

ಚಿಕ್ಕಮಗಳೂರು: ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ಭಾಗಗಳಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನತ್ತ ಓಡಿಸಿರುವುದಕ್ಕೆ ಆ ಜಿಲ್ಲೆಯ ಕಾಂಗ್ರೆಸ್ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳನ್ನು ಆದಷ್ಟು ಬೇಗ ಚಿಕ್ಕಮಗಳೂರು ಜಿಲ್ಲೆಯಿಂದ ಹೊರಕ್ಕೆ ಸ್ಥಳಾಂತರಿಸದಿದ್ದರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಾಡಾನೆಗಳ ಸ್ಥಳಾಂತರ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಮೂಡಿಗೆರೆಯ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿ ರಾಜಿನಾಮೆ ಪತ್ರ ಪ್ರದರ್ಶಿಸಿ ನನಗೆ ಸರ್ಕಾರ ಮುಖ್ಯ ಅಲ್ಲ, ಜನ ಮುಖ್ಯ ಎಂದು ಹೇಳಿದ್ದಾರೆ.
ಕಳೆದ ವಾರ ಹಾಸನ ಜಿಲ್ಲೆಯ ಬೇಲೂರು ಮತ್ತು ಸಕಲೇಶಪುರ ಭಾಗಗಳಲ್ಲಿ ಕಾಡಾನೆಗಳ ದಾಳಿಯಿಂದ ಇಬ್ಬರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆಗಳನ್ನು ಸೆರೆಹಿಡಿಯುವ ಅಥವಾ ಅವುಗಳನ್ನು ಜನವಸತಿ ಪ್ರದೇಶಗಳಿಂದ ಓಡಿಸುವ ಕಾರ್ಯಾಚರಣೆ ಆರಂಭಿಸಿತ್ತು. ಈವರೆಗೆ ಎರಡು ಗಂಡಾನೆಗಳನ್ನು ಸೆರೆಹಿಡಿಯಲಾಗಿದ್ದು, ಉಳಿದ ಆನೆಗಳನ್ನು ಕಳೆದ ಎರಡು ದಿನಗಳಿಂದ ಭದ್ರಾ ವನ್ಯಜೀವಿ ಅಭಯಾರಣ್ಯದತ್ತ ಓಡಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯ ಭಾಗವಾಗಿ ಆನೆಗಳು ಬೇಲೂರು ಭಾಗವನ್ನು ದಾಟಿ ಭಾನುವಾರ ಮುಂಜಾನೆ ಸುಮಾರು 3 ಗಂಟೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕರಬೇಲು ಗ್ರಾಮವನ್ನು ತಲುಪಿವೆ. ಈ ಗ್ರಾಮವು ತಟ್ಕೋಳ ಅರಣ್ಯ ಪ್ರದೇಶದಿಂದ ಸುಮಾರು 8.5 ಕಿ.ಮೀ. ದೂರದಲ್ಲಿದೆ.
ಆನೆಗಳು ನಿಗದಿತ ದಿಕ್ಕಿನಲ್ಲಿಯೇ ಸಾಗಿವೆ ಎಂದು ಅರಣ್ಯ ಇಲಾಖೆ ತನ್ನ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ. ಅಲ್ಲದೆ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಸ್ಪರ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಆದರೆ, ಹಾಸನ ಜಿಲ್ಲೆಯ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಯತ್ತ ಓಡಿಸಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಸ್ಥಳೀಯ ನಿವಾಸಿಗಳು ಹಾಗೂ ರಾಜಕೀಯ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನವೆಂಬರ್ 18ರಂದು ಎನ್.ಆರ್.ಪುರ ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಜನರಿಗೆ ನೀಡಿದ್ದ ಭರವಸೆಯನ್ನು ಈಗ ಉಲ್ಲಂಘಿಸಿದೆ ಎಂದು ಹಲವರು ಆರೋಪಿಸಿದ್ದಾರೆ. ಆನೆಗಳನ್ನು ಭದ್ರಾ ವನ್ಯಜೀವಿ ಅಭಯಾರಣ್ಯದತ್ತ ಓಡಿಸುವುದಕ್ಕೂ ಜಿಲ್ಲೆಯ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.


ಜಂಟಿ ಸುದ್ದಿಗೋಷ್ಠಿಯಲ್ಲಿ ಶಾಸಕರ ಆಕ್ರೋಶ
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ, ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್.ಡಿ. ತಮ್ಮಯ್ಯ ಹಾಗೂ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಭಾನುವಾರ ಚಿಕ್ಕಮಗಳೂರಿನಲ್ಲಿ ಸಭೆ ನಡೆಸಿದರು.
ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿದ ಶಾಸಕರು, ಜನರ ಸುರಕ್ಷತೆ ತಮ್ಮ ರಾಜಕೀಯ ಸ್ಥಾನಮಾನಕ್ಕಿಂತ ಮುಖ್ಯ ಎಂದು ಹೇಳಿದ್ದಾರೆ. ಕಾಡಾನೆಗಳನ್ನು ಅವುಗಳ ಮೂಲ ಆವಾಸಸ್ಥಾನಕ್ಕೆ ಹಿಂದಿರುಗಿಸಿ, ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ನೆಮ್ಮದಿ ಕಲ್ಪಿಸದಿದ್ದರೆ ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ನವೆಂಬರ್ 25ಕ್ಕೆ ಅರಣ್ಯ ಸಚಿವರ ನೇತೃತ್ವದಲ್ಲಿ ಸಭೆ ನಡೆಯಬೇಕಿತ್ತು. ಆದರೆ ಸಭೆಗೂ ಮುನ್ನವೇ ಯಾವುದೇ ಮಾಹಿತಿ ನೀಡದೆ ಕಾಡಾನೆ ಓಡಿಸಿದ್ದಾರೆ. ಈ ಕಾರ್ಯಾಚರಣೆಗೆ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಹಾಗೂ ಜನರು ವಿರೋಧ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರು, ಸೋಮವಾರದೊಳಗೆ ಆನೆಗಳನ್ನು ಮೂಡಿಗೆರೆ ತಾಲ್ಲೂಕಿನಿಂದ ಹೊರಕ್ಕೆ ಸ್ಥಳಾಂತರಿಸದಿದ್ದರೆ ರಾಜೀನಾಮೆ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಯಾವುದೇ ಸಮ್ಮತಿ ಇಲ್ಲದೆ ಕಾರ್ಯಚರಣೆ ಮಾಡಿದ್ದಾರೆ ಎಂದರದು. ರಾಜೀನಾಮೆ ಪತ್ರ ಸಿದ್ದವಿದೆ. ನಾನು ರಾಜೀನಾಮೆ ನೀಡಲು ಸಿದ್ದ. ಈ ಕಾರ್ಯಚರಣೆ ನಿಲ್ಲಿಸಬೇಕು, ಇಲ್ಲವೇ ರಾಜೀನಾಮೆ ನೀಡುತ್ತೇನೆ. ನಾನು ಕ್ಷೇತ್ರದ ಜನರಿಗೆ ಉತ್ತರ ನೀಡಬೇಕಿದೆ. ಚಿಕ್ಕಮಗಳೂರು ಜನರ ಜೀವಕ್ಕೆ ಬೆಲೆ ಇಲ್ವೇ? ನನಗೆ ಜನ ಮುಖ್ಯ ಎಂದು ಹೇಳಿ ರಾಜೀನಾಮೆ ಪತ್ರವನ್ನು ಪ್ರದರ್ಶಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಭದ್ರಾ ಅಭಯಾರಣ್ಯದಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿದೆ: ಸಚಿವ ಶಿವಲಿಂಗೇಗೌಡ
ಇನ್ನೊಂದೆಡೆ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಅರಣ್ಯ ಇಲಾಖೆಯ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬೇಲೂರು ಭಾಗದಲ್ಲಿ ಆನೆಗಳಿಗೆ ಮೀಸಲಾದ ನಿರ್ದಿಷ್ಟ ಅರಣ್ಯ ಪ್ರದೇಶ ಇಲ್ಲದಿರುವುದರಿಂದ ಅವುಗಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
“ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿದೆ. ಹೀಗಾಗಿ ಅರಣ್ಯ ಇಲಾಖೆಯವರು ಆನೆಗಳನ್ನು ಅರಣ್ಯದತ್ತ ಓಡಿಸುತ್ತಿದ್ದಾರೆ. ನಮಗೆ ಕೇವಲ ಹಾಸನ ಜಿಲ್ಲೆಯ ಜನರ ಸುರಕ್ಷತೆಯಷ್ಟೇ ಅಲ್ಲ, ಎಲ್ಲ ಜನರ ಸುರಕ್ಷತೆಯೂ ಮುಖ್ಯವಾಗಿದೆ. ಆನೆಗಳು ಅರಣ್ಯ ಪ್ರದೇಶದಲ್ಲಿಯೇ ಉಳಿಯುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ” ಎಂದು ಸಚಿವರು ಹೇಳಿದ್ದಾರೆ.
ಇದೇ ವೇಳೆ, ವನ್ಯಜೀವಿ ಅಭಯಾರಣ್ಯಗಳ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇರುವುದರಿಂದ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಒಟ್ಟಾರೆ, ಹಾಸನ ಜಿಲ್ಲೆಯಲ್ಲಿ ಆರಂಭವಾದ ಕಾಡಾನೆ ಸ್ಥಳಾಂತರ ಕಾರ್ಯಾಚರಣೆ ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆನೆಗಳನ್ನು ಮೂಡಿಗೆರೆಯಿಂದ ಹೊರಕ್ಕೆ ಸ್ಥಳಾಂತರಿಸಬೇಕೆಂಬ ಶಾಸಕರ ಪಟ್ಟು ಮತ್ತು ಭದ್ರಾ ಅಭಯಾರಣ್ಯದತ್ತ ಆನೆಗಳನ್ನು ಕೊಂಡೊಯ್ಯುವ ಅರಣ್ಯ ಇಲಾಖೆಯ ಕ್ರಮದ ನಡುವೆ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ