ಜೈಪುರ: ಬಿಜೆಪಿ ತನ್ನ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದಿಂದ ಟೀಕೆಗೆ ಒಳಗಾಗಿದೆ, ಆರೆಸ್ಸೆಸ್ ನಾಯಕ ಇಂದ್ರೇಶಕುಮಾರ ಅವರು ಲೋಕಸಭೆ ಚುನಾವಣೆಯಲ್ಲಿ ಆಡಳಿತ ಪಕ್ಷವಾದ ಬಿಜೆಪಿಯ ಇತ್ತೀಚಿನ ಕಳಪೆ ಪ್ರದರ್ಶನವನ್ನು “ದುರಹಂಕಾರ” ಎಂದು ಟೀಕಿಸಿದ್ದಾರೆ.
ಜೈಪುರ ಸಮೀಪದ ಕನೋಟಾದಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂದ್ರೇಶಕುಮಾರ ಅವರು, “ಶ್ರೀರಾಮನ ಭಕ್ತರು ಕ್ರಮೇಣ ದುರಹಂಕಾರಿಯಾದರು. ಆ ಪಕ್ಷವನ್ನು ಅತಿದೊಡ್ಡ ಪಕ್ಷವೆಂದು ಘೋಷಿಸಲಾಯಿತು, ಆದರೆ ದುರಹಂಕಾರದ ಕಾರಣದಿಂದ ಶ್ರೀರಾಮನು 241ಕ್ಕೆ ಅದನ್ನು ನಿಲ್ಲಿಸಿದ್ದಾನೆ” ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ 240 ಸ್ಥಾನಗಳನ್ನು ಗಳಿಸಿದ ಆದರೆ ಬಹುಮತಕ್ಕೆ ಬೇಕಾದ ಸಂಖ್ಯಾ ಬಲದ ಕೊರತೆಯಿರುವ ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡು ಈ ಕಾಮೆಂಟ್ ಮಾಡಲಾಗಿದೆ. ಈ ಫಲಿತಾಂಶವು 2014ರಿಂದ ಈವರೆಗಿನ ಪಕ್ಷದ ಅತ್ಯಂತ ಕಳಪೆ ಪ್ರದರ್ಶನವಾಗಿದೆ.
ಇಂದ್ರೇಶಕುಮಾರ ಅವರು, ಇಂಡಿಯಾ ಮೈತ್ರಿಕೂಟವನ್ನೂ ಟೀಕಿಸಿದ್ದಾರೆ. ಮೈತ್ರಿಕೂಟವನ್ನು”ರಾಮ ವಿರೋಧಿ” ಎಂದು ಅವರು ಬ್ರಾಂಡ್ ಮಾಡಿದರು.
ಪ್ರತಿಪಕ್ಷಗಳ ಮೈತ್ರಿಯನ್ನು ನೇರವಾಗಿ ಹೆಸರಿಸದೆ, “ಮತ್ತು ರಾಮನಲ್ಲಿ ನಂಬಿಕೆಯಿಲ್ಲದವರನ್ನು ಒಟ್ಟಾಗಿ 234 ರಲ್ಲಿ ನಿಲ್ಲಿಸಲಾಯಿತು. ದೇವರ ನ್ಯಾಯವು ನಿಜ ಮತ್ತು ಆನಂದದಾಯಕವಾಗಿದೆ” ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು 234 ಸ್ಥಾನಗಳನ್ನು ಪಡೆದುಕೊಂಡಿದೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರು ಸಾರ್ವಜನಿಕ ಸೇವೆಯಲ್ಲಿ ನಮ್ರತೆಯ ಮಹತ್ವವನ್ನು ಒತ್ತಿ ಹೇಳಿದ ನಂತರ ಈ ಹೇಳಿಕೆಗಳು ಬಂದಿವೆ.
“ನಿಜವಾದ ಸೇವಕನು ಘನತೆಯನ್ನು ಕಾಯ್ದುಕೊಳ್ಳುತ್ತಾನೆ. ಆತ ಕೆಲಸ ಮಾಡುವಾಗ ಸಭ್ಯತೆ ಅನುಸರಿಸುತ್ತಾನೆ. ಆತ ‘ನಾನು ಈ ಕೆಲಸ ಮಾಡಿದ್ದೇನೆ’ ಎಂದು ಹೇಳುವ ಅಹಂಕಾರವನ್ನು ಹೊಂದಿರುವುದಿಲ್ಲ. ಆ ವ್ಯಕ್ತಿಯನ್ನು ಮಾತ್ರ ನಿಜವಾದ ಸೇವಕ ಎಂದು ಕರೆಯಬಹುದು” ಎಂದು ಭಾಗವತ್ ಹೇಳಿದ್ದಾರೆ. ಮೋಹನ ಭಾಗವತ್ ಅವರು ಅಹಿಂಸೆ ಮತ್ತು ಸತ್ಯದ ತತ್ವಗಳನ್ನು ಉಲ್ಲೇಖಿಸಿ ಪ್ರತಿಯೊಬ್ಬರ ಬಗ್ಗೆ ನಮ್ರತೆ ಮತ್ತು ಸದ್ಭಾವನೆಯ ಅಗತ್ಯವನ್ನು ಒತ್ತಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ