

ಬೆಂಗಳೂರು : ಉದ್ದೇಶಿತ ಬೇಡ್ತಿ-ವರದಾ (ಹಿರೇವಡ್ಡಟ್ಟಿ) ನದಿ ಜೋಡಣೆ ಯೋಜನೆ’ಯ ಪ್ರಗತಿ ಪರಿಶೀಲನಾ ಸಭೆ ಜಲಸಂಪನ್ಮೂಲ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆಯಿತು.
ಈ ಸಭೆಯಲ್ಲಿ ಕೇಂದ್ರ ಜಲಸಂಪನ್ಮೂಲ (WRD) ಇಲಾಖೆಯ ಅಧಿಕಾರಿಗಳು, ರಾಜ್ಯ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳು, ಹಾಗೂ ವಿವಿಧ ನಿಗಮಗಳ ಎಲ್ಲಾ ವ್ಯವಸ್ಥಾಪಕ ನಿರ್ದೇಶಕರು, ಸಚಿವರ ಆಪ್ತ ಕಾರ್ಯದರ್ಶಿಗಳು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಯೋಜನೆಯ ಮಾರ್ಗಮಧ್ಯೆ ಹಾವೇರಿ ಜಿಲ್ಲೆಯಲ್ಲಿ ನೀರಿನ ಶೇಖರಣಾ ಘಟಕ ನಿರ್ಮಿಸಲು ಸೂಕ್ತ ಸ್ಥಳವನ್ನ ಕೂಡಲೇ ಗುರುತಿಸುವಂತೆ ಹಾಗೂ ನೀರಾವರಿ ಅಚ್ಚುಕಟ್ಟು ಪ್ರದೇಶವನ್ನ ತ್ವರಿತವಾಗಿ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.ಯೋಜನೆಯ ಸಮೀಕ್ಷೆ ಮತ್ತು ತನಿಖಾ ಕಾರ್ಯಗಳಿಗಾಗಿ ಅರಣ್ಯ ಇಲಾಖೆಯಿಂದ ಅಗತ್ಯವಿರುವ ಅನುಮತಿಗಳನ್ನ ಆದ್ಯತೆಯ ಮೇರೆಗೆ ಶೀಘ್ರವಾಗಿ ಪಡೆದುಕೊಳ್ಳಲು ಸಮನ್ವಯತೆಯಿಂದ ಕೆಲಸ ಮಾಡುವಂತೆಯು ಸಹ ಸಚಿವರು ಸಲಹೆ ನೀಡಿದರು.
ಡಿಪಿಆರ್ ತ್ವರಿತಗೊಳಿಸಲು ಸೂಚನೆ
ಟೊಪೊಗ್ರಾಫಿಕಲ್ ಮತ್ತು ಜಿಯೋಲಾಜಿಕಲ್ ಸಮೀಕ್ಷೆಗಳು ಸಹ ಪ್ರಗತಿಯಲ್ಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಜಂಟಿಯಾಗಿ ಕಾರ್ಯನಿರ್ವಹಿಸಿ ವಿಸ್ತೃತ ಯೋಜನಾ ವರದಿಯನ್ನ (DPR) ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವರು ಹೇಳಿದರು.
ರಾಷ್ಟ್ರೀಯ ಜಲ ಅಭಿವೃದ್ಧಿ ಏಜೆನ್ಸಿ (NWDA) ಸಿದ್ಧಪಡಿಸುತ್ತಿರುವ ಈ ವಿಸ್ತೃತ ನದಿ ಜೋಡಣೆ ಯೋಜನೆಗೆ ಬರೋಬ್ಬರಿ 9,652.73 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಪಶ್ಚಿಮಕ್ಕೆ ಹರಿಯುವ ಬೇಡ್ತಿ ನದಿಯ ಸುಮಾರು 18.5 TMC ಹೆಚ್ಚುವರಿ ನೀರನ್ನು ಮುಂಗಾರು ಹಂಗಾಮಿನಲ್ಲಿ ಪೈಪ್ಲೈನ್ ಮತ್ತು ಲಿಫ್ಟ್ ಮೂಲಕ ತುಂಗಭದ್ರಾ ಕಣಿವೆಗೆ ತಿರುಗಿಸುವ ಯೋಜನೆ ಇದಾಗಿದೆ.
ಲಭ್ಯವಾಗುವ ನೀರಿನಲ್ಲಿ 77 Mm3 ಕುಡಿಯುವ ಉದ್ದೇಶಕ್ಕೆ, 131 Mm3 ಕೈಗಾರಿಕೆಗಳಿಗೆ ಹಾಗೂ 316 Mm3 ನೀರನ್ನ ಕೃಷಿ ಮತ್ತು ನೀರಾವರಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಪ್ರಮುಖವಾಗಿ ಗದಗ, ಹಾವೇರಿ, ಧಾರವಾರ ಮತ್ತು ಕೊಪ್ಪಳ ಜಿಲ್ಲೆಗಳಿಗೆ ನೀರಿನ ಲಾಭ ಸಿಗಲಿದೆ ಎಂದು ಹೇಳಲಾಗಿದೆ.





ನಿಮ್ಮ ಕಾಮೆಂಟ್ ಬರೆಯಿರಿ