ಕುಂದಾಪುರ : ಗಂಗೊಳ್ಳಿಯಲ್ಲಿ ಬೋಟ್ ಮುಳುಗಡೆ; ಐವರು ಮೀನುಗಾರರ ರಕ್ಷಣೆ

ಕುಂದಾಪುರ : ಉಡುಪಿಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಬೋಟೊಂದು ಕುಂದಾಪುರ ಹಾಗೂ ಗಂಗೊಳ್ಳಿ ಮಧ್ಯದ ಸಮುದ್ರದಲ್ಲಿ ನೀರು ತುಂಬಿ ಮುಳುಗಡೆಯಾಗಿದೆ ಎಂದು ವರದಿಯಾಗಿದ್ದು, ಬೋಟಿನಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ.
ಐವರು ಮೀನುಗಾರರನ್ನು ಮತ್ತೊಂದು ಬೋಟಿನಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ. ಬೋಟಿನಲ್ಲಿದ್ದ ಮೀನುಗಾರರಾದ ಪ್ರಕಾಶ, ರಂಜಿತ್, ರಾಘವೇಂದ್ರ, ರಾಮ ಹಾಗೂ ಶ್ರೀನಿವಾಸ ಎಂಬವರನ್ನು ರಕ್ಷಿಸಲಾಗಿದೆ. ಫೆ.23ರ ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟ ಕೆಮ್ಮಣ್ಣಿನ ನಾಗರಾಜ ಪುತ್ರನ್ ಅವರ ಶ್ರೀದುರ್ಗಾಪರಮೇಶ್ವರಿ ಬೋಟಿನ ಅಡಿಭಾಗಕ್ಕೆ ಸಮುದ್ರದಲ್ಲಿ ಯಾವುದೋ ವಸ್ತು ತಾಗಿ, ಎಂಜಿನಿನ ಅಡಿ ಭಾಗದಲ್ಲಿ ನೀರು ಒಳ ಬರಲು ಆರಂಭಿಸಿತ್ತು.

ನೀರು ತುಂಬಿ ಬೋಟಿನ ಎಂಜಿನ್ ಸ್ಥಗಿತಗೊಂಡಿತ್ತು. ಕೂಡಲೇ ಬೋಟಿನಲ್ಲಿದ್ದವರು ನೀರು ಖಾಲಿ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅನಂತರ ಸಹಾಯಕ್ಕಾಗಿ ಮಲ್ಪೆ ಬಂದರಿನಿಂದ ಶ್ರೀಕೃಷ್ಣ ಬೋಟ್‌ ಹಾಗೂ ಕೋಸ್ಟ್ ಗಾರ್ಡ್ ಬಂದು ಬೋಟಿನಲ್ಲಿದ್ದವರನ್ನು ರಕ್ಷಿಸಿದ್ದಾರೆ.
ಬಳಿಕ ಬೋಟನ್ನು ಶ್ರೀ ಕೃಷ್ಣ ಬೋಟಿನವರು ಹಗ್ಗ ಕಟ್ಟಿ ಎಳೆದು ಗಂಗೊಳ್ಳಿ ಬಂದರಿನಿಂದ ಸುಮಾರು 8-9 ನಾಟಿಕಲ್ ಮೈಲು ದೂರದ ವರೆಗೆ ಎಳೆದುಕೊಂಡು ಬಂದಿದ್ದಾರೆ. ಆದರೆ ಗಾಳಿ ಹಾಗೂ ಅಲೆಗಳ ಅಬ್ಬರದಿಂದಾಗಿ ಹಗ್ಗ ತುಂಡಾಗಿ, ಬೋಟು ಮುಳುಗಡೆಯಾಗಿದೆ. ಬೋಟು ಮುಳುಗಿದ್ದರಿಂದ ಅಂದಾಜು 60-65 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮಾಲಕ ನಾಗರಾಜ ಪುತ್ರನ್ ದೂರಿನಲ್ಲಿ ತಿಳಿಸಿದ್ದಾರೆ. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣದ ದೂರು ದಾಖಲಾಗಿದೆ.

ಪ್ರಮುಖ ಸುದ್ದಿ :-   ಕುಮಟಾ : ಶಾಲೆಯ ಪಕ್ಕವೇ ಭೂ ಕುಸಿತ ; ಕಟ್ಟಡಕ್ಕೆ ಬಂದು ಅಪ್ಪಳಿಸಿದ ಬೃಹತ್‌ ಬಂಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement