ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಹೆಸರಿನಲ್ಲಿ ಇನ್ಮುಂದೆ ಜಿಲ್ಲಾ ಮಟ್ಟದಲ್ಲೂ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.
ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಇಂದು, ಶನಿವಾರ ದೇವರಾಜ ಅರಸು ಾವರ ೧೦೭ನೇ ಜನ್ಮದಿನಾಚರಣೆ ಹಾಗೂ ಅರಸು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದಿ. ದೇವರಾಜ ಅರಸು ಹೆಸರಿನಲ್ಲಿ ಈಗ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲೂ ಪ್ರಶಸ್ತಿ ನೀಡುವ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ದಿ. ದೇವರಾಜ ಅರಸು ಅವರ ವಿಚಾರಗಳನ್ನು ಜಾರಿ ಮಾಡಿ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಕಂಡಿದ್ದ ಕನಸು ನನಸು ಮಾಡಲಾಗುವುದು. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ೮೦೦ ಕೋಟಿ ರೂ. ಅನುದಾನ ನೀಡಿದೆ ಎಂದರು.
ಹಿಂದುಳಿದ ಸಮುದಾಯದ ಮಠಗಳು ಉತ್ತಮ ಕೆಲಸ ಮಾಡುತ್ತಿವೆ. ಈ ಹಿಂದುಳಿದ ಸಮುದಾಯದ ಮಠಗಳಿಗೆ ೧೨೯ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಅರಸು ಅವರ ಹೆಸರಿನಲ್ಲಿ ಪಿಎಚ್‌ಡಿ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಹಿಂದುಳಿದ ವರ್ಗಗಳ ೨೪೩೯ ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು. ಭೂ ಸುಧಾರಣೆ ಕಾಯ್ದೆ ಜಾರಿ ಮಾಡಿದ್ದು ಅರಸು, ಜನತಾ ಮನೆ, ಪಡಿತರ ವ್ಯವಸ್ಥೆ ಎಲ್ಲವೂ ಅವರ ಕಾಲದಲ್ಲೇ ಆರಂಭವಾಗಿದ್ದು ಎಂದು ಬೊಮ್ಮಾಯಿ ಹೇಳಿದರು.
ಪ್ರಶಸ್ತಿ ಪ್ರದಾನ
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಖ್ಯಾತ ವೈದ್ಯ, ಸಮಾಜ ಸೇವಕ ಡಾ. ಅಣ್ಣಯ್ಯ ಕಲಾಲ ಅವರಿಗೆ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿದರು.
ಈ ಪ್ರಶಸ್ತಿಯು ೫ ಲಕ್ಷ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಅಣ್ಣಯ್ಯ ಕಲಾಲ್ ಅವರು, ಪ್ರಧಾನಿ ಮೋದಿ ಅವರು ನನಗೆ ಪ್ರೇರಣೆ, ಅವರ ಪ್ರೇರಣೆ ಸಮಾಜಮುಖಿಯಾಗಿ ಕೆಲಸ ಮಾಡಲು ನೆರವಾಯಿತು. ಅನೇಕ ಸಮುದಾಯಗಳು ನನಗೆ ವಿದ್ಯಾರ್ಥಿವೇತನ ನೀಡಿ ನೆರವು ನೀಡಿವೆ. ಅದೆಷ್ಟೋ ಮಂದಿ ಬಡವರು ದೊಡ್ಡ ಹುದ್ದೆಗೇರಲು ದೇವರಾಜ ಅರಸು ಅವರ ಕೊಡುಗೆಯಿದೆ. ಅದನ್ನು ಮರೆಯಬಾರದು ಎಂದರು.
ಸಮಾರಂಭದಲ್ಲಿ ಸಚಿವ ಕೋಟಾ ಶ್ರೀನಿವಾಸಪೂಜಾರಿ, ಶಾಸಕರಾದ ಕುಮಾರ್ ಬಂಗರಾಪ್ಪ, ಹರತಾಳ ಹಾಲಪ್ಪ, ಬಾಬುರಾವ್ ಚಿಂಚನಸೂರ್ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ