ಬೆಂಗಳೂರು : ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಬೆಂಗಳೂರಿನ ಹೋಟೆಲ್ಗಳಲ್ಲಿ ತಿಂಡಿ-ತಿನಿಸುಗಳ ದರವನ್ನು ಶೇ. 10ರಿಂದ 15ರಷ್ಟು ಹೆಚ್ಚಿಸಲಾಗಿದೆ. ಅಕ್ಕಿ, ಹಾಲು, ಬೇಳೆ ಸೇರಿದಂತೆ ಅಡುಗೆಗೆ ಅಗತ್ಯವಾದ ಕಚ್ಚಾ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಈ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಹೋಟೆಲ್ಗಳಲ್ಲಿ ಪ್ರತಿನಿತ್ಯ ಉಪಾಹಾರ ಸೇವಿಸುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಬೆಂಗಳೂರಿನ ಹಲವು ಹೋಟೆಲ್ಗಳಲ್ಲಿ ಈಗಾಗಲೇ ಟೀ, ಕಾಫಿ ದರ ಹೆಚ್ಚಳ ಮಾಡಲಾಗಿದ್ದು, ಇಡ್ಲಿ, ದೋಸೆ ಸೇರಿದಂತೆ ಜನಪ್ರಿಯ ತಿಂಡಿಗಳ ಬೆಲೆಯೂ ಏರಿಕೆಯಾಗಿದೆ. ಅಡುಗೆಗೆ ಅಗತ್ಯವಾದ ವಸ್ತುಗಳ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದ್ದು, ಅದರ ಒಂದು ಭಾಗವನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಅಕ್ಕಿ ಬೆಲೆ ಕೆ.ಜಿ.ಗೆ 65 ರೂ.ನಿಂದ 95 ರೂ.ವರೆಗೆ ಏರಿಕೆಯಾಗಿದೆ. ಬೇಳೆಕಾಳುಗಳ ಬೆಲೆಯೂ ಹೆಚ್ಚಳವಾಗಿದ್ದು, ಹಾಲು ಮತ್ತು ಮೊಸರಿನ ದರ ಏರಿಕೆಯೂ ಹೋಟೆಲ್ ಉದ್ಯಮದ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ (BBHA) ಪಿ.ಸಿ. ರಾವ್ ತಿಳಿಸಿದ್ದಾರೆ.
ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಹಲವು ಹೋಟೆಲ್ಗಳು ಈಗಾಗಲೇ ತಮ್ಮ ಮೆನು ದರವನ್ನು ಶೇ. 10ರಿಂದ 15ರಷ್ಟು ಹೆಚ್ಚಿಸಿವೆ. ನಷ್ಟವನ್ನು ತಪ್ಪಿಸಿಕೊಳ್ಳಲು ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಕೆಲವು ಹೋಟೆಲ್ಗಳು ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸದ್ಯಕ್ಕೆ ಟೀ ಮತ್ತು ಕಾಫಿ ದರವನ್ನು ಮಾತ್ರ ಹೆಚ್ಚಿಸಿವೆ. ಇದರೊಂದಿಗೆ ಬೇಳೆಕಾಳುಗಳು ಹಾಗೂ ಹಾಲು-ಮೊಸರಿನ ದರ ಏರಿಕೆಯಾಗಿರುವುದು ಹೋಟೆಲ್ ಉದ್ಯಮಕ್ಕೆ ಮತ್ತಷ್ಟು ಆರ್ಥಿಕ ಹೊರೆ ತಂದೊಡ್ಡಿದೆ. ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾಗಿರುವ ಅಶಾಂತಿಯ ವಾತಾವರಣವೂ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೊಟೇಲ್ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ನಗರದ ಎಲ್ಲ ಹೋಟೆಲ್ಗಳಲ್ಲೂ ಒಂದೇ ಮಾದರಿಯಲ್ಲಿ ಬೆಲೆ ಏರಿಕೆಯಾಗಿಲ್ಲ. ಗ್ರಾಹಕರಿಗೆ ತಕ್ಷಣವೇ ಭಾರಿ ಹೊರೆಯಾಗಬಾರದು ಎಂಬ ಉದ್ದೇಶದಿಂದ ಕೆಲವು ಹೋಟೆಲ್ ಮಾಲೀಕರು ಸದ್ಯಕ್ಕೆ ಟೀ ಮತ್ತು ಕಾಫಿ ದರವನ್ನು ಮಾತ್ರ ಹೆಚ್ಚಿಸಿದ್ದಾರೆ.
ಸದ್ಯ ಬೆಂಗಳೂರಿನ ಹೋಟೆಲ್ಗಳಲ್ಲಿ ಟೀ ಮತ್ತು ಕಾಫಿ ದರ ಸರಾಸರಿ 3ರಿಂದ 5 ರೂ. ಹೆಚ್ಚಳವಾಗಿದೆ. ಉಳಿದ ತಿಂಡಿ-ತಿನಿಸುಗಳ ದರ ಏರಿಕೆ ಹೋಟೆಲ್ಗಳಿಂದ ಹೋಟೆಲ್ಗಳಿಗೆ ಭಿನ್ನವಾಗಿದೆ. ಈ ಹಿಂದೆ ಸುಮಾರು 100 ರೂ. ಇದ್ದ ಒಂದು ಪ್ಲೇಟ್ ದೋಸೆಯ ಬೆಲೆ ಕೆಲವೆಡೆ 110ರಿಂದ 115 ರೂ.ಗೆ ಏರಿಕೆಯಾಗಿದೆ.
ಇದೇ ವೇಳೆ, ಮೊಸರಿನ ಬೆಲೆ ಕುರಿತು ಕರ್ನಾಟಕ ಹಾಲು ಮಹಾಮಂಡಳಿಯಿಂದ (KMF) ಸ್ಪಷ್ಟನೆಗಾಗಿ ಕೆಲವು ಹೋಟೆಲ್ ಮಾಲೀಕರು ಕಾಯುತ್ತಿದ್ದಾರೆ. ಇದೇವೇಳೆ ಅಕ್ಕಿ ಬೆಲೆ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಗಮನಿಸಿ ಮುಂದಿನ ಹೆಜ್ಜೆ ಇಡಲು ಚಿಂತನೆ ನಡೆಸಿದ್ದಾರೆ. ಒಟ್ಟಿನಲ್ಲಿ ಬೆಲೆ ಏರಿಕೆಯ ಬಿಸಿ ಇದೀಗ ಹೋಟೆಲ್ ಮಾಲೀಕರ ಜೊತೆಗೆ ಸಾರ್ವಜನಿಕರ ಜೇಬಿಗೂ ತಟ್ಟಲಾರಂಭಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ