ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು; ಹೈಕೋರ್ಟ್ ಆದೇಶ

ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್‌ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿ ಆದೇಶಿದೆ.
ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧು ಎಂದು ಘೋಷಣೆ ಮಾಡಬೇಕು ಎಂದು ಪರಾಜಿತ ಅಭ್ಯರ್ಥಿ ಸಿ ಮುನಿರಾಜು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ಪೀಠ ಈ ಆದೇಶ ನೀಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ ಪೀಠವು, ಮುನಿರಾಜು ಅವರನ್ನು ವಿಜಯಶಾಲಿ ಎಂದು ಘೋಷಣೆ ಮಾಡಲು ನಿರಾಕರಿಸಿದೆ. ಹಾಗೂ ಆದೇಶವನ್ನು ಚುನಾವಣಾ ಆಯೋಗ ಮತ್ತು ವಿಧಾನಸಭೆ ಕಾರ್ಯದರ್ಶಿಗೆ ರವಾನಿಸಲು ಸೂಚಿಸಿದೆ.

ಆದೇಶ ಪ್ರಕಟವಾಗುತ್ತಿದ್ದಂತೆ ಸುಬ್ಬಾರೆಡ್ಡಿ ಪರ ವಕೀಲರು, ಅರ್ಜಿಯ ಸಂಬಂಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ತಡೆಯಾಜ್ಞೆ ನೀಡಲು ಮನವಿ ಮಾಡಿದರು. ಆದರೆ ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು. ಅಂತಿಮವಾಗಿ ಮನವಿಯನ್ನು ಪೀಠವು ತಿರಸ್ಕಿರಿಸಿತು.
ಪ್ರಕರಣ : ಬಾಗೇಪಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಸುಬ್ಬಾರೆಡ್ಡಿ ಚುನಾವಣೆಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಆಸ್ತಿ ಘೋಷಣೆ ವೇಳೆ ಮಾಹಿತಿಯನ್ನು ಮರೆಮಾಚುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದು ಚುನಾವಣಾ ಅಕ್ರಮವಾಗಿದ್ದು ಸುಬ್ಬಾರೆಡ್ಡಿ ಆಯ್ಕೆ ರದ್ದುಮಾಡಬೇಕು ಎಂದು ಬಿಜೆಪಿಯ ಪರಾಜಿ ಅಭ್ಯರ್ಥಿ ಸಿ ಮುನಿರಾಜು ಅರ್ಜಿ ಸಲ್ಲಿಸಿದ್ದರು. ಹಾಗೂ ಎರಡನೇ ಸ್ಥಾನಗಳಿಸಿದ್ದ ತಮ್ಮನ್ನು ಜಯಶೀಲರನ್ನಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದರು.

ಪ್ರಮುಖ ಸುದ್ದಿ :-   ಅಪ್ರಾಪ್ತೆಯ ಮೇಲೆ ಅತ್ಯಾಚಾರ; ಜನಿಸಿದ ಮಗು ಮಾರಾಟ ಆರೋಪ, ಆಕೆ ಮತ್ತೆ ಗರ್ಭಿಣಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement