ಬೆಂಗಳೂರು: ದೀಪಾವಳಿ ಮುನ್ನ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು 2.25%ರಷ್ಟು ಹೆಚ್ಚಳ ಮಾಡಲಾಗಿದೆ. ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 15.75 ರಿಂದ ಶೇ. 18ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದ್ದು, ಈ ತುಟ್ಟಿಭತ್ಯೆಯು 2026ರ ಜುಲೈ 1ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.
2024ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ 1ನೇ ಜುಲೈ 2026ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇ.15.75ರಿಂದ ಶೇ.18ಕ್ಕೆ ಪರಿಷ್ಕರಿಸಲಾಗಿದೆ.
ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೂ ಸಹ ದಿನಾಂಕ 1ನೇ ಜುಲೈ 2026ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರಗಳನ್ನು ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಪ್ರಸಕ್ತ ಶೇ.15.75ರಿಂದ ಶೇ.18ಕ್ಕೆ ಹೆಚ್ಚಿಸಲಾಗಿದೆ.
ತುಟ್ಟಿ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನವನ್ನು ಹೊರತುಪಡಿಸಿ, ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ. ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ನಿವೃತ್ತರಾದ ನೌಕರರು ರಾಜ್ಯ ಪಿಂಚಣಿದಾರರಾಗುವುದರಿಂದ ಅವರಿಗೂ ಸಹ ಇದು ಅನ್ವಯಿಸಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸರ್ಕಾರದ ಮತ್ತು ಜಿಲ್ಲಾ ಪಂಚಾಯತಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ಚಾರ್ಜ್ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರುಗಳಿಗೆ ಈ ಆದೇಶ ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.
ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್ಜಿಪಿಸಿ ವೇತನ ಶ್ರೇಣಿಗಳ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು. ಈ ಆದೇಶದ ಮೇರೆಗೆ ಲಭ್ಯವಿರುವ ತುಟ್ಟಿ ಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿ ಮಾಡುವಂತೆ ಸರ್ಕಾರ ಆದೇಶಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ