ಮುಸ್ಲಿಂ ವೈಯಕ್ತಿಕ ಕಾನೂನು: 15 ವರ್ಷ ಮೀರಿದ ಮುಸ್ಲಿಂ ಹುಡುಗಿಯರು ಮದುವೆಯಾಗಬಹುದೇ ಎಂಬುದನ್ನು ಪರಿಶೀಲಿಸಲಿರುವ ಸುಪ್ರೀಂಕೋರ್ಟ್‌

ನವದೆಹಲಿ: ಹದಿನೈದು ವರ್ಷ ವಯಸ್ಸಿನ ಮುಸ್ಲಿಂ ಹುಡುಗಿ ತಾನು ಬಯಸಿದ ವ್ಯಕ್ತಿಯೊಂದಿಗೆ ಮದುವೆಯಾಗಬಹುದೇ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೋಮವಾರ ಸಮ್ಮತಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ. ಎಸ್. ಓಕಾ ಅವರಿದ್ದ ಪೀಠವು ಈ ಪ್ರಕರಣದಲ್ಲಿ ಹಿರಿಯ ವಕೀಲ ರಾಜಶೇಖರ ರಾವ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ 15 ವರ್ಷ ಮೇಲ್ಪಟ್ಟ ಮುಸ್ಲಿಂ ಹುಡುಗಿ ವಿವಾಹ ಒಪ್ಪಂದ ಮಾಡಿಕೊಳ್ಳಲು ಅರ್ಹಳು ಎಂದು ಜೂನ್ 13ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ವಿಚಾರಣೆ ನಡೆಸುತ್ತಿದೆ.

ವರದಿ ಪ್ರಕಾರ, ವಿವಿಧ ತೀರ್ಪುಗಳಲ್ಲಿ ಉಲ್ಲೇಖಿಸಿರುವ ಪ್ರಕಾರ ಮುಸ್ಲಿಂ ಹುಡುಗಿಯ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿತ ಎಂಬುದು ಸ್ಪಷ್ಟವಾಗಿದೆ. ಸರ್ ದಿನ್‌ಶಾ ಫರ್ದುಂಜಿ ಮುಲ್ಲಾ ಅವರು ಬರೆದಿರುವ ‘ಪ್ರಿನ್ಸಿಪಲ್ಸ್‌ ಆಫ್‌ ಮೊಹಮ್ಮಡನ್ ಲಾ’ ಎಂಬ ಪುಸ್ತಕದ 195ನೇ ವಿಧಿ ಪ್ರಕಾರ, ಎರಡನೇ ಅರ್ಜಿದಾರರು 16 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಅವರ ತಮ್ಮ ಆಯ್ಕೆಯ ವ್ಯಕ್ತಿಯೊಂದಿಗೆ ವಿವಾಹದ ಒಪ್ಪಂದ ಮಾಡಿಕೊಳ್ಳಲು ಸಮರ್ಥರಾಗಿದ್ದರು ಎಂದು ಹೈಕೋರ್ಟ್ ತೀರ್ಪು ನೀಡಿತ್ತು.
ಸೋಮವಾರ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆದೇಶದ ಸಂಬಂಧಪಟ್ಟ ಪ್ಯಾರಾಗಳಿಗೆ ತಡೆ ನೀಡುವಂತೆ ಕೋರಿದರು. ಆಗ ಪ್ರಕರಣದಲ್ಲಿ ತನಗೆ ಸಹಾಯ ಮಾಡಲು ಅಮಿಕಸ್‌ ಅವರನ್ನು ನೇಮಿಸಲು ಮುಂದಾದ ನ್ಯಾಯಾಲಯ ನವೆಂಬರ್‌ 7ಕ್ಕೆ ಪ್ರಕರಣ ಮುಂದೂಡಿತ್ತು.

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

ಇತ್ತೀಚೆಗೆ ದೆಹಲಿ ಹೈಕೋರ್ಟ್‌ ಕೂಡ ಪಂಜಾಬ್‌ ಹೈಕೋರ್ಟ್‌ನಂತಹುದೇ ತೀರ್ಪು ನೀಡಿತ್ತು. ಮುಸ್ಲಿಂ ಕಾನೂನಿನ ಪ್ರಕಾರ, ಪ್ರಾಯಕ್ಕೆ ಬಂದ ಅಪ್ರಾಪ್ತ ಬಾಲಕಿ ತನ್ನ ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗಬಹುದು. ಅಂತಹ ಸಂದರ್ಭದಲ್ಲಿ ಮದುವೆಯ ನಂತರ ಸಂಭೋಗ ನಡೆದಿದ್ದರೆ ಅದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (POCSO) ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಅದು ಹೇಳಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement