ವಾಲ್ಮೀಕಿ ಅಭಿವೃದ್ದಿ ನಿಗಮ ಹಗರಣ: ತನಿಖೆಗೆ ಎಸ್‌ಐಟಿ ರಚಿಸಿದ ಸರ್ಕಾರ

ಬೆಂಗಳೂರು : ಶಿವಮೊಗ್ಗ ಜಿಲ್ಲೆಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧೀಕ್ಷಕರಾದ ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣ ಹಾಗೂ ನಿಗಮದಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರಗಳ ಪ್ರಕರಣಗಳ ಸಮಗ್ರ ತನಿಖೆಯನ್ನು ವಿಶೇಷ ತನಿಖಾ ತಂಡ ರಚಿಸಿ ನಡೆಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯ ನಂತರ ಎಸ್‌ಐಟಿ ರಚಿಸಿ ಸರ್ಕಾರದಿಂದ ಅಧಿಕೃತ ಆದೇಶ ಹೊಡಿಸಲಾಗಿದೆ. ತನಿಖೆಗೆ ಎಸ್‌ ಐಟಿ ರಚಿಸಿರುವ ಬಗ್ಗೆ ಕರ್ನಾಟಕ ಒಳಾಡಳಿತ ಇಲಾಖೆ ಉಪ ಕಾರ್ಯದರ್ಶಿ ಬಿ.ಕೆ.ಭುವನೇಂದ್ರಕುಮಾರ ಆದೇಶ ಹೊರಡಿಸಿದ್ದಾರೆ. ಸಿಐಡಿ ಆರ್ಥಿಕ ಅಪರಾಧ ವಿಭಾಗದ ಎಡಿಜಿಪಿ ಮನೀಶ ಖರ್ಬೀಕರ ನೇತೃತ್ವದಲ್ಲಿ ನಾಲ್ವರು ಐಪಿಎಸ್‌ ಅಧಿಕಾರಿಗಳೊಂದಿಗೆ ಎಸ್‌ಐಟಿ ರಚನೆ ಮಾಡಲಾಗಿದ್ದು, ಎಸ್ಐಟಿ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಗಡಳ ಅಭಿವೃದ್ದಿ ನಿಗಮದ ಅಧೀಕ್ಷಕರಾಗಿದ್ದ ಪಿ.ಚಂದ್ರಶೇಖರನ್‌ ಅವರು ನಿಗಮದ ಅನುದಾನ ಹಣ ದುರುಪಯೋಗವಾಗಿರುವ ಬಗ್ಗೆ ಆರೋಪಿಸಿ ಡೆತ್‌ ನೋಟ್‌ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಶಿವಮೊಗ್ಗದ ವಿನೋಬಾನಗರ ಠಾಣೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ. ಈ ಪ್ರಕರಣದಲ್ಲಿ ಅನುದಾನವು ಬ್ಯಾಂಕ್‌ ಮೂಲಕ ದುರ್ಬಳಕೆಯಾಗಿರುವ ಬಗ್ಗೆ ನಿಗಮದ ಮುಖ್ಯ ನಿಬಂಧಕ ಎ.ರಾಜಶೇಖರ್‌ ಅವರು ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದೂರು ನೀಡಿದ್ದು. ಅಲ್ಲಿಯೂ ಕ್ರಿಮಿನಲ್‌ ಮೊಕದ್ದಮೆ ದಾಖಲಾಗಿದೆ. ಈ ಪ್ರಕರಣಗಳ ಕುರಿತು ತನಿಖೆಗೆ ಎಸ್‌ಐಟಿ ರಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆತ್ಮಹತ್ಯೆ ಹಾಗೂ ಹಣ ದುರುಪಯೋಗದ ಕುರಿತು ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಎಸ್‌ಐಟಿಗೆ ವರ್ಗಾಯಿಸಬೇಕು, ಈ ತನಿಖಾ ತಂಡಕ್ಕೆ ಇತರೆ ಸದಸ್ಯರ ಅವಶ್ಯಕತೆ ಇದ್ದಲ್ಲಿ ಡಿಜಿಪಿ ಅವರ ಅನುಮೋದನೆಯೊಂದಿಗೆ ತನಿಖಾ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement