ಉತ್ತರ ಕನ್ನಡ ಜಿಲ್ಲೆ ಅತಿವೃಷ್ಟಿ-ಪ್ರವಾಹಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ: ದೇಶಪಾಂಡೆ

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ ಅಪಾರ ಪ್ರಮಾಣದಲ್ಲಿ ಆಸ್ತಿ,ಬೆಳೆಗಳು, ಮನೆಗಳು ಮತ್ತು ಜೀವ ಹಾನಿಯಾಗಿದ್ದರೂ ಸರ್ಕಾರ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಅತಿವೃಷ್ಠಿಯಲ್ಲಿ ಹಾನಿಗೊಳಗಾದ ತಾಲೂಕಿನ ಹಲವು ಭಾಗಗಳಿಗೆ ಭೇಟಿ ನೀಡಿ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೪ ದಿನಗಳಿಂದ ಹಾನಿಗೊಳಗಾದ ಜಿಲ್ಲೆಯ ಹಲವು ಭಾಗಗಳಿಗೆ ಭೇಟಿ ನೀಡಿದ್ದು ಅಲ್ಲಿಯ ಸ್ಥಿತಿಗತಿಗಳನ್ನು ಗಮನಿಸಿದ್ದೇನೆ. ಹಾನಿಯ ಕುರಿತಾದ ಸಮರ್ಪಕ ಸಮೀಕ್ಷೆ ಆರಂಭಗೊಂಡಿಲ್ಲ. ಈ ತಾಲೂಕಿನ ಹಾನಿಗೊಳಗಾದ ಕೆಲವು ಸ್ಥಳಗಳಿಗೆ ತಹಶೀಲ್ದಾರರು ಈವರೆಗೆ ಹೋಗಿಲ್ಲ. ಅಧಿಕಾರಿಗಳ ನಿಷ್ಕ್ರಿಯತೆ ಎದ್ದು ಕಾಣುತ್ತಿದ್ದು ರಾಜ್ಯ ಸರಕಾರ ಕೂಡಲೇ ನೊಂದಿರುವ ಜನರ ಸಮಸ್ಯೆ ನೀಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
೨೦೧೯ರಲ್ಲಿ ಆದ ಪ್ರಕೃತಿವಿಕೋಪದಿಂದ ಹಾನಿಗೊಳಗಾದವರಿಗೆ ಈವರೆಗೆ ಪೂರ್ತಿ ಪರಿಹಾರ ದೊರಕಿಲ್ಲ. ಬಿದ್ದ ಮನೆಗಳಿಗೆ ಹಣ ಕೊಟ್ಟಿಲ್ಲ. ಸರಕಾರಕ್ಕೆ ಏನಾಗಿದೆ ಅರ್ಥವಾಗುತ್ತಿಲ್ಲ. ಈ ತರಹದ ಬೇಜವಬ್ದಾರಿ ಸರಿಯಲ್ಲ. ದಿನಾಲೂ ಭರವಸೆ ಕೊಡುವ ಬದಲು ಖಜಾನೆಯಲ್ಲಿ ಹಣ ಇಲ್ಲವೆಂದರೆ ಸ್ಪಷ್ಟವಾಗಿ ಹೇಳಲಿ. ಸರಕಾರದಿಂದ ಸ್ಪಂದನೆ ಬೇಕು. ಪೊಳ್ಳು ಘೋಷಣೆಯ ಬದಲು ಜವಾಬ್ದಾರಿಯಿಂದ ವರ್ತನೆ ಮಾಡಿ. ಆದೇಶಗಳನ್ನು ಅನುಷ್ಠಾನಕ್ಕೆ ತನ್ನಿ ಎಂದು ಆಗ್ರಹಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಂತ್ರಿಯಾದವರು ಉತ್ತಮ ಕೆಲಸ ಮಾಡಿ ಒಳ್ಳೆಯ ಹೆಸರು ಪಡೆಯಬೇಕು. ಯಾರನ್ನೂ ತರಬೇತಿ ಕೊಟ್ಟು ಮಂತ್ರಿ ಮಾಡುವುದಿಲ್ಲ. ಜನರ, ಅಭಿವೃದ್ಧಿ ಪರ ಭಾವನೆ ಇದ್ದರೆ ಖಂಡಿತ ಕೆಲಸ ಕಲಿಯಲು ಸಾಧ್ಯ. ಮಂತ್ರಿ, ಶಾಸಕರು ಜನರ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಕಳೆದ ೨ ವರ್ಷದಲ್ಲಿ ಬಿಜೆಪಿ ಸರಕಾರ ಏನೂ ಅಭಿವೃದ್ಧಿ ಮಾಡಿಲ್ಲ. ಕೋವಿಡ್-೧೯ ನೆಪ ಹೇಳುತ್ತದೆ. ಈ ಜಿಲ್ಲೆಯಲ್ಲಿ ನಮ್ಮ ಸರಕಾರವಿದ್ದಾಗ ಮಂಜೂರಿಯಾದ ಸರಕಾರಿ ಕಟ್ಟಡಗಳು, ಆಸ್ಪತ್ರೆ ಕಟ್ಟಡಗಳು, ಮೂಲಭೂತ ಸೌಕರ್ಯದ ಕಾರ್ಯಗಳು ಆಗಿವೆಯೇ ಹೊರತು ಬಿಜೆಪಿ ಸರಕಾರದ ಕೊಡುಗೆ ಏನಿದೆ? ಬಿಜೆಪಿ ನಾಯಕರು ಕೊರೊನಾ ಮತ್ತು ಅತಿವೃಷ್ಠಿ ಸಂದರ್ಭದಲ್ಲಿ ಸ್ಪಂದಿಸದಿದ್ದರೂ ಕಾಂಗ್ರೆಸ್ ಪಕ್ಷ ಆ ಕುರಿತು ಮುಂದೆ ಹೆಜ್ಜೆ ಇಟ್ಟಿದೆ. ಸಹಾಯ ಹಸ್ತ ನೀಡಿದೆ. ಸಂತ್ರಸ್ತರ ಹಾಗೂ ಹಾನಿಯಾದ್ದರ ಬಗ್ಗೆ ಸಮೀಕ್ಷೆ ಮಾಡಲು ತಂಡಗಳನ್ನು ರಚಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ, ಧುರೀಣರಾದ ನಿವೇದಿತ ಆಳ್ವ, ಸುಷ್ಮಾ ರೆಡ್ಡಿ, ಕೆ.ಜಿ.ನಾಗರಾಜ, ಆರ್.ಎಂ.ಹೆಗಡೆ ಮುಂತಾದವರಿದ್ದರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement