ಅಭಿಜೀತ್ ದೀಪ್ಕೆಗೆ ಷರತ್ತುಬದ್ಧ ಜಾಮೀನು ನೀಡಿದ ದೆಹಲಿ ಕೋರ್ಟ್

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ  ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳ ಭಾಗವಾಗಿ ಕನ್ನಾಟ್ ಪ್ಲೇಸ್‌ಗೆ ಮೆರವಣಿಗೆಯಲ್ಲಿ ತೆರಳಲು ಸಿದ್ಧತೆ ನಡೆಸಿದ್ದ ಕಾಕ್ರೋಚ್‌ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ ದೀಪ್ಕೆ ಅವರನ್ನು ಷರತ್ತುಬದ್ಧವಾಗಿ ಬಿಡುಗಡೆ ಮಾಡುವಂತೆ ದೆಹಲಿ ನ್ಯಾಯಾಲಯ ಶನಿವಾರ ಆದೇಶಿಸಿದೆ. ಶುಕ್ರವಾರ ಅವರನ್ನು ವಶಕ್ಕೆ ಪಡೆದು ಬಳಿಕ ಬಂಧಿಸಲಾಗಿತ್ತು. ಶಾಂತಿಭಂಗ ಉಂಟುಮಾಡುವುದಿಲ್ಲ ಎಂಬ ಭರವಸೆ ನೀಡಿ 50 ಸಾವಿರ ರೂ. ಬಾಂಡ್ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ ಎಂದು ತಿಳಿದುಬಂದಿದೆ.
ಮ್ಯಾಜಿಸ್ಟ್ರೇಟ್ ವಿಚಾರಣೆ ಬಳಿಕ ಆದೇಶ ಹೊರಬಿದ್ದ ಕೂಡಲೇ ದೀಪ್ಕೆ ಅವರು ಮಂದಿರ ಮಾರ್ಗ್ ಪೊಲೀಸ್ ಠಾಣೆಯಿಂದ ಹೊರಬಂದರು.
ದೀಪ್ಕೆ ಅವರ ಜೊತೆಗೆ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ಅಧ್ಯಕ್ಷೆ ನೇಹಾ ಬೋರಾ ಅವರನ್ನೂ ಶುಕ್ರವಾರ ವಶಕ್ಕೆ ಪಡೆಯಲಾಗಿತ್ತು. ಅವರು ಶನಿವಾರ ಮುಂಜಾನೆ ಬಿಡುಗಡೆಯಾದರೆ, ದೀಪ್ಕೆ ಅವರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಜಂತರ್ ಮಂತರ್‌ನಲ್ಲಿ ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದ ಮೇಲೆ ಸಿಜೆಪಿ ನಾಯಕರಾದ ಆಶುತೋಷ ರಾಂಕಾ ಮತ್ತು ಸೌರವ್ ದಾಸ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕಳೆದ ವಾರ ಜಂತರ್ ಮಂತರ್ ಸ್ಥಳವನ್ನು ಪ್ರತಿಭಟನೆ ನಡೆಸಲು ಅನುಮತಿ ಇರುವ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿತ್ತು.
ಶುಕ್ರವಾರ ಸಂಜೆ ಕನ್ನಾಟ್ ಪ್ಲೇಸ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತ ಮೆರವಣಿಗೆ ನಡೆಸಲು ಯೋಜಿಸಲಾಗಿತ್ತು. ‘ಲೆಹ್ರಾ ದೋ ತಿರಂಗಾ’ (ತ್ರಿವರ್ಣ ಧ್ವಜ ಹಾರಿಸಿ) ಎಂಬ ಹೆಸರಿನ ಈ ಪ್ರತಿಭಟನಾ ಮೆರವಣಿಗೆಗೂ ಮುನ್ನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನೇಹಾ ಬೋರಾ ಮತ್ತು ಅಭಿಜೀತ ದೀಪ್ಕೆ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ, ಹಲವರು ರಾಷ್ಟ್ರಧ್ವಜ ಹಿಡಿದು ಸಣ್ಣ ಪ್ರಮಾಣದ ಮೆರವಣಿಗೆಗಳನ್ನು ನಡೆಸಿದರು.
ದೆಹಲಿ ಪೊಲೀಸ್ ಕಾಯ್ದೆಯಡಿ ವಶಕ್ಕೆ ಪಡೆದಿದ್ದ ನೇಹಾ ಬೋರಾ ಅವರನ್ನು ಬಂಧನಕ್ಕೆ ಸಂಬಂಧಿಸಿದ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಬಿಡುಗಡೆ ಮಾಡಲಾಯಿತು. ಆದರೆ, ಶಾಂತಿಭಂಗ ಉಂಟುಮಾಡಿದ ಆರೋಪದ ಮೇಲೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 126 ಮತ್ತು 170ರ ಅಡಿಯಲ್ಲಿ ಅಭಿಜೀತ ದೀಪ್ಕೆ ವಿರುದ್ಧ ಹೊಸ ಪ್ರಕರಣ ದಾಖಲಿಸಿ ಅಧಿಕೃತವಾಗಿ ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದಕ್ಕೂ ಮೊದಲು, ಅಕ್ಟೋಬರ್ 10ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನದೊಳಗಿದ್ದ ದೀಪ್ಕೆ ಅವರನ್ನು ವಶಕ್ಕೆ ಪಡೆದಾಗಲೂ ಶಾಂತಿಭಂಗಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿತ್ತು. ಆಗ ಒಂದು ವರ್ಷದವರೆಗೆ ಶಾಂತಿಭಂಗ ಉಂಟುಮಾಡುವುದಿಲ್ಲ ಎಂಬ ಬಾಂಡ್‌ಗೆ ಸಹಿ ಹಾಕುವಂತೆ ಅವರಿಗೆ ಸೂಚಿಸಲಾಗಿತ್ತು.
ಪೊಲೀಸರ ಕ್ರಮಕ್ಕೆ ನೇಹಾ ಬೋರಾ ಆಕ್ರೋಶ
ಬಿಡುಗಡೆಯಾದ ಬಳಿಕ ಪ್ರತಿಕ್ರಿಯಿಸಿದ ನೇಹಾ ಬೋರಾ, ದೆಹಲಿ ಪೊಲೀಸರು ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿರುವುದು ಕಾನೂನುಬಾಹಿರ ಎಂದು ಆರೋಪಿಸಿದ ಅವರು, ವಿವಾದಾತ್ಮಕ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision — SIR) ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಜೈಲಿಗೆ ಕಳುಹಿಸಬೇಕು ಎಂದೂ ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ಅನುಮೋದನೆ ಇದೆ ಎಂದ ಚುನಾವಣಾ ಆಯೋಗ
ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಎಲ್ಲ ನಿರ್ಧಾರಗಳಿಗೆ ಸುಪ್ರೀಂ ಕೋರ್ಟ್ ಈಗಾಗಲೇ ಅನುಮೋದನೆ ನೀಡಿದೆ ಎಂದು ಚುನಾವಣಾ ಆಯೋಗ ಹೇಳುತ್ತ ಬಂದಿದೆ. ಮತ್ತೊಂದೆಡೆ, ಪ್ರತಿಪಕ್ಷಗಳು, ಕಾಕ್ರೋಚ್‌ ಜನತಾ ಪಾರ್ಟಿ ಮತ್ತು ಕೆಲವು ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿರುವ ಇತ್ತೀಚಿನ ಪ್ರತಿಭಟನೆಗಳನ್ನು ಬಿಜೆಪಿ ‘ಅರಾಜಕತೆ ಹರಡುವ ಪ್ರಯತ್ನಗಳು’ ಎಂದು ಟೀಕಿಸಿದೆ.

ಪ್ರಮುಖ ಸುದ್ದಿ :-   ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌, ಏಕದಿನ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement