ನವದೆಹಲಿ : ಆಮ್ ಆದಿ ಪಕ್ಷ (ಎಎಪಿ) ತೊರೆದ ಒಂದು ದಿನದ ನಂತರ, ದೆಹಲಿಯ ಮಾಜಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಸೋಮವಾರ ಭಾರತೀಯ ಜನತಾ ಪಕ್ಷ(ಬಿಜೆಪಿ)ವನ್ನು ಸೇರ್ಪಡೆಯಾಗಿದ್ದಾರೆ.
ಕೇಂದ್ರ ಸಚಿವ ಮನೋಹರಲಾಲ ಖಟ್ಟರ್ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಅವರ ಸಮ್ಮುಖದಲ್ಲಿ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿಗೆ ಸೇರ್ಪಡೆಯಾದ ನಂತರ ಮಾತನಾಡಿದ ಅವರು, ಕೆಲವರು ಈ ನಿರ್ಧಾರವನ್ನು ರಾತ್ರೋರಾತ್ರಿ ಮತ್ತು ಯಾರೋ ಒಬ್ಬರ ಒತ್ತಡದಿಂದ ತೆಗೆದುಕೊಳ್ಳಲಾಗಿದೆ ಎಂದು ಭಾವಿಸುತ್ತಿದ್ದಾರೆ. ಆದರೆ ನಾನು ಇಲ್ಲಿಯವರೆಗೆ ಯಾರ ಒತ್ತಡಕ್ಕೂ ಮಣಿದು ಏನನ್ನೂ ಮಾಡಿಲ್ಲ ಎಂದು ಅವರಿಗೆ ಹೇಳಬಯಸುತ್ತೇನೆ. ನಾನು ಇ.ಡಿ. ಮತ್ತು ಸಿಬಿಐ ಒತ್ತಡದಲ್ಲಿ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಹೇಳಲಾಗುತ್ತಿದೆ. ಆದರೆ ಇದೆಲ್ಲ ಸುಳ್ಳು ಎಂದು ಅವರು ಹೇಳಿದ್ದಾರೆ.
ಮೌಲ್ಯಗಳಿಗೆ ಧಕ್ಕೆಯಾಗುತ್ತಿರುವುದನ್ನು ಕಂಡಾಗ ಅತೀವ ನೋವು ಉಂಟಾಗಿದೆ. ನಾವು ಯಾವ ಉದ್ದೇಶಕ್ಕಾಗಿ ಒಗ್ಗೂಡಿದ್ದೇವೆ ಎಂಬುದು ಈಗ ಎಎಪಿಯಲ್ಲಿ ಗೋಚರಿಸುತ್ತಿಲ್ಲ. ಸರ್ಕಾರವು ಪ್ರತಿಯೊಂದು ವಿಷಯದಲ್ಲೂ ಕೇಂದ್ರ ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದರೆ, ದೆಹಲಿಯ ಅಭಿವೃದ್ಧಿ ನಡೆಯಲು ಸಾಧ್ಯವಿಲ್ಲ” ಎಂದು ಗಹ್ಲೋಟ್ ಹೇಳಿದರು. “ದೆಹಲಿಯ ಅಭಿವೃದ್ಧಿಯು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಮಾತ್ರ ಆಗಬಹುದು ಎಂದು ನಾನು ದೃಢವಾಗಿ ನಂಬುತ್ತೇನೆ. ಅದಕ್ಕಾಗಿಯೇ ನಾನು ಬಿಜೆಪಿಗೆ ಸೇರಿದ್ದೇನೆ. ನಾನು ಪ್ರಧಾನಿಯವರ ದೂರದೃಷ್ಟಿ ಮತ್ತು ನೀತಿಗಳಿಂದ ಪ್ರೇರಿತನಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ” ಎಂದು ಅವರು ಹೇಳಿದರು.
ದೆಹಲಿ ಅಸೆಂಬ್ಲಿ ಚುನಾವಣೆಗೆ ಮುಂಚಿತವಾಗಿ ಕೈಲಾಶ ಗಹ್ಲೋಟ್ ಪಕ್ಷವನ್ನು ತೊರೆದಿರುವುದು ಎಎಪಿಗೆ ಆಘಾತ ತಂದಿದೆ. ಗಹ್ಲೋಟ್ ಭಾನುವಾರ ಆಮ್ ಆದ್ಮಿ ಪಕ್ಷವನ್ನು ತೊರೆದರು, ಜನರ ಕಡೆಗಿನ ಪಕ್ಷದ ಬದ್ಧತೆಯನ್ನು ಮೀರಿ “ರಾಜಕೀಯ ಮಹತ್ವಾಕಾಂಕ್ಷೆಗಳು” ಮಹತ್ವ ಪಡೆಯುತ್ತಿದೆ ಎಂದು ಅವರು ಆರೋಪಿಸಿದರು. ‘ಶೀಷ್ಮಹಲ್’ ನಂತಹ ಕೆಲವು “ಅಯೋಗ್ಯ” ಮತ್ತು “ಮುಜುಗರದ” ವಿವಾದಗಳನ್ನು ಫ್ಲ್ಯಾಗ್ ಮಾಡಿದ ಅವರು ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು, ಇವು “ನಾವು ಇನ್ನೂ “ಆಮ್ ಆದ್ಮಿ” ಎಂದು ನಂಬಿದ್ದೇವೆಯೇ ಎಂಬುದರ ಬಗ್ಗೆ ಎಲ್ಲರಿಗೂ ಅನುಮಾನ ಉಂಟು ಮಾಡುತ್ತದೆ ಎಂದು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ