜಿಯನ್ನು ಹಿಂಪಡೆಯುವ ಹಕ್ಕು ಹೊಂದಿರುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ. ಅಲ್ಲದೆ, ಮೂಲ ಅರ್ಜಿದಾರರು ಭಾಗವಹಿಸದಿದ್ದರೂ ಗಂಭೀರ ಸಾಂವಿಧಾನಿಕ ಪ್ರಶ್ನೆಯನ್ನು ಪರಿಶೀಲಿಸುವ ಅಧಿಕಾರ ನ್ಯಾಯಾಲಯಕ್ಕಿದೆ ಎಂದು ಸ್ಪಷ್ಟಪಡಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಎಸ್‌ಐಆರ್‌ ಸಮರ್ಪಕವಾಗಿ ನಡೆದಿದೆ ಎಂದ ಸಚಿವ ಸತೀಶ ಜಾರಕಿಹೊಳಿ ; ಕಾಂಗ್ರೆಸ್‌ ನಿಲುವಿಗೆ ವ್ಯತಿರಿಕ್ತ ಹೇಳಿಕೆ

ವರದಿ ಪ್ರಕಾರ, ನೇಮಕಾತಿ ಪಡೆದ ಅಭ್ಯರ್ಥಿಗಳ ಉದ್ಯೋಗವನ್ನು ಅನುಕಂಪದ ಆಧಾರದಲ್ಲಿ ರಕ್ಷಿಸಬೇಕು ಎಂಬ ವಾದವನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಇದು ಕೇವಲ ಕಾರ್ಯವಿಧಾನದ ಲೋಪದಿಂದ ರದ್ದಾದ ನೇಮಕಾತಿಯಲ್ಲ; ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದಿಂದ ಕಳಂಕಿತವಾಗಿದ್ದ ನೇಮಕಾತಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
“ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಅನುಕಂಪದ ಆಧಾರದ ಮೇಲೆ ಪರಿಹಾರ ನೀಡಲಾಗದು. ಸಾಂವಿಧಾನಿಕ ನ್ಯಾಯಾಲಯಗಳು ಕಳಂಕಿತ ಎಂದು ಘೋಷಿಸಿದ ನೇಮಕಾತಿಯ ಆಧಾರದ ಮೇಲೆ ಮತ್ತು ಅಸ್ತಿತ್ವದಲ್ಲೇ ಇರದಂತಿರುವ 2022ರ ಕಾಯಿದೆಯ ಮೂಲಕ ನೇಮಕಾತಿ ಮಾಡಲಾಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಕ್ರಮಗಳಲ್ಲಿ ಭಾಗಿಯಾಗದೇ ಇರುವ ಅಭ್ಯರ್ಥಿಗಳು ಹಾಗೂ ನ್ಯಾಯಾಲಯ ಮತ್ತು ಕೆಎಟಿಯನ್ನು ಸಂಪರ್ಕಿಸಿದ್ದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡುವಂತೆ ಆದೇಶಿಸಿ ಭಾಗಶಃ ಪರಿಹಾರ ಒದಗಿಸಿದೆ.
ಕರ್ನಾಟಕ ಸರ್ಕಾರದ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿದ್ದರು. ತಮ್ಮ ನೇಮಕಾತಿಗಳನ್ನು ರಕ್ಷಿಸುವಂತೆ ಆಯ್ಕೆಯಾಗಿದ್ದ ಅಭ್ಯರ್ಥಿಗಳ ಪರ ಹಿರಿಯ ವಕೀಲರಾದ ಸಿ ಎ ಸುಂದರಂ ಮತ್ತು ಆನಂದ ಸಂಜಯ ಎಂ ನುಲಿ ವಾದಿಸಿದ್ದರು. ಮೇಲ್ಮನವಿದಾರರ ಪರ ಹಿರಿಯ ವಕೀಲ ಶ್ಯಾಂ ದಿವಾನ್‌ ಹಾಜರಾಗಿದ್ದರು.

2011ರಲ್ಲಿ ಕೆಪಿಎಸ್‌ಸಿ ಮೂಲಕ ನಡೆದ ಈ ನೇಮಕಾತಿಯಲ್ಲಿ ಸಂದರ್ಶನ ಮತ್ತು ಅಂಕ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ಹಾಗೂ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿತ್ತು. ಈ ವಿವಾದದ ನಡುವೆಯೂ ನೇಮಕಗೊಂಡಿದ್ದ 300ಕ್ಕೂ ಹೆಚ್ಚು ಕೆಎಎಸ್‌ ಅಧಿಕಾರಿಗಳು ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಅವರ ಭವಿಷ್ಯ ಅತಂತ್ರವಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement