ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಉಪಸಭಾಪತಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಿರಿಯ ನಾಯಕ ಆಶಿಶ್ ಬ್ಯಾನರ್ಜಿ (74) ಅವರು ಭಾನುವಾರ ಬೆಳಗ್ಗೆ ಬೀರಭೂಮ್ ಜಿಲ್ಲೆಯ ರಾಮಪುರಹತ್ನಲ್ಲಿರುವ ಟಿಎಂಸಿ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಕಚೇರಿಯಲ್ಲೇ ಅವರ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಈ ಕಚೇರಿ ಬ್ಯಾನರ್ಜಿ ಅವರ ನಿವಾಸದ ಸಮೀಪದಲ್ಲಿದೆ.
ಘಟನಾ ಸ್ಥಳದಿಂದ ಆತ್ಮಹತ್ಯೆ ಪತ್ರ ಎನ್ನಲಾದ ಒಂದು ಪತ್ರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಬ್ಯಾನರ್ಜಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಸಾವಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಶಿಶ್ ಬ್ಯಾನರ್ಜಿ ಅವರು ಟಿಎಂಸಿಯ ಹಿರಿಯ ನಾಯಕರಾಗಿದ್ದು, ಜುಲೈ 2021ರಿಂದ ಮೇ 2026ರವರೆಗೆ ಪಶ್ಚಿಮ ಬಂಗಾಳ ವಿಧಾನಸಭೆಯ 13ನೇ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು. ರಾಮಪುರಹತ್ನಲ್ಲಿ ಜನಿಸಿದ ಅವರು ಬರ್ಧಮಾನ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದಿದ್ದರು. ಬಳಿಕ ರಾಮಪುರಹತ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.
ಟಿಎಂಸಿ ಪಕ್ಷದ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಆಶಿಶ್ ಬ್ಯಾನರ್ಜಿ, ರಾಜ್ಯದ ಶಾಲಾ ಶಿಕ್ಷಣ ಸಚಿವ ಹಾಗೂ ಕೃಷಿ ಸಚಿವರಾಗಿಯೂ ಕೆಲಸ ಮಾಡಿದ್ದರು.
ರಾಮಪುರ ಹತ್ ವಿಧಾನಸಭಾ ಕ್ಷೇತ್ರದಿಂದ ಅವರು 2001ರಿಂದ 2021ರವರೆಗೆ ಸತತ ಐದು ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ, ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಧ್ರುವ ಸಾಹಾ ವಿರುದ್ಧ ಸೋಲು ಕಂಡರು. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬ್ಯಾನರ್ಜಿ ಅವರಿಗೆ 87,687 ಮತಗಳು ಲಭಿಸಿದರೆ, ಧ್ರುವ ಸಾಹಾ ಅವರು 1,11,920 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಇಬ್ಬರ ನಡುವಿನ ಗೆಲುವಿನ ಅಂತರ 24,000ಕ್ಕೂ ಹೆಚ್ಚು ಮತಗಳಾಗಿತ್ತು. ಚುನಾವಣೆಯ ಸೋಲಿನ ಬಳಿಕ ಆಶಿಶ್ ಬ್ಯಾನರ್ಜಿ ಅವರು ಸಕ್ರಿಯ ರಾಜಕೀಯದಲ್ಲಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ ಎಂದು ಹೇಳಲಾಗಿದೆ.
ಇದಕ್ಕೂ ಮುನ್ನ, ಜೂನ್ನಲ್ಲಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರ ಕಳೆದುಕೊಂಡ ಒಂದು ತಿಂಗಳ ಬಳಿಕ, ಬ್ಯಾನರ್ಜಿ ಅವರು ಬೀರಭೂಮ್ ಜಿಲ್ಲಾ ಕೋರ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ತಾವು ಪಕ್ಷದ ಸಾಮಾನ್ಯ ಸದಸ್ಯರಾಗಿ ಮುಂದುವರಿದು ಕೆಲಸ ಮಾಡುವುದಾಗಿ ಆಗ ತಿಳಿಸಿದ್ದರು.
ರಾಜೀನಾಮೆ ನೀಡುವ ಸಂದರ್ಭದಲ್ಲಿ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬೀರಭೂಮ್ ಜಿಲ್ಲಾ ಅಧ್ಯಕ್ಷ ಅನುಬ್ರತ ಮಂಡಲ್ ನೇತೃತ್ವದ ಜಿಲ್ಲಾ ಕೋರ್ ಸಮಿತಿ ತನ್ನ ರಾಜಕೀಯ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಬ್ಯಾನರ್ಜಿ ಆರೋಪಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಬೀರಭೂಮ್ ಜಿಲ್ಲೆಯ 11 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದನ್ನು ಅವರು ಉಲ್ಲೇಖಿಸಿದ್ದರು.
ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಬ್ಯಾನರ್ಜಿ ಅವರು ಆತ್ಮಹತ್ಯೆಗೆ ಶರಣಾಗಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಪ್ರಕರಣದ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ನಿರೀಕ್ಷೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ