ಶಿವಮೊಗ್ಗ: ಸಮೀಪದ ತ್ಯಾವರೆಕೊಪ್ಪದ ಟೈಗರ್ ಅಂಡ್ ಲಯನ್ ಸಫಾರಿಯಲ್ಲಿ 12 ವರ್ಷದ ಹೆಣ್ಣು ನೀರಾನೆ ‘ಹಂಸಿನಿ’ ಮಂಗಳವಾರ ಮೃತಪಟ್ಟಿದೆ ಎಂದು ವರದಿಯಾಗಿದೆ. ಇದೇ ನೀರಾನೆ ಮಾರ್ಚ್ 19ರಂದು ಮೃಗಾಲಯದ ಪಶುವೈದ್ಯ ತರಬೇತಿ ವಿದ್ಯಾರ್ಥಿನಿ ಸಮೀಕ್ಷಾ ರೆಡ್ಡಿ (27) ಅವರ ಸಾವಿಗೆ ಕಾರಣವಾಗಿತ್ತು.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 12 ವರ್ಷದ ಹೆಣ್ಣು ನೀರಾನೆ (Hippopotamus) ಹಂಸಿನಿಯ ಗರ್ಭದಲ್ಲೇ ಮರಿ ಸಾವಿಗೀಡಾದ ಪರಿಣಾಮ ಉಂಟಾದ ಗಂಭೀರ ಸೋಂಕಿನಿಂದ ಮೃತಪಟ್ಟಿದೆ ಎನ್ನಲಾಗಿದೆ.
ಎಂಟು ತಿಂಗಳ ಗರ್ಭಾವಧಿ ಮಾರ್ಚ್ ಮಧ್ಯಭಾಗದಲ್ಲಿ ಪೂರ್ಣಗೊಂಡಿದ್ದರೂ, ಹೆರಿಗೆಗೆ ಸಂಬಂಧಿಸಿದ ಲಕ್ಷಣಗಳು ಗೋಚರಿಸಲಿಲ್ಲ. ಕೆಲವು ದಿನಗಳಿಂದ ಪ್ರಾಣಿಯ ಆಹಾರ ಸೇವನೆ ಕಡಿಮೆಯಾಗಿದ್ದು, ನಿಷ್ಕ್ರಿಯವಾಗಿತ್ತು. ಅದರ ಚಟುವಟಿಕೆ ಮಂದವಾಗಿತ್ತು. ಈ ಹಿನ್ನೆಲೆಯಲ್ಲಿ, ಏಪ್ರಿಲ್ 10ರಂದು ಮೈಸೂರಿನ ಮೃಗಾಲಯ ಪ್ರಾಧಿಕಾರದಿಂದ ಬಂದ ವನ್ಯಜೀವಿ ಪಶುವೈದ್ಯರ ತಂಡವು ಹಂಸಿನಿಯ ಆರೋಗ್ಯವನ್ನು ಸಮಗ್ರವಾಗಿ ಪರಿಶೀಲಿಸಿದ ನಂತರ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಭ್ರೂಣದ ಸೋಂಕು ಶರೀರವನ್ನು ವ್ಯಾಪಿಸಿದ್ದರಿಂದ ಅದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ಹೇಳಲಾಗಿದೆ.
12 ವರ್ಷದ ಈ ನೀರಾನೆ ಈ ಹಿಂದೆ ಎರಡು ಬಾರಿ ಮರಿಗಳಿಗೆ ಜನ್ಮ ನೀಡಿದ್ದರೂ ಆ ಎರಡೂ ಮರಿಗಳು ಕೆಲವೇ ದಿನಗಳಲ್ಲಿ ಮೃತಪಟ್ಟಿತ್ತು ಎನ್ನಲಾಗಿದೆ. ಈ ಬಾರಿ ಅದು ಮೂರನೇ ಬಾರಿಗೆ ಗರ್ಭ ಧರಿಸಿತ್ತು. ಹೀಗಾಗಿ ಈ ಬಾರಿ ಮೃಗಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ಕಾಳಜಿ ವಹಿಸಿದ್ದರು. ಆದರೂ ಸಹ ಈ ಬಾರಿಯೂ ಮರಿ ಕಣ್ಣು ಬಿಡುವ ಮೊದಲೇ ಗರ್ಭದಲ್ಲಿ ಸಾವಿಗೀಡಾಗಿತ್ತು. ಈಗ ತಾಯಿ ನೀರಾನೆ ಹಂಸಿನಿ ಸಹ ಮೃತಪಟ್ಟಿದೆ.
ಈ ನೀರಾನೆ ಮಾರ್ಚ್ 19 ರಂದು ಮಧ್ಯರಾತ್ರಿ ತನಗೆ ಚಿಕಿತ್ಸೆ ನೀಡಲು ಬಂದ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಮೇಲೆ ದಾಳಿ ಮಾಡಿತ್ತು. ಈ ಭೀಕರ ದಾಳಿಯಲ್ಲಿ ಡಾ. ಸಮೀಕ್ಷಾ ಅವರು ಮೃತಪಟ್ಟಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ