ಜೂನ್ 25 ರಿಂದ ರಾಜ್ಯದ ಕರಾವಳಿ, ಉತ್ತರ ಒಳನಾಡಿನಲ್ಲಿ ಮಳೆ ಜೋರು: 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು: ರಾಜ್ಯಾದ್ಯಂತ ಜೂನ್​ 25ರಿಂದ ಮುಂಗಾರು ಚುರುಕುಗೊಳ್ಳಲಿದ್ದು, 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಚಿತ್ರದುರ್ಗ, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದ್ದು ಯೆಲ್ಲೋ ಅಲರ್ಟ್​ ನೀಡಲಾಗಿದೆ. ಚಿತ್ರದುರ್ಗ, ಮಂಡ್ಯ, ಹಾಸನ ಹಾಗೂ ತುಮಕೂರು ಜಿಲ್ಲೆಗಳಿಗೆ ಜೂನ್‌ 22ರಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ.
ಅಲ್ಲದೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಕೋಲಾರ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯಪುರ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಮುಂದಿನ 24 ಗಂಟೆಗಳಲ್ಲಿ ಕರಾವಳಿಯಲ್ಲಿ ಗಾಳಿಯು ಗಂಟೆಗೆ 40-45 ವೇಗದಲ್ಲಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಬಿಪೋರ್‌ ಜಾಯ್‌ ಚಂಡಮಾರುತವು ಮಾನ್ಸೂನ್‌ ಮಳೆಯ ಮೋಡಗಳನ್ನು ಎತ್ತಿಕೊಂಡ ಹೋದ ಪರಿಣಾಮ ರಾಜ್ಯದಲ್ಲಿ ಮಳೆಯಾಗುತ್ತಿಲ್ಲ. ಈಗ ಮತ್ತೆ ಮಾನ್ಸೂನ್‌ ಮೋಡಗಳು ಆವರಿಸಲು ಆರಂಭಿಸಿದ್ದು, ರಾಜ್ಯದ ಅಲ್ಲಲ್ಲಿ ಮಳೆ ಆರಂಭವಾಗಿದೆ. ಇದು ಜೂನ್‌ 25ರ ನಂತರ ಮತ್ತಷ್ಟು ಪ್ರಬಲವಾಗಲಿದೆ ಎಂದು ಹೇಳಲಾಗಿದೆ.

 

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement