ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಕ್ಷೇತ್ರ ಮರುವಿಂಗಡಣೆ, ಮಹಿಳಾ ಮೀಸಲಾತಿ ಮಸೂದೆಗಳ ಚರ್ಚೆ ನಡುವೆ ಮುಂದಿನ ವಾರ ಸಂಸತ್ ಕಲಾಪ ಪುನರಾರಂಭ

ನವದೆಹಲಿ: ಮಹಿಳಾ ಮೀಸಲಾತಿ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಸೂದೆಗಳ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನ ನಡೆಸಲು ಮುಂದಾಗಿದೆ. ಅಗತ್ಯ ಸರ್ಕಾರಿ ಕಾರ್ಯಕಲಾಪಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶದಿಂದ ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪಗಳನ್ನು ಪುನರಾರಂಭಿಸಲು ಕೇಂದ್ರ ಸರ್ಕಾರ ಗುರುವಾರ ಕೋರಿದೆ. ಇದರಂತೆ ಲೋಕಸಭೆಯ ಕಲಾಪ ನವೆಂಬರ್ 30ರಂದು ಹಾಗೂ ರಾಜ್ಯಸಭೆಯ ಕಲಾಪ ಡಿಸೆಂಬರ್ 2ರಂದು ಪುನರಾರಂಭಗೊಳ್ಳಲಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು, ಸಂಸತ್ತಿನ ಮುಂಗಾರು ಅಧಿವೇಶನದ ಮುಂದುವರಿದ ಭಾಗವಾಗಿ ಈ ಕಲಾಪಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. ನಿಗದಿತ ಸರ್ಕಾರಿ ಕಾರ್ಯಕಲಾಪಗಳ ಆಧಾರದ ಮೇಲೆ ಎರಡೂ ಸದನಗಳ ಕಲಾಪಗಳು ಡಿಸೆಂಬರ್ 3ರಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ ಎಂದೂ ಅವರು ಹೇಳಿದ್ದಾರೆ.
ಈ ಸಂಬಂಧ ‘ಎಕ್ಸ್‌’ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ನವೆಂಬರ್ 30ರಂದು ಲೋಕಸಭೆಯ ಕಲಾಪವನ್ನು ಪುನರಾರಂಭಿಸುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಹಾಗೂ ಡಿಸೆಂಬರ್ 2ರಂದು ರಾಜ್ಯಸಭೆಯ ಕಲಾಪವನ್ನು ಕರೆಯುವಂತೆ ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಸರ್ಕಾರ ಮನವಿ ಮಾಡಿದೆ ಎಂದು ತಿಳಿಸಿದ್ದಾರೆ.
ಅಗತ್ಯ ಸರ್ಕಾರಿ ಕಾರ್ಯಕಲಾಪಗಳನ್ನು ಕೈಗೆತ್ತಿಕೊಳ್ಳಲು ಈ ಸಭೆಗಳನ್ನು ಕರೆಯಲಾಗಿದೆ. ಕಲಾಪದ ಅಗತ್ಯತೆ ಮತ್ತು ನಿಗದಿತ ಕಾರ್ಯಸೂಚಿಯನ್ನು ಆಧರಿಸಿ ಎರಡೂ ಸದನಗಳ ಕಲಾಪಗಳು ಡಿಸೆಂಬರ್ 3ರಂದು ಮುಕ್ತಾಯಗೊಳ್ಳಬಹುದು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡನೆಯಾಗುವ ಸಾಧ್ಯತೆ?
ಸಂಸತ್ತಿನ ಕಲಾಪ ಪುನರಾರಂಭಗೊಳ್ಳುತ್ತಿರುವ ಬೆನ್ನಲ್ಲೇ ಮಹಿಳಾ ಮೀಸಲಾತಿ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಸಂಬಂಧಿಸಿದ ಮಸೂದೆಗಳನ್ನು ಸರ್ಕಾರ ಮಂಡಿಸಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಆರಂಭವಾಗಿವೆ. ಆದರೆ, ಈ ಅಧಿವೇಶನದಲ್ಲಿ ಯಾವ ಮಸೂದೆಗಳು ಅಥವಾ ಪ್ರಸ್ತಾವನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂಬುದನ್ನು ಕಿರಣ ರಿಜಿಜು ಸ್ಪಷ್ಟಪಡಿಸಿಲ್ಲ.
ಆಗಸ್ಟ್ 13ರಂದು ಲೋಕಸಭೆ ಮತ್ತು ರಾಜ್ಯಸಭೆಯ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. ಆದರೆ, ಎರಡೂ ಸದನಗಳನ್ನು ಅಧಿಕೃತವಾಗಿ ಸತ್ರಾವಸಾನಗೊಳಿಸಿರಲಿಲ್ಲ (ಪ್ರೊರೋಗ್). ಹೀಗಾಗಿ ಮುಂಗಾರು ಅಧಿವೇಶನ ತಾಂತ್ರಿಕವಾಗಿ 100 ದಿನಗಳಿಗೂ ಹೆಚ್ಚು ಕಾಲ ಮುಂದುವರಿದ ಸ್ಥಿತಿಯಲ್ಲಿದೆ. ಇದೀಗ ಅದೇ ಅಧಿವೇಶನದ ಮುಂದುವರಿದ ಭಾಗವಾಗಿ ಹೊಸ ಕಲಾಪಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಪ್ರಮುಖ ಸುದ್ದಿ :-   ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನದ ಕಾಣಿಕೆ ; 45 ಆಭರಣಗಳ ಮೌಲ್ಯ 160 ಕೋಟಿ ರೂ.

ಲೋಕಸಭಾ ಸದಸ್ಯರ ಸಂಖ್ಯೆ 850ಕ್ಕೆ ಹೆಚ್ಚಿಸುವ ಪ್ರಸ್ತಾವನೆ
ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಮಸೂದೆಯು ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಯನ್ನು ಈಗಿನ 543ರಿಂದ 850ಕ್ಕೆ ಹೆಚ್ಚಿಸುವ ಉದ್ದೇಶ ಹೊಂದಿದೆ. ಈ ಮೂಲಕ ಸಂಸತ್ತು ಮತ್ತು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಪ್ರಕ್ರಿಯೆಗೆ ದಾರಿ ಮಾಡಿಕೊಡುವುದು ಸರ್ಕಾರದ ಉದ್ದೇಶವಾಗಿದೆ.
ನವೀಕೃತ ಜನಗಣತಿ ದತ್ತಾಂಶಕ್ಕೆ ಅನುಗುಣವಾಗಿ ಕ್ಷೇತ್ರಗಳ ಮರುವಿಂಗಡಣೆ ಅಗತ್ಯವಾಗಿದೆ. ಅಲ್ಲದೆ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರಲು ಕ್ಷೇತ್ರ ಮರುವಿಂಗಡಣೆ ಸಹಕಾರಿಯಾಗಲಿದೆ ಎಂಬುದು ಸರ್ಕಾರದ ನಿಲುವಾಗಿದೆ.
ಆದರೆ, ಮಹಿಳಾ ಮೀಸಲಾತಿಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸುವುದಕ್ಕೆ ವಿ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಆಕ್ಷೇಪ ವ್ಯಕ್ತಪಡಿಸಿದೆ. ಕ್ಷೇತ್ರ ಮರುವಿಂಗಡಣೆಯ ಷರತ್ತನ್ನು ವಿಧಿಸದೆ, ಈಗಿರುವ 543 ಸದಸ್ಯ ಬಲದ ಲೋಕಸಭೆಯಲ್ಲಿಯೇ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ಅದು ಒತ್ತಾಯಿಸುತ್ತಿದೆ.

ಪ್ರಮುಖ ಸುದ್ದಿ :-   ಭಾರತದ ಸರಕುಗಳ ಮೇಲೆ ಶೇ. 25ರ ಸುಂಕಕ್ಕೆ ಅಮೆರಿಕ ಪ್ರಸ್ತಾವನೆ ; ವ್ಯಾಪಾರ ಒಪ್ಪಂದವಾದರೆ ಸುಂಕ ಇಳಿಕೆ : ಚೀನಾ ಮೇಲೆ...?

ಏಪ್ರಿಲ್‌ನಲ್ಲಿ ಸೋಲು ಕಂಡಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆ
ಮಹಿಳಾ ಮೀಸಲಾತಿ ಹಾಗೂ ಲೋಕಸಭೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಂವಿಧಾನದ 131ನೇ ತಿದ್ದುಪಡಿ ಮಸೂದೆ-2026 ಅನ್ನು ಕೇಂದ್ರ ಸರ್ಕಾರ ಏಪ್ರಿಲ್ 16ರಂದು ಲೋಕಸಭೆಯಲ್ಲಿ ಮಂಡಿಸಿತ್ತು.
ಶಾಸನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಯನ್ನು ತ್ವರಿತವಾಗಿ ಜಾರಿಗೊಳಿಸುವುದು ಮತ್ತು ಲೋಕಸಭೆಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದು ಈ ಮಸೂದೆಯ ಪ್ರಮುಖ ಉದ್ದೇಶವಾಗಿತ್ತು. ಆದರೆ, ಮಸೂದೆ ಅಂಗೀಕಾರಕ್ಕೆ ಅಗತ್ಯವಿದ್ದ ವಿಶೇಷ ಬಹುಮತ ದೊರೆಯದ ಹಿನ್ನೆಲೆಯಲ್ಲಿ ಏಪ್ರಿಲ್ 17ರಂದು ಲೋಕಸಭೆಯಲ್ಲಿ ಮಸೂದೆ ಸೋಲು ಕಂಡಿತ್ತು.
ಇದೀಗ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ವಿಚಾರ ಮತ್ತೆ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿರುವ ಸಂದರ್ಭದಲ್ಲಿ ಸಂಸತ್ತಿನ ಕಲಾಪ ಪುನರಾರಂಭಗೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ. ಆದರೂ, ಈ ಬಾರಿ ಯಾವ ನಿರ್ಧಾರಗಳನ್ನು ಸರ್ಕಾರ ಕೈಗೆತ್ತಿಕೊಳ್ಳಲಿದೆ ಎಂಬುದು ಅಧಿಕೃತ ಕಾರ್ಯಸೂಚಿ ಪ್ರಕಟವಾದ ಬಳಿಕವಷ್ಟೇ ಸ್ಪಷ್ಟವಾಗಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement