
ನವದೆಹಲಿ: ಬುಧವಾರ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಡಿಕೆ ಶಿವಕುಮಾರ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದರ ಬೆನ್ನಲ್ಲೇ ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ಸಿನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ ಅವರನ್ನು ಕೆಪಿಸಿಸಿ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಬಿಕೆ ಹರಿಪ್ರಸಾದ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬುಧವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸತೀಶ ಜಾರಕಿಹೊಳಿ ಮತ್ತು ಈಶ್ವರ ಖಂಡ್ರೆ ಅವರ ಹೆಸರುಗಳು ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪ್ರಬಲವಾಗಿ ಕೇಳಿಬಂದಿದ್ದವು. ಇಬ್ಬರೂ ನಾಯಕರು ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಜಾರಿಗೆ ತಂದಿರುವ ‘ಒಬ್ಬರಿಗೆ ಒಂದೇ ಸ್ಥಾನಮಾನ’ ಎಂಬ ನಿರ್ಣಯದ ಹಿನ್ನೆಲೆಯಲ್ಲಿ ಅವರು ಸಚಿವರಾಗಿದ್ದರಿಂದ ಹೈಕಮಾಂಡ್ ಮತ್ತೊಬ್ಬ ಅನುಭವಿ ನಾಯಕ ಬಿ.ಕೆ.ಹರಿಪ್ರಸಾದ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ.

ಈಡಿಗ ಸಮುದಾಯದವರಾದ ಬಿ.ಕೆ. ಹರಿಪ್ರಸಾದ ಈ ಹಿಂದೆ ರಾಜ್ಯಸಭಾ ಸದಸ್ಯರಾಗಿದ್ದವರು ಹಾಗೂ ದೆಹಲಿ ರಾಜಕಾರಣದಲ್ಲಿ ದೀರ್ಘಕಾಲ ಸಕ್ರಿಯರಾಗಿದ್ದವರು. ಅಲ್ಲದೆ ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದಾರೆ. ಅವರು ಜನವರಿ 2022 ರಿಂದ ಮೇ 2023 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿಯೂ ಹೊಣೆಗಾರಿಕೆ ನಿಭಾಯಿಸಿದ್ದರು.
2006 ರಿಂದ 2018 ರವರೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ, 18ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಮತ್ತು ಸಾಂಸ್ಥಿಕ ಉಸ್ತುವಾರಿಯಾಗಿ ಕೆಲಸ ಮಾಡಿದ ವ್ಯಾಪಕ ಅನುಭವ ಹೊಂದಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ