ಬೆಂಗಳೂರು: 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕ್ರಮ ಪ್ರಶ್ನಿಸಿ ಕೆಲವು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪುನರಾವರ್ತಿತ ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ಜಿ. ಮನಸ್ವಿನಿ ಸೇರಿದಂತೆ ಏಳು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯು ಗುರುವಾರ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ ಅವರ ನೇತೃತ್ವದ ಏಕಸದಸ್ಯ ಪೀಠ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದೆ. ಅದು ಸೋಮವಾರ ವಿಚಾರಣೆಗೆ ಬರಲಿದೆ. ಆದ್ದರಿಂದ ಎರಡು ಅರ್ಜಿಗಳನ್ನು ಒಟ್ಟಿಗೆ ವಿಚಾರಣೆ ನಡೆಸಲಾಗುವುದು” ಎಂದು ತಿಳಿಸಿದ ಪೀಠವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಅರ್ಜಿದಾರರು 2020-21ನೇ ಸಾಲಿನಲ್ಲಿ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ 2022ರ ಜುಲೈನಲ್ಲಿ ನಡೆಸಿದ ಸಿಇಟಿ ಪರೀಕ್ಷೆಯ ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ. ಸಿಇಟಿ ಪರೀಕ್ಷೆ ಫಲಿತಾಂಶವನ್ನು ಜುಲೈ 30ರಂದು ಪ್ರಕಟಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ ಎಂದು ವರದಿ ಹೇಳಿದೆ.
ವರದಿ ಪ್ರಕಾರ, ಅರ್ಜಿದಾರರು 2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೆ 2022ನೇ ಸಿಇಟಿ ಪರೀಕ್ಷೆಯಲ್ಲಿನ ಅವರ ರ್‍ಯಾಂಕ್ ಪಟ್ಟಿ ಪ್ರಕಟಿಸಲಾಗಿದೆ. ಆದರೆ, 2021ನೇ ಸಾಲಿನ ಪಿಯು ಪರೀಕ್ಷೆ ಅರ್ಜಿದಾರರು ಪಡೆದ ಶೇ 50ರಷ್ಟು ಅಂಕಗಳನ್ನು ಪರಿಗಣಿಸಬೇಕಿತ್ತು. ಆದರೆ, ಕೇವಲ 2022ರ ಸಿಇಟಿಯಲ್ಲಿ ಪಡೆದ ಅಂಕಗಳನ್ನು ಮಾತ್ರ ಪರಿಗಣಿಸಿ ರ್‍ಯಾಂಕ್ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದು ತಾರತಮ್ಯ ನೀತಿಯಾಗಿದ್ದು, ಸಿಇಟಿ 2006ರ ಪ್ರವೇಶಾತಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಹೀಗಾಗಿ ಸಿಇಟಿ ರ್‍ಯಾಂಕ್‌ಗೆ 2021ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಅರ್ಜಿದಾರರು ಪಡೆದ ಅಂಕಗಳನ್ನು ಪರಿಗಣಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು. ಅರ್ಜಿ ಇತ್ಯರ್ಥವಾಗುವರೆಗೂ 2022ನೇ ಸಾಲಿನ ಸಿಇಟಿ ಕೌನ್ಸಿಲಿಂಗ್‌ಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.ಈ ವರ್ಷ ಸುಮಾರು 24,000 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಮತ್ತು ತಮ್ಮ ದ್ವಿತೀಯ ಪಿಯು ಅಂಕಗಳನ್ನು ಅಂತಿಮ ಅಂಕಕ್ಕೆ ಸೇರಿಸದಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
.
ನಿಮ್ಮ ಕಾಮೆಂಟ್ ಬರೆಯಿರಿ