ಮಂಗಳೂರು : ಬಾಲ್ಕನಿ ರೇಲಿಂಗ್ ಕುಸಿದು ಓರ್ವ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯ ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಮಂಗಳೂರು: ಕಾಲೇಜು ಚುನಾವಣೆ ಹಾಗೂ ನೂತನ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಸಂಭ್ರಮದ ವೇಳೆ ಮೊದಲ ಮಹಡಿಯ ಬಾಲ್ಕನಿ ರೇಲಿಂಗ್ ಕುಸಿದು ಐವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರಿನ ಪಾಂಡೇಶ್ವರದಲ್ಲಿರುವ ರಾಮ ಲಕ್ಷ್ಮೀನಾರಾಯಣ ಕನ್ವೆನ್ಶನ್ ಹಾಲ್‌ನಲ್ಲಿ ಶನಿವಾರ (ಸೆ.26) ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ತಲೆಗೆ ಗಂಭೀರವಾಗಿ ಏಟಾದ ಪರಿಣಾಮ 16 ವರ್ಷದ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವರದಿಯಾಗಿದೆ.
ಕಾಲೇಜು ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕಾಗಿ ನೂರಾರು ವಿದ್ಯಾರ್ಥಿಗಳು ಕನ್ವೆನ್ಶನ್ ಹಾಲ್‌ನಲ್ಲಿ ಸೇರಿದ್ದರು. ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳು ಕುಣಿದು, ಘೋಷಣೆಗಳನ್ನು ಕೂಗುತ್ತ ಸಂಭ್ರಮಿಸುತ್ತಿದ್ದರು. ಈ ವೇಳೆ ಕೆಲ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಲು ಹಾಗೂ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲು ಮೊದಲ ಮಹಡಿಯ ಬಾಲ್ಕನಿಯತ್ತ ತೆರಳಿದ್ದರು.

ಬಾಲ್ಕನಿಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಜಮಾಯಿಸಿದ್ದರಿಂದ ಅವರ ಭಾರದ ಒತ್ತಡಕ್ಕೆ ರೇಲಿಂಗ್ ಏಕಾಏಕಿ ಕುಸಿದಿದೆ ಎನ್ನಲಾಗಿದೆ. ರೇಲಿಂಗ್ ಕುಸಿದ ಪರಿಣಾಮ ಹಲವು ವಿದ್ಯಾರ್ಥಿಗಳು ಮೊದಲ ಮಹಡಿಯಿಂದ ಕೆಳಗಿನ ರಸ್ತೆಗೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಲೆಗೆ ತೀವ್ರವಾಗಿ ಪೆಟ್ಟಾಗಿರುವ 16 ವರ್ಷದ ಮೊಹಮ್ಮದ್ ಶಮಾಜ್ ಎಂಬ ದ್ಯಾರ್ಥಿಯನ್ನು ವೈದ್ಯರು ಬ್ರೇನ್‌ಡೆಡ್ ಎಂದು ಘೋಷಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರಿಸಲಾಗಿದೆ.

ಪ್ರಮುಖ ಸುದ್ದಿ :-   ʼಆದಿಕವಿʼ ಪುರಸ್ಕಾರಕ್ಕೆ ಸಾಹಿತಿ ಶಾ. ಮಂ. ಕೃಷ್ಣರಾಯ, ʼವಾಗ್ದೇವಿʼ ಪುರಸ್ಕಾರಕ್ಕೆ ಸಹನಾ ಆಯ್ಕೆ

ಘಟನೆಯಲ್ಲಿ ಮೊಹಮ್ಮದ್ ಶನಾನ್ ಅಹ್ಮದ್ (18), ಹನೀಫ್ (23), ದಾವೂದ್ ಫಾರ್ಸಿನ್ ಅಹ್ಮದ್ (18) ಹಾಗೂ ಮೊಹಮ್ಮದ್ ಶಕೀಲ್ ಹುಸೇನ್ (18) ಎಂಬವರು ಗಾಯಗೊಂಡಿದ್ದಾರೆ.
ಘಟನೆ ನಡೆದ ತಕ್ಷಣ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬಾಲ್ಕನಿ ರೇಲಿಂಗ್ ಕುಸಿಯಲು ಕಾರಣವೇನು, ಕಟ್ಟಡದ ಸುರಕ್ಷತಾ ಸ್ಥಿತಿ ಹೇಗಿತ್ತು ಹಾಗೂ ಕಾರ್ಯಕ್ರಮ ಆಯೋಜಕರಿಂದ ಯಾವುದೇ ನಿರ್ಲಕ್ಷ್ಯವಾಗಿದೆಯೇ ಎಂಬುದೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಬಾಲ್ಕನಿ ರೇಲಿಂಗ್ ಕುಸಿತಕ್ಕೆ ನಿಖರ ಕಾರಣವೇನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement