

ನವದೆಹಲಿ : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಈ ಮೂಲಕ ಓಲಾ, ಉಬರ್, ರ್ಯಾಪಿಡೊ ಸೇರಿದಂತೆ ವಿವಿಧ ಅಗ್ರಿಗೇಟರ್ಗಳ ಮೂಲಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಇದ್ದ ಕಾನೂನಾತ್ಮಕ ಅಡೆತಡೆ ನಿವಾರಣೆಯಾಗಿದೆ.
ನ್ಯಾಯಮೂರ್ತಿಗಳಾದ ಸತೀಶಚಂದ್ರ ಶರ್ಮಾ ಮತ್ತು ಎನ್. ಕೋಟೀಶ್ವರ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಕಾರ್ಯಾಚರಣೆಗೆ ವಿಧಿಸಲಾಗಿದ್ದ ನ್ಯಾಯಾಲಯದ ನಿರ್ಬಂಧವನ್ನು ಹೈಕೋರ್ಟ್ನ ವಿಭಾಗೀಯ ಪೀಠತೆರವುಗೊಳಿಸಿತ್ತು. ಅಲ್ಲದೆ, ಓಲಾ, ಉಬರ್ ಮತ್ತು ರ್ಯಾಪಿಡೊ ಸೇರಿದಂತೆ ವಿವಿಧ ಅಗ್ರಿಗೇಟರ್ಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಪುರಸ್ಕರಿಸಿತ್ತು.
ಕರ್ನಾಟಕ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡುವ ನಿಯಂತ್ರಣ ನೀತಿಯನ್ನು ರೂಪಿಸುವವರೆಗೆ ಈ ಸೇವೆಗಳನ್ನು ಸ್ಥಗಿತಗೊಳಿಸಬೇಕೆಂದು ಈ ಹಿಂದೆ ಹೈಕೋರ್ಟ್ನ ಏಕಸದಸ್ಯ ಪೀಠ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಓಲಾ, ಉಬರ್, ರ್ಯಾಪಿಡೊ, ಮೋಟಾರ್ ಸೈಕಲ್ ಮಾಲೀಕರು ಹಾಗೂ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್ ಮೇಲ್ಮನವಿ ಸಲ್ಲಿಸಿದ್ದವು. ಈ ಮೇಲ್ಮನವಿಗಳ ವಿಚಾರಣೆ ನಡೆಸಿದ ಹೈಕೋರ್ಟ್ನ ವಿಭಾಗೀಯ ಪೀಠ, ಮೋಟಾರ್ ಸೈಕಲ್ಗಳನ್ನು ಸಾರಿಗೆ ವಾಹನಗಳೆಂದು ನೋಂದಾಯಿಸಲು ಅವಕಾಶವಿದೆ ಮತ್ತು ಅವುಗಳನ್ನು ಕಾಂಟ್ರಾಕ್ಟ್ ಕ್ಯಾರೇಜ್ (ಗುತ್ತಿಗೆ ಆಧಾರಿತ ಸಾರಿಗೆ ವಾಹನ) ಆಗಿ ಕಾರ್ಯಾಚರಿಸಬಹುದು ಎಂದು ಅಭಿಪ್ರಾಯಪಟ್ಟಿತ್ತು. ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಸರ್ಕಾರ ನಿಯಂತ್ರಣಾತ್ಮಕ ಷರತ್ತುಗಳನ್ನು ವಿಧಿಸಬಹುದಾದರೂ, ವಾಹನವು ಮೋಟಾರ್ ಸೈಕಲ್ ಎಂಬ ಕಾರಣವೊಂದನ್ನೇ ಮುಂದಿಟ್ಟುಕೊಂಡು ಪರವಾನಗಿ ನಿರಾಕರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತ್ತು.
2026ರ ಜನವರಿಯಲ್ಲಿ ನೀಡಿದ್ದ ಈ ತೀರ್ಪಿನಲ್ಲಿ, ಮೋಟಾರ್ ಸೈಕಲ್ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸುವುದು ಹಾಗೂ ಅವುಗಳನ್ನು ಬೈಕ್ ಟ್ಯಾಕ್ಸಿಗಳಾಗಿ ಕಾರ್ಯಾಚರಿಸಲು ಪರವಾನಗಿ ನೀಡುವ ಸಂಬಂಧ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ವಿಭಾಗೀಯ ಪೀಠ ನಿರ್ದೇಶನ ನೀಡಿತ್ತು.


ಹೈಕೋರ್ಟ್ನ ಈ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವವರ ಸುರಕ್ಷತೆ, ವಿಮಾ ಸೌಲಭ್ಯ ಹಾಗೂ ಪ್ರಯಾಣಿಕರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯವಾದ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ಸರ್ಕಾರ ಆತಂಕ ವ್ಯಕ್ತಪಡಿಸಿತ್ತು.
ಇದೇ ವೇಳೆ, ಐದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳೂ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದವು. ಬೈಕ್ ಟ್ಯಾಕ್ಸಿಗಳಿಗೆ ಸಮಾನವಾದ ನಿಯಂತ್ರಣಾತ್ಮಕ ಹೊಣೆಗಾರಿಕೆಗಳನ್ನು ವಿಧಿಸದೆ ಕಾರ್ಯಾಚರಣೆಗೆ ಅವಕಾಶ ನೀಡುವುದರಿಂದ ಈಗಾಗಲೇ ಸಾರಿಗೆ ಸೇವೆ ಒದಗಿಸುತ್ತಿರುವ ಆಟೋ ಮತ್ತು ಟ್ಯಾಕ್ಸಿ ನಿರ್ವಾಹಕರಿಗೆ ಅನ್ಯಾಯವಾಗಲಿದೆ ಎಂಬುದು ಸಂಘಟನೆಗಳ ವಾದವಾಗಿತ್ತು.
ಆದರೆ, ರಾಜ್ಯ ಸರ್ಕಾರ ಹಾಗೂ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಶುಕ್ರವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠ ನೀಡಿದ್ದ ತೀರ್ಪು ಎತ್ತಿಹಿಡಿದಿದ್ದರಿಂದ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಕಾರ್ಯಾಚರಣೆ ಮುಂದುವರಿಸಲು ಅವಕಾಶ ದೊರೆತಂತಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ