ವಿಡಿಯೋ | ಪಂಜಾಬಿನ ರಕ್ಷಣಾ ನೆಲೆಗಳ ಬಳಿ 2 ತಾಸಿನಲ್ಲಿ 2 ‘ಸ್ಫೋಟಗಳು’….!

ಅಮೃತಸರ/ಜಲಂಧರ್:  ಪಂಜಾಬಿನ ಎರಡು ಪ್ರಮುಖ ನಗರಗಳಾದ ಜಲಂಧರ್ ಮತ್ತು ಅಮೃತಸರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ಘಟನೆಗಳು ರಾಜ್ಯವನ್ನು ಬೆಚ್ಚಿಬೀಳಿಸಿವೆ. ಈ ಎರಡೂ ಘಟನೆಗಳು ರಕ್ಷಣಾ ನೆಲೆಗಳ ಅತ್ಯಂತ ಸಮೀಪದಲ್ಲೇ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಮಂಗಳವಾರ ರಾತ್ರಿ ಸುಮಾರು 8 ಗಂಟೆಯ ಸುಮಾರಿಗೆ ಜಲಂಧರ್‌ನಲ್ಲಿರುವ ಗಡಿ ಭದ್ರತಾ ಪಡೆ (BSF) ಪ್ರಧಾನ ಕಚೇರಿಯ ಮುಖ್ಯ ದ್ವಾರದ ಹೊರಗೆ ನಿಲ್ಲಿಸಲಾಗಿದ್ದ ಆಕ್ಟಿವಾ ಸ್ಕೂಟರ್‌ ದಿಢೀರನೆ ಬೆಂಕಿಗೆ ಆಹುತಿಯಾಯಿತು.
ಘಟನೆಯ ಶಬ್ದ ಸುಮಾರು 1 ಕಿಲೋಮೀಟರ್ ದೂರದವರೆಗೆ ಕೇಳಿಸಿದ್ದು, ಸ್ಫೋಟದ ತೀವ್ರತೆಗೆ 300 ಮೀಟರ್ ದೂರದವರೆಗಿನ ಕಾರುಗಳು ಮತ್ತು ಅಂಗಡಿಗಳ ಕಿಟಕಿ ಗಾಜುಗಳು ಪುಡಿಯಾಗಿವೆ.
 “ಮೇಲ್ನೋಟಕ್ಕೆ ಸ್ಕೂಟರ್ ಬೆಂಕಿಗೆ ಆಹುತಿಯಾಗಿರುವುದು ಕಂಡುಬಂದಿದೆ. ಇದು ಯಾವುದೇ ಸಂಚಿನ ಭಾಗವೇ ಎಂಬುದು ತನಿಖೆಯ ನಂತರವಷ್ಟೇ ತಿಳಿಯಲಿದೆ ಎಂದು ಜಲಂಧರ್ ಪೊಲೀಸ್ ಕಮಿಷನರ್ ಧನಪ್ರೀತ್ ಕೌರ್ ತಿಳಿಸಿದ್ದಾರೆ.
 ಆಹಾರ ಪಾರ್ಸೆಲ್ ತಲುಪಿಸಲು ಬಂದಿದ್ದ ಗುರ್ಪ್ರೀತ್ ಸಿಂಗ್ ಎಂಬುವವರ ಸ್ಕೂಟರ್ ಇದಾಗಿದ್ದು, ಅವರು ವಾಹನದ ಬಳಿ ಬರುತ್ತಿದ್ದಂತೆಯೇ ಈ ಅವಘಡ ಸಂಭವಿಸಿದೆ.
ಸ್ಕೂಟರ್ ಚಲಾಯಿಸುತ್ತಿದ್ದ ಗುರುಪ್ರೀತ್ ಸಿಂಗ್ ಆಹಾರ ಪಾರ್ಸೆಲ್‌ಗಳನ್ನು ತಲುಪಿಸಲು ಪ್ರತಿದಿನ ಆ ಪ್ರದೇಶಕ್ಕೆ ಬರುತ್ತಾರೆ ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ. ಮಂಗಳವಾರ ಸಂಜೆ, ಅವರು ನಿಲ್ಲಿಸಿದ್ದ ತಮ್ಮ ಸ್ಕೂಟರ್ ಬಳಿ ಬಂದಾಗ, ಅದು ಇದ್ದಕ್ಕಿದ್ದಂತೆ ಬೆಂಕಿಗೆ ಆಹುತಿಯಾಯಿತು. ನಂತರ ಗುರುಪ್ರೀತ್ ತಮ್ಮ ತಂದೆಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾರೆ.
 ಅಮೃತಸರ: ಆರ್ಮಿ ಕ್ಯಾಂಪ್ ಗೋಡೆ ಬಳಿ ಸ್ಫೋಟ
ಜಲಂಧರ್ ಘಟನೆ ನಡೆದ ಎರಡು ಗಂಟೆಗಳ ನಂತರ, ಅಲ್ಲಿಂದ 100 ಕಿ.ಮೀ ದೂರದಲ್ಲಿರುವ ಅಮೃತಸರದ ಅಟ್ಟಾರಿ ರಸ್ತೆಯ ಸೇನೆಯ ‘ಖಾಸಾ ಕ್ಯಾಂಪ್’ ಹೊರಗೋಡೆಯ ಬಳಿ ಸ್ಫೋಟ ಸಂಭವಿಸಿದೆ.
ಮುಖವಾಡ ಧರಿಸಿದ ಕಿಡಿಗೇಡಿಗಳು ಸ್ಫೋಟಕ ವಸ್ತುವನ್ನು ಗೋಡೆಯತ್ತ ಎಸೆದು ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕವಅಗಿ ತಿಳಿದುಬಂದಿದೆ ಎನ್ನಲಾಗಿದೆ. ಸ್ಫೋಟದ ಸ್ಥಳದಲ್ಲಿ ಗೋಡೆಯಲ್ಲಿ ಲೋಹದ ಹಾಳೆಯನ್ನು ಹೋಲುವ ತುಣುಕುಗಳು ಹುದುಗಿದ್ದು, ಸ್ಫೋಟಕ್ಕೆ ಕಾರಣವಾದ ಸ್ಫೋಟಕ ಸಾಧನವನ್ನು ಯಾರೋ ಗೋಡೆಯ ಕಡೆಗೆ ಎಸೆದಿದ್ದಾರೆ ಎಂದು ಸೂಚಿಸುತ್ತದೆ ಎಂದು ಅಮೃತಸರ ಗ್ರಾಮೀಣ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುಹೇಲ್ ಖಾಸಿಂ ಮಿರ್ ಹೇಳಿದ್ದಾರೆ.
ಅದೃಷ್ಟವಶಾತ್ ಎರಡೂ ಘಟನೆಗಳಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೈ-ಅಲರ್ಟ್ ಘೋಷಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಈ ಘಟನೆಗಳು ಪಂಜಾಬ್‌ನಲ್ಲಿ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿವೆ. “ಸರ್ಕಾರ ಕೇವಲ ಘಟನೆ ನಡೆದ ಮೇಲೆ ಪ್ರತಿಕ್ರಿಯಿಸುವುದನ್ನು ಬಿಟ್ಟು, ಸಾರ್ವಜನಿಕರ ಸುರಕ್ಷತೆಗೆ ಮೊದಲೇ ಕ್ರಮ ಕೈಗೊಳ್ಳಬೇಕು  ಎಂದು ಕಾಂಗ್ರೆಸ್ಸಿನ ಪರ್ತಾಪ್ ಸಿಂಗ್ ಬಾಜ್ವಾ  ಕಿಡಿಕಾರಿದ್ದಾರೆ.
 “ಗಡಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆಯೇ?” ಎಂದು ಅಕಾಲಿದಳದ ಬಿಕ್ರಮ್ ಸಿಂಗ್ ಮಜಿಥಿಯಾ ಪ್ರಶ್ನಿಸಿದ್ದಾರೆ. ಆಮ್ ಆದ್ಮಿ ಪಾರ್ಟಿ ಸರ್ಕಾರವು ಕೇವಲ ಪ್ರದರ್ಶನಕ್ಕೆ ಸೀಮಿತವಾಗದೆ ಆಡಳಿತದ ಕಡೆ ಗಮನ ಹರಿಸಲಿ ಎಂದು ಬಿಜೆಪಿ ನಾಯಕ ಪರವಿಂದರ್ ಸಿಂಗ್ ಬ್ರಾರ್ ಟೀಕಿಸಿದ್ದಾರೆ.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement