ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಅಪ್ಪ-ಅಮ್ಮ ಮೊದಲ ಸಲ ಭೇಟಿಯಾಗಿದ್ದ ರೆಸ್ಟೋರೆಂಟ್‌ಗೆ ಗರ್ಲ್‌ಪ್ರೆಂಡ್‌ ಜೊತೆ ಹೋಗಿದ್ದರ ಬಗ್ಗೆ ಹೇಳಿದ ರಾಹುಲ್ ಗಾಂಧಿ

ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಕಥನ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ (‘Belonging: A Journey Of Love’) ಬಿಡುಗಡೆ ಸಮಾರಂಭದಲ್ಲಿ ತಮ್ಮ ವೈಯಕ್ತಿಕ ಬದುಕಿನ ಅಪರೂಪದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.
ಕೇಂಬ್ರಿಡ್ಜ್‌ನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಅಂದಿನ ತಮ್ಮ ಗರ್ಲ್‌ಪ್ರೆಂಡ್‌(girlfriend) ಜೊತೆ,  ತಮ್ಮ ತಂದೆ ರಾಜೀವ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ಮೊದಲ ಬಾರಿಗೆ ಭೇಟಿಯಾಗಿದ್ದ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ, ಆಕೆ ಈಗ ತಮ್ಮ ಸ್ನೇಹಿತೆಯಾಗಿದ್ದಾರೆ ಎಂಬ ವಿಚಾರವನ್ನೂ ಬಹಿರಂಗಪಡಿಸಿದ್ದಾರೆ.
ಕೇಂಬ್ರಿಡ್ಜ್‌ನಲ್ಲಿರುವ ‘ವಾರ್ಸಿಟಿ ರೆಸ್ಟೋರೆಂಟ್‌’ (Varsity Restaurant) ಎಂಬುದು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿದ್ಯಾರ್ಥಿಗಳಾಗಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ಭೇಟಿಯಾದ ಸ್ಥಳ. ತಮ್ಮ ತಂದೆ-ತಾಯಿಯ ಪ್ರೇಮಕಥೆಯೊಂದಿಗೆ ನಂಟು ಹೊಂದಿರುವ ಈ ರೆಸ್ಟೋರೆಂಟ್‌ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಸಾಕಷ್ಟು ಕುತೂಹಲವಿತ್ತು. ಹೀಗಾಗಿ, ತಾವು ಕೇಂಬ್ರಿಡ್ಜ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಅಂದು ತಮ್ಮ ಗರ್ಲ್‌ಪ್ರೆಂಡ್‌ ಜೊತೆ ಅಲ್ಲಿಗೆ ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ.
‘ನನ್ನ ತಂದೆ-ತಾಯಿಯ ಬಗ್ಗೆ ಸಾಕಷ್ಟು ಕಥೆಗಳಿದ್ದವು. ಅವುಗಳಲ್ಲಿ ಪ್ರಮುಖವಾದದ್ದು ಅವರು ವಾರ್ಸಿಟಿ ರೆಸ್ಟೋರೆಂಟ್‌ನಲ್ಲಿ ಭೇಟಿಯಾದದ್ದು. ಹಲವು ವರ್ಷಗಳ ಬಳಿಕ ನಾನು ಕೇಂಬ್ರಿಡ್ಜ್‌ನಲ್ಲಿದ್ದಾಗ, ನನ್ನ ಪ್ರೇಯಸಿಗೆ ಅಲ್ಲಿಗೆ ಹೋಗೋಣ ಎಂದು ಹೇಳಿದೆ. ನನ್ನ ತಂದೆ-ತಾಯಿ ಎಲ್ಲಿ ಭೇಟಿಯಾಗಿದ್ದರು ಎಂಬುದನ್ನು ನೋಡಬೇಕೆಂಬ ಆಸೆ ನನಗಿತ್ತು’ ಎಂದು ರಾಹುಲ್ ಗಾಂಧಿ ನೆನಪಿಸಿಕೊಂಡಿದ್ದಾರೆ.
ರೆಸ್ಟೋರೆಂಟ್‌ಗೆ ತೆರಳಿ ಕುಳಿತ ಬಳಿಕ ಅಲ್ಲಿನ ಸಿಬ್ಬಂದಿ ಊಟದ ಮೆನು ತಂದುಕೊಟ್ಟರು. ಆಗ ರಾಹುಲ್ ಗಾಂಧಿ ಅವರು, ‘ನನ್ನ ತಂದೆ-ತಾಯಿ ಇದೇ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿದ್ದರು’ ಎಂದು ಸಿಬ್ಬಂದಿಗೆ ತಿಳಿಸಿದರು. ಆದರೆ, ಸಿಬ್ಬಂದಿಯಿಂದ ಬಂದ ಪ್ರತಿಕ್ರಿಯೆ ಅವರಿಗೆ ಅಚ್ಚರಿ ಮೂಡಿಸಿತ್ತು.
‘ನಾನು ಕುಳಿತಿದ್ದಾಗ ಸಿಬ್ಬಂದಿ ಮೆನು ತಂದರು. ಆಗ ನನ್ನ ತಂದೆ-ತಾಯಿ ಇದೇ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿದ್ದರು ಎಂದು ಹೇಳಿದೆ. ಅದನ್ನು ಕೇಳಿದ ಅವರು ನನ್ನನ್ನು ಒಮ್ಮೆ ನೋಡಿ, “ಓಹ್, ಅವರಾ? ನನಗೆ ಅವರ ಪರಿಚಯವಿದೆ” ಎಂದರು. ಅದಕ್ಕೆ ನಾನು, “ನಿಮಗೆ ಅವರ ಬಗ್ಗೆ ಏನು ಗೊತ್ತು?” ಎಂದು ಕೇಳಿದೆ. ಆಗ ಅವರು, “ಆ ಇಬ್ಬರಾ? ನೀವು ಯಾರ ಬಗ್ಗೆ ಹೇಳುತ್ತಿದ್ದೀರಿ ಎಂಬುದು ನನಗೆ ಚೆನ್ನಾಗಿ ಗೊತ್ತು” ಎಂದು ಪ್ರತಿಕ್ರಿಯಿಸಿದರು’ ಎಂದು ಅಂದಿನ ಘಟನೆಯನ್ನು ರಾಹುಲ್ ಗಾಂಧಿ ವಿವರಿಸಿದ್ದಾರೆ.
ಸೋನಿಯಾ ಗಾಂಧಿ ಅವರ ಆತ್ಮಕಥನ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ಹಂಚಿಕೊಂಡ ಈ ಸ್ವಾರಸ್ಯಕರ ನೆನಪು ಸಭಿಕರ ಗಮನ ಸೆಳೆಯಿತು. ಅದರಲ್ಲೂ ಅವರು ಉಲ್ಲೇಖಿಸಿದ ಗರ್ಲ್‌ಪ್ರೆಂಡ್‌ ಈಗಲೂ ಅವರ ಜೀವನದಲ್ಲಿ ಇದ್ದಾರೆಯೇ ಎಂಬ ಕುತೂಹಲ ಸಹಜವಾಗಿಯೇ ಮೂಡಿತು.
ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು, ‘ನೀವು ಪ್ರಸ್ತಾಪಿಸಿದ ಆ ಮಹಿಳೆಯೊಂದಿಗೆ ಈಗಲೂ ಬಾಂಧವ್ಯ ಹೊಂದಿದ್ದೀರಾ?’ ಎಂದು ಪ್ರಶ್ನಿಸಲಾಯಿತು. ಇದಕ್ಕೆ ಸಂಕ್ಷಿಪ್ತವಾಗಿ ಉತ್ತರಿಸಿದ ಅವರು, ‘ಆಕೆ ಈಗ ನನ್ನ ಸ್ನೇಹಿತೆ’ ಎಂದು ಹೇಳಿದರು.
ಈ ಮೂಲಕ ತಮ್ಮ ಕಾಲೇಜು ದಿನಗಳ ಪ್ರೇಮದ ನೆನಪನ್ನು ಹಂಚಿಕೊಂಡ ರಾಹುಲ್ ಗಾಂಧಿ, ತಮ್ಮ ಹಿಂದಿನ ಪ್ರೇಯಸಿಯೊಂದಿಗಿನ ಸಂಬಂಧ ಈಗ ಸ್ನೇಹಕ್ಕೆ ಬದಲಾಗಿದೆ ಎಂಬುದನ್ನು ಬಹಿರಂಗಪಡಿಸಿದರು.
ತಂದೆ-ತಾಯಿ ಪ್ರೀತಿ ವಾತ್ಯಲ್ಯದ ಬಗ್ಗೆ ಮುಕ್ತ ಮಾತು
ತಮ್ಮ ಪೋಷಕರ ನಡುವಿನ ಪ್ರೀತಿ-ವಾತ್ಸಲ್ಯದ ಬಗ್ಗೆ ರಾಹುಲ್ ಮುಕ್ತವಾಗಿ ಮಾತನಾಡಿದರು. ತಮ್ಮ ಪೋಷಕರ ನಡುವಿನ ಪ್ರೀತಿಯ ಬಗ್ಗೆ ಮಾತನಾಡಿದ ರಾಹುಲ್, ಕುಟುಂಬದ ಊಟದ ಸಮಯದಲ್ಲಿ ಅವರು ಹೇಗೆ ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರು.
“ಬೇರೆ ಯಾವುದೇ ಮನೆಯಲ್ಲಿಯೂ ನಾನು ಇದನ್ನು ನೋಡಿಲ್ಲ. ಪ್ರತಿ ಊಟದ ಸಮಯದಲ್ಲೂ ಅಪ್ಪ ಕುಳಿತಿರುತ್ತಿದ್ದರು ಮತ್ತು ಅವರ ಮಡಿಲಲ್ಲಿ ಅಮ್ಮ ಕುಳಿತಿರುತ್ತಿದ್ದರು,” ಎಂದು ಅವರು ಹೇಳಿದರು.
ಇಂತಹ ಪ್ರೀತಿಯ ಅಭಿವ್ಯಕ್ತಿಗಳು ಪ್ರತಿಯೊಂದು ಮನೆಯಲ್ಲೂ ಸಾಮಾನ್ಯ ಎಂದು ತಾವು ಆರಂಭದಲ್ಲಿ ಭಾವಿಸಿದ್ದಾಗಿ ಅವರು ಸ್ಮರಿಸಿಕೊಂಡರು. ಆದರೆ, ತಮ್ಮ ಸ್ನೇಹಿತರ ಮನೆಗಳಿಗೆ ಭೇಟಿ ನೀಡಿದ ನಂತರವೇ, ಅವರ ಪೋಷಕರ ನಡುವೆ ಇಂತಹ ಪದ್ಧತಿ ಇರಲಿಲ್ಲ ಎಂಬುದು ತಮಗೆ ಅರಿವಾಯಿತು ಎಂದು ಅವರು ತಿಳಿಸಿದರು.
ತಮ್ಮ ಪೋಷಕರು ಕೇವಲ ಒಂದೇ ಒಂದು ಬಾರಿ ವಾದ ಮಾಡಿದ್ದನ್ನು ತಾವು ಕಂಡಿದ್ದಾಗಿ ಕಾಂಗ್ರೆಸ್ ನಾಯಕ ನೆನಪಿಸಿಕೊಂಡರು. ರಾಜೀವ ಗಾಂಧಿಯವರು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿತ್ತು. ಸೋನಿಯಾ ಗಾಂಧಿಯವರು ತಮ್ಮ ಪತಿಗೆ ಪದೇ ಪದೇ ಏನನ್ನೋ ಹೇಳಲು ಪ್ರಯತ್ನಿಸುತ್ತಿದ್ದರು, ಆದರೆ ಒತ್ತಡದಲ್ಲಿದ್ದ ರಾಜೀವ  ಗಾಂಧಿಯವರು ಕೊನೆಗೆ ತಾಳ್ಮೆ ಕಳೆದುಕೊಂಡು ಸಿಟ್ಟಾದರು. “ಅವರು ಜಗಳವಾಡಿದ್ದನ್ನು ನಾವು ನೋಡಿದ ಏಕೈಕ ಸಂದರ್ಭ ಅದಾಗಿತ್ತು,” ಎಂದು ರಾಹುಲ್ ಹೇಳಿದರು.
ಭಾವನಾತ್ಮಕವಾಗಿ ಮಾತನಾಡಿದ ರಾಹುಲ್, ರಾಜೀವ್ ಗಾಂಧಿಯವರ ಹತ್ಯೆಯ ನಂತರ ಸೋನಿಯಾ ಗಾಂಧಿಯವರ ಜೀವನ ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದರು. ಇಂದಿರಾ ಗಾಂಧಿ ಮತ್ತು ನಂತರ ರಾಜೀವ ಗಾಂಧಿಯವರ ಹತ್ಯೆಗಳು, ಕುಟುಂಬದ ಅತಿ ದೊಡ್ಡ ಆಧಾರಸ್ತಂಭಗಳಾಗಿದ್ದ ಇಬ್ಬರು ವ್ಯಕ್ತಿಗಳನ್ನು ಕಸಿದುಕೊಂಡಿದ್ದವು ಎಂದು ಅವರು ಹೇಳಿದರು.
“ಸದಾ ನಗುನಗುತ್ತಾ, ಸಂತೋಷದಿಂದ ಇರುತ್ತಿದ್ದ ಅಮ್ಮ ಮಾಯವಾದರು. ಅವರ ಜಾಗದಲ್ಲಿ ಒಬ್ಬ ಹೊಸ ಅಮ್ಮ ಬಂದರು. ಏಕೆ? ಏಕೆಂದರೆ, ಅವರ ಜೀವನದ ಜ್ಯೋತಿಯೇ ನಂದಿಹೋಗಿತ್ತು,” ಎಂದು ಅವರು ಹೇಳಿದರು.
ಸೋನಿಯಾ ಗಾಂಧಿಯವರು ಹಿಂದೆ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವ ಮತ್ತು ಯಾವುದೇ ವಿಷಯದ ಬಗ್ಗೆಯೂ ಜನರೊಂದಿಗೆ ಆರಾಮವಾಗಿ ಮಾತನಾಡಬಲ್ಲ ವ್ಯಕ್ತಿಯಾಗಿದ್ದರು. ಆದರೆ, ತಮ್ಮ ಅತ್ತೆ ಮತ್ತು ಪತಿಯ ಮರಣದ ನಂತರ, ಅವರು ಕ್ರಮೇಣ ತಮ್ಮೊಳಗೆ ಸೀಮಿತಗೊಂಡರು (ಒಂಟಿಯಾದರು) ಎಂದು ಹೇಳಿದರು.
ಭಾರತದಾದ್ಯಂತ ಇರುವ ಜನರು, ವಿಶೇಷವಾಗಿ ಹಳ್ಳಿಗಳಲ್ಲಿ ವಾಸಿಸುವವರು, ಅವರು ಮತ್ತೆ ಸಮಾಜದೊಂದಿಗೆ ಬೆರೆಯಲು ಮತ್ತು ತಾವೂ ಈ ಸಮಾಜದ ಭಾಗವೇ ಎಂಬ ಭಾವನೆಯನ್ನು ಮರಳಿ ಪಡೆಯಲು ಸಹಾಯ ಮಾಡಿದರು ಎಂದು ಅವರು ಹೇಳಿದರು. “ಅವರು (ಜನರು) ಇದ್ದಕ್ಕಿದ್ದಂತೆ ಸೋನಿಯಾ ಅವರ ಬಳಿ ಬಂದು, ‘ನೀವು ನಮ್ಮವರು’ ಎಂದು ಹೇಳುತ್ತಿದ್ದರು,” ಎಂದು ಅವರು ನೆನಪಿಸಿಕೊಂಡರು.
ಸೋನಿಯಾ ಗಾಂಧಿಯವರು ಕ್ಯಾನ್ಸರ್ ವಿರುದ್ಧ ನಡೆಸಿದ ಹೋರಾಟ ಮತ್ತು ಎದುರಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ ರಾಹುಲ್, ಅವರು ಎಂದಿಗೂ ಭಯಪಡುವುದನ್ನು ತಾನು ನೋಡಿಲ್ಲ ಎಂದು ಹೇಳಿದರು. “ನನ್ನ ಜೀವನದಲ್ಲಿ ಒಮ್ಮೆಯೂ ಅವರು ಭಯಪಡುವುದನ್ನು ನಾನು ನೋಡಿಲ್ಲ. ಒಮ್ಮೆಯೂ ಅವರು ಹಿಂದೆ ಸರಿಯುವುದನ್ನು ನಾನು ಕಂಡಿಲ್ಲ,” ಎಂದು ಅವರು ನುಡಿದರು.
ಈ ಆತ್ಮಚರಿತ್ರೆಯ ಬಿಡುಗಡೆ ಸಮಾರಂಭದಲ್ಲಿ ತಾವು ಏಕೆ ಮಾತನಾಡಲು ಬಯಸಿದೆ ಎಂಬುದನ್ನು ವಿವರಿಸಿದ ರಾಹುಲ್, ತಮ್ಮ ತಂದೆಗೆ ಸೋನಿಯಾ ಅವರ ಬಗ್ಗೆ ಎಷ್ಟು ಹೆಮ್ಮೆ ಇರುತ್ತಿತ್ತು ಎಂಬುದನ್ನು ತಮ್ಮ ತಾಯಿ ತಿಳಿದುಕೊಳ್ಳಲಿ ಎಂದು ತಾವು ಬಯಸಿದ್ದಾಗಿ ಹೇಳಿದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement