
ಬೆಂಗಳೂರು : ಬೆಂಗಳೂರು : ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಗೌರಾಧ್ಯಕ್ಷತೆಯ ಬೇಡ್ತಿ ಅಘಾನಿಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ಸಂಸದರನ್ನು ಒಳಗೊಂಡ ಸಮಿತಿಯು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ, ಜಿಲ್ಲೆಯಲ್ಲಿ ಅನುಷ್ಠಾನ ಮಾಡಲು ಹೊರಟಿರುವ ಮೂರು ಹೊಸ ಯೋಜನೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ಮತ್ತು ಅಘನಾಶಿನಿ ಕಣಿವೆಗಳ ನದಿ ತಿರುವು ಯೋಜನೆಗಳನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನೀಡಿರುವ ಅನುಮತಿ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಪ್ರಮುಖರ ನಿಯೋಗವು ಶುಕ್ರವಾರ (ಅಕ್ಟೋಬರ್ 31) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
.
ವಿಧಾನ ಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪರಿಸರ ಸಂಘಟನೆಗಳ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ವಿಶೇಷ ಸಮಾಲೋಚನೆ ನಡೆಸಿ ಪಶ್ಚಿಮಘಟ್ಟದ ಸಂರಕ್ಷಣೆಗೆ ಒತ್ತಾಯ ಮಾಡಿದ್ದಾರೆ.
ಉತ್ತರ ಕನ್ನಡ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಹತ್ತಾರು ಬೃಹತ್ ಯೋಜನೆಗಳಿಂದ ನಲುಗಿ ಹೋಗಿದೆ, ಪರಿಸರ ಧಾರಣ ಸಾಮರ್ಥ್ಯ ಮುಗಿದಿದೆ, ಬೇಡ್ತಿ-ಅಘನಾಶಿನಿ-ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳು ಜಾರಿಯಾದರೆ ಭಾರಿ ಅವಘಡಗಳು ನಡೆಯುವ ಗಂಭೀರ ಪರಿಸ್ಥಿತಿ ಉಂಟಾಗಲಿದೆ ಎಂದು ಹೇಳಿದರು.

ನದಿ ತಿರುವು ಯೋಜನೆಗಳನ್ನು ನಿಲ್ಲಿಸುವಂತೆ ಶಾಸಕ ಶಿವರಾಮ ಹೆಬ್ಬಾರ ಒತ್ತಾಯಿಸಿದರು. ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಬೇಡ್ತಿ – ಅಘನಾಶಿನಿ – ಶರಾವತಿ ನದಿಗಳಲ್ಲಿ ನೀರೇ ಇಲ್ಲದ ಪರಿಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತ ಪಡಿಸಿದರು.
ಅರಣ್ಯಗಳ ನಾಶದಿಂದ ವನವಾಸಿಗಳ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ. ನದಿ ಕಣಿವೆಗಳ ಎಲ್ಲಾ ಜನ ಸಮುದಾಯಗಳು, ಜೀವ ವೈವಿಧ್ಯಕ್ಕೆ ಕುತ್ತು ಬರಲಿದೆ ಎಂದು ವಿಧಾನ ಪರಿಷತ್ ಸಧಸ್ಯ ಶಾಂತಾರಾಮ ಸಿದ್ದಿ ಹೇಳಿದರು. ಬೇಡ್ತಿ – ಅಘನಾಶಿನಿ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪಶ್ಚಿಮಘಟ್ಟದಲ್ಲಿ ಬೇಡ್ತಿ – ಅಘನಾಶಿನಿ – ಶರಾವತಿ ನದಿ ಯೋಜನೆಗಳನ್ನು ಸ್ಥಗಿತಗೊಳಿಸಿ, ವಿಜ್ಞಾನಿಗಳು, ಜನಪ್ರತಿನಿಧಿಗಳು ಸಂಘಟನೆಗಳ ಜೊತೆ ವಿಶೇಷ ಪುನರ್ ವಿಮರ್ಶೆ ಮಾಡಬೇಕೆಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
ಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿಯವರ ನೇತೃತ್ವದಲ್ಲಿ ಜನಾಂದೋಲನ ನಡೆಯುತ್ತಿದೆ ಎಂಬ ಸಂಗತಿಯನ್ನು ವಿ ಎನ್ ಹೆಗಡೆ ಬೊಮ್ಮನಳ್ಳಿಯವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಬೇಡ್ತಿ-ಅಘನಾಶಿನಿ-ಶರಾವತಿ ಯೋಜನೆಗಳ ಕುರಿತು ಸಂಬಂಧಿಸಿದ ಇಲಾಖೆಗಳ ಜೊತೆ ಚರ್ಚಿಸಿ ತಮ್ಮೆಲ್ಲರ ಜೊತೆಗೆ, ವಿಜ್ಞಾನಿಗಳೊಂದಿಗೆ ಸಭೆ ಏರ್ಪಡಿಸುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ವೆಂಕಟೇಶ ನಾಯ್ಕ, ಬಾಲಚಂದ್ರ ಸಾಯಿಮನೆ, ಬೆಂಗಳೂರಿನ ರಮೇಶ ಭಟ್, ನರಹರಿ ಇದ್ದರು.


ನಿಮ್ಮ ಕಾಮೆಂಟ್ ಬರೆಯಿರಿ