ನಿಗದಿತ ಕಾಲಮಿತಿಯಲ್ಲಿ ಜಲಜೀವನ್ ಮಿಷನ್ ಪೂರ್ಣಗೊಳಿಸಿ : ಕೇಂದ್ರ ಜಲಶಕ್ತಿ ಸಚಿವ ಶೆಖಾವತ್ ಸೂಚನೆ

posted in: ರಾಜ್ಯ | 0

ಬೆಂಗಳೂರು: ಜಲಜೀವನ್ ಮಿಷನ್ ಯೋಜನೆ ಮೂಲಕ 2024ರ ವೇಳೆಗೆ ದೇಶದ 18.92 ಕೋಟಿ ಗ್ರಾಮೀಣ ಮನೆಗಳಲ್ಲಿ 15.70 ಕೋಟಿ ಮನೆಗಳಿಗೆ ನೀರು ಪೂರೈಕೆಯ ನಲ್ಲಿಗಳ ಸಂಪರ್ಕ ನೀಡುವ ಗುರಿ ಹೊಂದಲಾಗಿದ್ದು, ಕರ್ನಾಟಕದ ಜಲಜೀವನ್ ಮಿಷನ್ ಕಾರ್ಯಕ್ರಮವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೇಂದ್ರ ಸಚಿವರು ಸಲಹೆ ನೀಡಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲಿಸಿದರು.

ಈ ಯೋಜನೆಯಡಿ ಕೇವಲ ಸೌಲಭ್ಯ ಕಲ್ಪಿಸುವುದು ಮಾತ್ರವಲ್ಲ, ನಿರಂತರವಾಗಿ ಕುಡಿಯುವ ನೀರು ಒದಗಿಸುವುದು ಸರ್ಕಾರದ ಆದ್ಯತೆ. ರಾಜ್ಯದಲ್ಲಿ ಆದ್ಯತಾ ಜಿಲ್ಲೆಗಳಾದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ನೀರು ಪೂರೈಕೆಯ ನಲ್ಲಿಗಳ ಸಂಪರ್ಕಗಳನ್ನು ಆದ್ಯತೆಯ ಮೇರೆಗೆ ಒದಗಿಸುವಂತೆ ಸಚಿವರು ತಿಳಿಸಿದರು.

ನಳ ಸಂಪರ್ಕ ನೀಡುವುದರೊಂದಿಗೆ ಪೂರೈಸುವ ನೀರಿನ ಗುಣಮಟ್ಟವನ್ನೂ ಖಾತರಿ ಪಡಿಸುವಂತೆ ಸಚಿವರು ಸಲಹೆ ನೀಡಿದರು. ರಾಜ್ಯದಲ್ಲಿ ಯೋಜನೆಯ ಪ್ರಗತಿಯ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯದ ೯೧.೧೯ ಲಕ್ಷ ಗ್ರಾಮೀಣ ಕುಟುಂಬಗಳಿಗೆ ತಲಾ ೫೫ ಎಲ್.ಪಿಸಿಡಿ ಶುದ್ಧ ನೀರು ಒದಗಿಸುವ ಗುರಿ ಇದೆ. ಈ ಯೋಜನೆಯಡಿ ೨೦೨೧-೨೨ನೇ ಆರ್ಥಿಕ ವರ್ಷದಲ್ಲಿ ೨೫.೧೭ ಲಕ್ಷ ಮನೆಗಳಿಗೆ ನೀರು ಪೂರೈಕೆ ನಲ್ಲಿ ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ. ೨೦೨೨-೨೩ ರಲ್ಲಿ ೨೭.೧೫ ಲಕ್ಷ ಹಾಗೂ ೨೦೨೩ ಡಿಸೆಂಬರ್ ಅಂತ್ಯದ ವೇಳೆಗೆ ೧೦.೭೨ ಲಕ್ಷ ಮನೆಗಳಿಗೆ ನೀರು ಪೂರೈಕೆಯ ನಲ್ಲಿಯ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಪ್ರಮುಖ ಸುದ್ದಿ :-   ಜಾತ್ರಾ ಮಹೋತ್ಸವದ ವೇಳೆ ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವು

ಆದ್ಯತಾ ಜಿಲ್ಲೆಗಳಾದ ರಾಯಚೂರು ಜಿಲ್ಲೆಗೆ ೨೦೦೦ ಕೋಟಿ ವೆಚ್ಚದಲ್ಲಿ ಬಹುಗ್ರಾಮ ಯೋಜನೆ ರೂಪಿಸಲಾಗಿದ್ದು ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಶೀಘ್ರವೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಯಾದಗಿರಿ ಜಿಲ್ಲೆಯಲ್ಲಿಯೂ ಬಹುಗ್ರಾಮ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿವರಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು  ಭಾಗವಹಿಸಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement