

ಬೆಂಗಳೂರು: ತಮ್ಮ ಪುಸ್ತಕದಲ್ಲಿ 12ನೇ ಶತಮಾನದ ಸಮಾಜ ಸುಧಾರಕ ಹಾಗೂ ಜಗಜ್ಯೋತಿ ಬಸವಣ್ಣ ಹಾಗೂ ಲಿಂಗಾಯತ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವಿವಾದಿತ ಕನ್ನಡ ಪುಸ್ತಕ ‘ಬಸವ ಮಂಟಪ’ದ ಲೇಖಕ, ಅಮೆರಿಕ ನಿವಾಸಿ ರವಿ ಹಂಜ್ ಅವರನ್ನು ಶನಿವಾರ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಮತ್ತು ಬೆಂಗಳೂರಿನ ಪೊಲೀಸರು ರವಿ ಹಂಜ್ ಅವರನ್ನು ಕೊಚ್ಚಿಯಲ್ಲಿ ವಶಕ್ಕೆ ಪಡೆದಿರುವುದನ್ನು ಖಚಿತಪಡಿಸಿದ್ದಾರೆ. ಕೊಚ್ಚಿ ವಿಮಾನ ನಿಲ್ದಾಣದ ಪೊಲೀಸರು ಅವರನ್ನು ಪತ್ತೆಹಚ್ಚಿ ವಶಕ್ಕೆ ಪಡೆದ ಬಳಿಕ ಈ ಕುರಿತು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ರವಿ ಹಂಜ್ ವಿರುದ್ಧ ಎಫ್ಐಆರ್ಗಳು ದಾಖಲಾಗಿದ್ದು, ಪೊಲೀಸರು ನೋಟಿಸ್ಗಳನ್ನು ಜಾರಿಗೊಳಿಸಿದ ನಂತರ ಅವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಲಾಗಿತ್ತು.
ಇದಕ್ಕೆ ಕೆಲವೇ ದಿನಗಳ ಹಿಂದೆ ಕರ್ನಾಟಕ ಸಚಿವ ಸಂಪುಟವು ರವಿ ಹಂಜ್ ಅವರ ಲೇಖನಗಳ ಸಂಕಲನವಾಗಿರುವ ‘ಬಸವ ಮಂಟಪ’ ಪುಸ್ತಕದ ಪ್ರತಿಗಳನ್ನು ವಶಪಡಿಸಿಕೊಳ್ಳಲು ಹಾಗೂ ಲೇಖಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿತ್ತು.
ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರವಿ ಹಂಜ್ ಅಲಿಯಾಸ್ ಹಂಜಿಗುಮಠ ಮತ್ತು ಪುಸ್ತಕದ ಪ್ರಕಾಶಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬೆಳಗಾವಿಯಲ್ಲೂ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣಗಳು ದಾಖಲಾಗಿವೆ. ಪುಸ್ತಕದಲ್ಲಿನ ಬರಹಗಳು ಹಾಗೂ ನವೆಂಬರ್ 13ರಂದು ನೀಡಿದ ಸಂದರ್ಶನವೊಂದರಲ್ಲಿ ರವಿ ಹಂಜ್ ಮಾಡಿರುವ ಹೇಳಿಕೆಗಳು ಬಸವಣ್ಣನವರ ಬೋಧನೆ ಮತ್ತು ತತ್ವಾದರ್ಶಗಳನ್ನು ತಪ್ಪಾಗಿ ಬಿಂಬಿಸಿವೆ ಎಂದು ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಟನೆಗಳು ಆರೋಪಿಸಿವೆ.
ವಿಶೇಷವಾಗಿ, ಕಳವು ಮಾಡಬಾರದು, ಕೊಲೆ ಮಾಡಬಾರದು, ಸುಳ್ಳು ಹೇಳಬಾರದು ಎಂಬ ಆಶಯವನ್ನು ಸಾರುವ ಬಸವಣ್ಣನವರ ಪ್ರಸಿದ್ಧ ವಚನಕ್ಕೆ ಸಂಬಂಧಿಸಿದಂತೆ ಲೇಖಕರು ಅತ್ಯಂತ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ಲಿಂಗಾಯತ ಸಮುದಾಯದ ಅನುಯಾಯಿಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.





ನಿಮ್ಮ ಕಾಮೆಂಟ್ ಬರೆಯಿರಿ