ಅಕ್ರಮವಾಗಿ ಸಾಗಿಸುತ್ತಿದ್ದ 32 ಕೋಣಗಳ ರಕ್ಷಣೆ; ಮೂರು ಮಂದಿ ವಶಕ್ಕೆ

ಶಿವಮೊಗ್ಗ: ನಗರ ಪೊಲೀಸರ ಕಾರ್ಯಾಚರಣೆ ನಡೆಸಿ ಶಿವಮೊಗ್ಗದಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 32 ಕೋಣಗಳ ರಕ್ಷಣೆ ಮಾಡಿದ್ದಾರೆ.
ಶಿವಮೊಗ್ಗದಿಂದ ಮಂಗಳೂರಿಗೆ ಸುಮಾರು 32 ಕೋಣಗಳನ್ನು ಕಂಟೇನರ್ ಲಾರಿಯಲ್ಲಿ ತುಂಬಿ ಹಿಂಸಾತ್ಮಕವಾಗಿ ಅಕ್ರಮವಾಗಿ ಕಳ್ಳ ಸಾಗಾಣೆ ಮಾಡಲಾಗುತ್ತಿತ್ತು. ಈ ಘಟನೆಯನ್ನು ಪತ್ತೆಹಚ್ಚಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯ ಹುಲಿಕಲ್ ಘಾಟ್ ಬಳಿಯ ಚೆಕ್ ಪೋಸ್ಟ್‌ ಬಳಿ ನಗರ ಠಾಣೆ ಎಎಸ್ಐ ಬಿ.ಎಸ್. ಪಾಟೀಲ್ ಮತ್ತು ಸಿಬ್ಬಂದಿ ಮಾಹಿತಿ ಮೇರೆಗೆ ಕಂಟೇನರ್ ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ. ಆಗ ಅದರಲ್ಲಿ ಒಟ್ಟು 32 ಕೋಣಗಳು ಇರುವುದು ಪತ್ತೆಯಾಗಿದೆ. ಕೋಣಗಳ ಕಾಲು ಕಟ್ಟಿ ಹಿಂಸಾತ್ಮಕವಾಗಿ ತುಂಬಿ ಒಯ್ಯಲಾಗುತ್ತಿತ್ತು ಎನ್ನಲಾಗಿದೆ. ಕೋಣಗಳನ್ನು ತುಂಬಿದ ಲಾರಿಯು ಶಿವಮೊಗ್ಗ ಕಡೆಯಿಂದ ಹುಲಿಕಲ್ ಮಾರ್ಗವಾಗಿ ಮಂಗಳೂರು ಕಡೆಗೆ ಹೋಗುತ್ತಿತ್ತು ಎನ್ನಲಾಗಿದೆ.
ಒಟ್ಟು 32 ಕೋಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಲಾರಿಯನ್ನು ವಶ ಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement