
ಬೆಂಗಳೂರು: ಡಿಸೆಂಬರ್ 29ರಂದು ಆಟೋ ಚಾಲಕರು ಬೆಂಗಳೂರಿನಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದು, ಹೀಗಾಗಿ ಅಂದು ಬೆಂಗಳೂರು ನಗರದಲ್ಲಿ ಆಟೋ ಸಂಚಾರ ಬಂದ್ ಆಗಿರಲಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಟೋ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದು, ರ್ಯಾಪಿಡೋ ಬೈಕ್ ಟ್ಯಾಕ್ಸಿ ಆ್ಯಪ್ ಬ್ಯಾನ್, ಬೌನ್ಸ್ ಎಲೆಕ್ಟ್ರಿಕ್ ಬೈಕ್ ಗೆ ನೀಡಿರುವ ಅನುಮತಿ ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ.
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ನಿಂದ ಬೃಹತ್ ಆಟೋ ರ‍್ಯಾಲಿ ಮೂಲಕ ವಿಧಾನಸೌಧಕ್ಕೆ ತೆರಳಲು ನಿರ್ಧರಿಸಿದ್ದು, ಮುಷ್ಕರಕ್ಕೆ 21 ಆಟೋ ಸಂಘಟನೆಗಳು ಸಾಥ್ ನೀಡಿವೆ. ರಾಜಧಾನಿಯ ಎರಡು ಲಕ್ಷದ ಹತ್ತು ಸಾವಿರ ಆಟೋ ಚಾಲಕರು ಈಗಾಗಲೇ ಈ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.

ರಾಜಧಾನಿಯಲ್ಲಿ ರ್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆಟೋ ಚಾಲಕರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ರ್ಯಾಪಿಡೋ ಬೈಕ್ ಟ್ಯಾಕ್ಸಿಗೆ ಅನುಮತಿ ಇಲ್ಲದಿದ್ದರೂ ರಾಜಾರೋಷವಾಗಿ ಸಂಚರಿಸುತ್ತಿವೆ. ಆರ್ಟಿಒ ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳನ್ನು ಮಟ್ಟ ಹಾಕುವಲ್ಲಿ ವಿಫಲವಾಗಿವೆ. ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ ಎಲೆಕ್ಟ್ರಿಕ್ ಬೈಕ್ಗಳಿಗೆ ಅನುಮತಿ ನೀಡಿದ್ದು, ಬೌನ್ಸ್ ಕಂಪನಿ ಮೊದಲ ಹಂತದಲ್ಲಿ 100 ಇ- ಬೈಕ್ಗಳನ್ನ ರಸ್ತೆಗಿಳಿಸಲು ನಿರ್ಧರಿಸಿದೆ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ 1000 ಇ- ಬೈಕ್ಗಳನ್ನ ರಸ್ತೆಗಿಳಿಸಲು ನಿರ್ಧಾರ ಮಾಡಿದೆ.


ನಿಮ್ಮ ಕಾಮೆಂಟ್ ಬರೆಯಿರಿ