ದೆಹಲಿಯ ಮಾಜಿ ಮುಖ್ಯ ಕಾರ್ಯದರ್ಶಿ ರಾಕೇಶ ಮೆಹ್ತಾ ಆತ್ಮಹತ್ಯೆ

ನೊಯ್ಡಾ: ದೆಹಲಿಯ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ರಾಕೇಶ ಮೆಹ್ತಾ ಅವರು ನೊಯ್ಡಾದ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಅವರ ಮೃತದೇಹವು ಸೆಕ್ಟರ್-82ರಲ್ಲಿರುವ ವಸತಿ ಸಮುಚ್ಚಯದ ಫ್ಲಾಟ್‌ನಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ದೊರಕುತ್ತಿದ್ದಂತೆ ಫೇಸ್-2 ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಮೆಹ್ತಾ ಅವರ ನಿವಾಸದಿಂದ ಆತ್ಮಹತ್ಯೆ ಪತ್ರ (ಸೂಸೈಡ್ ನೋಟ್) ಕೂಡ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಸಾವಿಗೆ ಕಾರಣವಾದ ಪರಿಸ್ಥಿತಿಗಳು ಏನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಪತ್ರದಲ್ಲಿರುವ ಮಾಹಿತಿಯ ಸತ್ಯಾಸತ್ಯತೆಯನ್ನೂ ತನಿಖೆ ಮಾಡುತ್ತಿದ್ದಾರೆ.

ರಾಕೇಶ್ ಮೆಹ್ತಾ ಯಾರು?
1981ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದ ರಾಕೇಶ್ ಮೆಹ್ತಾ ಅವರು 2007ರಿಂದ 2010ರವರೆಗೆ ದೆಹಲಿಯ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಆ ಅವಧಿಯಲ್ಲಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರ ಆಡಳಿತದಲ್ಲಿ ಅವರು ಪ್ರಮುಖ ಆಡಳಿತಾತ್ಮಕ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದರು.
ಮುಖ್ಯ ಕಾರ್ಯದರ್ಶಿಯಾಗುವ ಮೊದಲು ಮತ್ತು ನಂತರವೂ ಅವರು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೇರಿದಂತೆ ಹಲವು ಪ್ರಮುಖ ಸರ್ಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅವರ ಆಡಳಿತಾವಧಿಯಲ್ಲಿ ದೆಹಲಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವ ಉದ್ದೇಶದಿಂದ ಲೋ-ಫ್ಲೋರ್ ಬಸ್‌ಗಳ ಸೇವೆಯನ್ನು ಪರಿಚಯಿಸಲಾಗಿತ್ತು.
ರಾಕೇಶ ಮೆಹ್ತಾ ಅವರ ಸಾವಿನ ಹಿಂದಿನ ನಿಖರ ಕಾರಣಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಮುಖ ಸುದ್ದಿ :-   ನಾಯಿ Vs ಚಿರತೆ ಹೋರಾಟದ ವಿಡಿಯೋ ; ಚಿರತೆ ಸುಲಭದ ಬೇಟೆ ಅಂದುಕೊಂಡಿತ್ತು, ಆದ್ರೆ ನಾಯಿ ಚಿರತೆಯನ್ನೇ ಓಡಿಸಿತು !

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement