ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ…! ಇದರ ಬಗ್ಗೆ ಗೊತ್ತೆ..?

ನವದೆಹಲಿ:ನವದೆಹಲಿ: ಕಳೆದ ವಾರದವರೆಗೆ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದ ಕೆಲವು ಭಾಗಗಳ ಹೊರಗಿನ ಕೆಲವರು ಮಾತ್ರ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಬಗ್ಗೆ ಕೇಳಿದ್ದರು. 2023ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಪ್ರಭಾವ ಬೀರಲೂ ವಿಫಲವಾಗಿ, ಅಸ್ತಿತ್ವವೇ ಇಲ್ಲದಂತಾಗಿದ್ದ ಪಶ್ಚಿಮ ಬಂಗಾಳದ ಸಣ್ಣ ರಾಜಕೀಯ ಪಕ್ಷವೊಂದು ಈಗ ದಿಢೀರನೆ ದೇಶದ ಪ್ರಮುಖ ರಾಜಕೀಯ ವಿದ್ಯಮಾನಗಳ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ತಮ್ಮ ಪತ್ರವನ್ನು ಸಲ್ಲಿಸಿದ ತೃಣಮೂಲ ಕಾಂಗ್ರೆಸ್‌ನ (TMC) 20 ಬಂಡಾಯ ಸಂಸದರು ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಜೊತೆ ವಿಲೀನಗೊಳ್ಳುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ, ಈ ಅಸ್ತಿತ್ವವನ್ನೇಕಳೆದುಕೊಂಡಿದ್ದ ಬಹುತೇಕರಿಗೆ ಅಪರಿಚಿತವಾದ ಈ ಪಕ್ಷಕ್ಕೆ ಈಗ ಎಲ್ಲಿಲ್ಲದ ಮಹತ್ವ ಬಂದಿದೆ. ಆರು ವರ್ಷಗಳಷ್ಟು ಹಳೆಯದಾದ ಈ ಪಕ್ಷವು ಈಗ ಅತಿದೊಡ್ಡ ರಾಜಕೀಯ ಕ್ರಾಂತಿಯ ಕೇಂದ್ರಬಿಂದುವಾಗಿದೆ, ತೃಣಮೂಲ ಕಾಂಗ್ರೆಸ್‌ನ 20 ಬಂಡಾಯ ಸಂಸದರು ವಿಲೀನಗೊಳ್ಳುವುದಾಗಿ ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಜೊತೆ ಘೋಷಿಸಿದ ನಂತರ, ಅದು ಸಂಸತ್ತಿನಲ್ಲಿ ಮಹತ್ವದ ಶಕ್ತಿಯಾಗಿ ರೂಪಾಂತರಗೊಂಡಿತು. ಈ ನಡೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಒಳಗಿನ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಿದೆ ಮಾತ್ರವಲ್ಲದೆ, ಬಿಜೆಪಿ ನೇತೃತ್ವದ ಎನ್‌ಡಿಎಗೆ ಅನಿರೀಕ್ಷಿತ ಹೊಸ ಮಿತ್ರಪಕ್ಷವನ್ನು ನೀಡಿದೆ. ಅದು ಈಗ ಎನ್‌ಡಿಎಮೈತ್ರಿಕೂಟದಲ್ಲಿ ಬಿಜೆಪಿ ನಂತರದ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ಟಿಡಿಪಿ 16 ಸಂಸದರನ್ನು ಹೊಂದಿದೆ.
ಟಿಎಂಸಿಯಲ್ಲಿ ಎದ್ದಿರುವ ಭಿನ್ನಮತ ಮತ್ತು ರಾಜಕೀಯ ಬಿಕ್ಕಟ್ಟಿನ ನಡುವೆ, ಈ ಪ್ರಾದೇಶಿಕ ಪಕ್ಷದ ಮೂಲ, ಅದರ ನಾಯಕತ್ವ ಮತ್ತು ಆಂತರಿಕ ಕಾರ್ಯವೈಖರಿಯ ಬಗ್ಗೆ ಈಗ ಇಡೀ ದೇಶ ಕುತೂಹಲದಿಂದ ನೋಡುವಂತಾಗಿದೆ.
ಚುನಾವಣಾ ಆಯೋಗದ ದಾಖಲೆಗಳ ಪ್ರಕಾರ, ‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ (NCPI) ಪಕ್ಷವು 2023ರ ಜನವರಿ 20ರಂದು ‘ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷ’ (RUPP) ಆಗಿ ಅಧಿಕೃತವಾಗಿ ನೋಂದಣಿಯಾಗಿತ್ತು. ಅಂದರೆ, ತ್ರಿಪುರಾ ವಿಧಾನಸಭಾ ಚುನಾವಣೆ ನಡೆಯುವುದಕ್ಕೆ ಕೆಲವೇ ವಾರಗಳ ಮೊದಲು ಈ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು. ಮೂಲತಃ ಪಶ್ಚಿಮ ಬಂಗಾಳದಲ್ಲಿ ನೋಂದಣಿಯಾಗಿದ್ದರೂ, ಈ ಪಕ್ಷ ತನ್ನ ಮೊದಲ ರಾಜಕೀಯ ಅದೃಷ್ಟ ಪರೀಕ್ಷೆಗೆ ಆರಿಸಿಕೊಂಡಿದ್ದು ಮಾತ್ರ ಪಕ್ಕದ ತ್ರಿಪುರಾ ರಾಜ್ಯವನ್ನು!
ರಾಜಕೀಯವಾಗಿ ದೊಡ್ಡ ಮಟ್ಟದ ಪ್ರಭಾವ ಇಲ್ಲದ ಈ ಪಕ್ಷಕ್ಕೆ ಚುನಾವಣಾ ಆಯೋಗದ (ECI) ದಾಖಲೆಗಳ ಪ್ರಕಾರ ಬಂದ ಒಟ್ಟು ದೇಣಿಗೆ ಮೊತ್ತ ಕೇವಲ 1.13 ಲಕ್ಷ ರೂಪಾಯಿಗಳು ಮಾತ್ರ.
ಹೌರಾದಲ್ಲಿ ಒಂದು ಸಣ್ಣ ಕಚೇರಿ, ದಂಪತಿ ನಾಯಕತ್ವ!
ಪಕ್ಷದ ಆಂತರಿಕ ದಾಖಲೆಗಳ ಪ್ರಕಾರ ಶೆವ್ಲಿ ಕುಂದು ಎಂಬುವವರು ಈ ಪಕ್ಷದ ಕೋಶಾಧಿಕಾರಿಯಾಗಿದ್ದಾರೆ. ಇವರು ರಾಜಕೀಯ ಪಕ್ಷದ ಕಚೇರಿ ಇರುವ ಅದೇ ವಿಳಾಸದಲ್ಲೇ ನೋಂದಣಿಯಾಗಿರುವ ‘ಬಿಸ್ವಬಜಾರ್ ಪ್ರೈವೇಟ್ ಲಿಮಿಟೆಡ್’ (ನವೆಂಬರ್ 2021 ರಿಂದ ನಿರ್ದೇಶಕರು) ಮತ್ತು ‘ಪಶ್ಚಿಮ ಬಂಗಾಳ ಅಸಂಘಟಿತ ಮಹಿಳಾ ಕರ್ಮಿ ಅಸೋಸಿಯೇಷನ್’ (ಅಕ್ಟೋಬರ್ 2020 ರಿಂದ ನಿರ್ದೇಶಕರು – ಸಾಮಾಜಿಕ ಸಂಸ್ಥೆ) ಎಂಬ ಇನ್ನೆರಡು ಸಂಸ್ಥೆಗಳಿಗೂ ನಿರ್ದೇಶಕರಾಗಿದ್ದಾರೆ.
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಬಾನಿಪುರ ಪ್ರದೇಶದಲ್ಲಿ ಈ ಮೂರೂ ಸಂಸ್ಥೆಗಳ ನೋಂದಾಯಿತ ಕಚೇರಿ ಇದೆ. ವಿಶೇಷವೆಂದರೆ, ಈ ಪಕ್ಷದ ಅಧ್ಯಕ್ಷರಾಗಿರುವ ಉತ್ತೀಯ ಕುಂದು ಅವರು ಕೋಶಾಧಿಕಾರಿ ಶೆವ್ಲಿ ಕುಂದು ಅವರ ಪತಿಯಾಗಿದ್ದಾರೆ. ಉತ್ತೀಯ ಕುಂದು ಅವರು ಈ ಹಿಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೊಂದಿಗೆ ಇರುವ ಫೋಟೋವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿರುವುದು ಈಗ ಹಲವು ರಾಜಕೀಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ತ್ರಿಪುರಾದಲ್ಲಿ ಹೀನಾಯ ಪ್ರದರ್ಶನ  
ಎನ್‌ಸಿಪಿಐ (NCPI) ನಾಯಕ ಶಂತನು ಡೇ ನೀಡಿರುವ ಮಾಹಿತಿ ಪ್ರಕಾರ, ತ್ರಿಪುರಾ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿ (TTAADC) ವ್ಯಾಪ್ತಿಯಲ್ಲಿ ವಂಚಿತರಾಗಿರುವ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಉದ್ದೇಶದೊಂದಿಗೆ ಪಕ್ಷವು ತ್ರಿಪುರಾ ರಾಜಕಾರಣಕ್ಕೆ ಪ್ರವೇಶಿಸಿತ್ತು.
ಪಕ್ಷವು ಒಟ್ಟು 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ 4 ಕ್ಷೇತ್ರಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಅಂತಿಮವಾಗಿ ಕೇವಲ 2 ಕ್ಷೇತ್ರಗಳಲ್ಲಿ ಪಕ್ಷದ ಅಧಿಕೃತ ಚಿಹ್ನೆಯಡಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚಾವ್ಮಾನು ಕ್ಷೇತ್ರದಲ್ಲಿ 536 ಮತಗಳು ಹಾಗೂ ಕೈಲಾಶಹರ್ ಕ್ಷೇತ್ರದಲ್ಲಿ 286 ಮತಗಳು ಸೇರಿ ತರಿಪುರಾದಲ್ಲಿ ಈ ಪಕ್ಷಕ್ಕೆ 822 ಮತಗಳು ಚಲಾವಣೆಯಾಗಿದ್ದವು. ಇವರ ಜೊತೆಗೆ ಕೃಷ್ಣಕುಮಾರ ದೆಬ್ಬರ್ಮಾ ಎಂಬ ಮತ್ತೊಬ್ಬ ಅಭ್ಯರ್ಥಿ ಅಂಬಾಸಾ ಕ್ಷೇತ್ರದಿಂದ ಪಕ್ಷದ ಬೆಂಬಲದೊಂದಿಗೆ ಪಕ್ಷೇತರವಾಗಿ ಸ್ಪರ್ಧಿಸಿ 376 ಮತಗಳನ್ನು ಪಡೆದಿದ್ದರು. ಇವೆಲ್ಲವನ್ನೂ ಸೇರಿಸಿದರೂ ಈ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಸಿಕ್ಕಿದ್ದು ಕೇವಲ 1,198 ಮತಗಳು. ಯಾವುದೇ ಅಭ್ಯರ್ಥಿಯೂ ಕನಿಷ್ಠ ಪೈಪೋಟಿ ನೀಡಲು ಸಾಧ್ಯವಾಗಿರಲಿಲ್ಲ.
ಹಣಕಾಸಿನ ವಿವಾದ, ಆಂತರಿಕ ಕಲಹ 
ತ್ರಿಪುರಾ ಚುನಾವಣೆಯ ನಂತರ ಪಕ್ಷವು 2023ರ ಪಶ್ಚಿಮ ಬಂಗಾಳ ಪಂಚಾಯತ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿತ್ತು. ಆದರೆ ಆಂತರಿಕ ಭಿನ್ನಮತ ಮತ್ತು ಹಣಕಾಸಿನ ವಿಚಾರವಾಗಿ ನಾಯಕರ ನಡುವೆ ಉಂಟಾದ ಗೊಂದಲಗಳಿಂದಾಗಿ ಇಡೀ ಸಾಂಸ್ಥಿಕ ವ್ಯವಸ್ಥೆಯು ಪಾರ್ಶ್ವವಾಯುವಿಗೆ ಒಳಗಾದಂತಾಗಿತ್ತು.
ನಂತರ 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುವಂತೆ ನಾಯಕ ಶಂತನು ಡೇ ಅವರು ಹಿರಿಯ ನಾಯಕತ್ವಕ್ಕೆ ಪ್ರಸ್ತಾಪ ಇಟ್ಟಿದ್ದರಾದರೂ, ಸಂಪನ್ಮೂಲಗಳ ಮತ್ತು ಹಣದ ಕೊರತೆಯಿಂದಾಗಿ ಆ ಯೋಜನೆ ಮುಂದುವರಿದಿರಲಿಲ್ಲ.
ಸಂಸತ್ತಿನ ಗದ್ದುಗೆಗೆ ಲಗ್ಗೆ ಇಟ್ಟ ಸಣ್ಣ ಪಕ್ಷ!
ಇಂತಹ ಅತ್ಯಂತ ಸಣ್ಣ ರಾಜಕೀಯ ಹಿನ್ನೆಲೆಯುಳ್ಳ ಪಕ್ಷವೇ ಈಗ ಲೋಕಸಭೆಯ ಮೂರನೇ ಎರಡರಷ್ಟು ಟಿಎಂಸಿ ಸಂಸದರ ಬಂಡಾಯದ ತಾಣವಾಗಿದೆ. ತೃಣಮೂಲ ಕಾಂಗ್ರೆಸ್‌ನಿಂದ ಹೊರಬಂದಿರುವ 20 ರೆಬೆಲ್ ಸಂಸದರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ತಮಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಸ್ಪೀಕರ್ ಭೇಟಿಯ ನಂತರ ಮಾತನಾಡಿದ ಬಂಡಾಯ ಬಣದ ಪ್ರಮುಖ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್, ತಮಗೆ ಪ್ರತ್ಯೇಕ ಸಂಸದೀಯ ಗುಂಪಾಗಿ ಮಾನ್ಯತೆ ನೀಡುವಂತೆ ಪತ್ರ ಸಲ್ಲಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಇತ್ತ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕ ಸುದೀಪ್ ಬಂಡೋಪಾಧ್ಯಾಯ ಕೂಡ ಬಂಡಾಯಗಾರರು ಎನ್‌ಸಿಪಿಐ (NCPI) ಎಂಬ ಪ್ರಾದೇಶಿಕ ಪಕ್ಷದೊಂದಿಗೆ ವಿಲೀನಗೊಂಡಿರುವುದನ್ನು ಖಚಿತಪಡಿಸಿದ್ದಾರೆ. ಈ ಮೂಲಕ ಬಂಗಾಳದ ಗಲ್ಲಿಯಲ್ಲಿದ್ದ ಅನಾಮಧೇಯ ಪಕ್ಷವೊಂದು ಈಗ ದೇಶದ ಸಂಸತ್ತಿನಲ್ಲಿ ಪ್ರಮುಖ ಧ್ವನಿಯಾಗಿ ಬದಲಾಗುವ ಹಂತಕ್ಕೆ ಬಂದು ತಲುಪಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement