ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ ಸೇರಿದಂತೆ ಐವರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.
ಏಕಾಏಕಿ ಮಾಡಿರುವ ದಯಾನಂದ್ ಅವರ ರದ್ದುಪಡಿಸಬೇಕೆಂದು ಒತ್ತಾಯಿಸಿ ರಾಜಭವನ ಮುಂದೆ ಹೆಡ್ ಕಾನ್‌ಸ್ಟೇಬಲ್ ಏಕಾಂಗಿ ಪ್ರತಿಭಟನೆ ನಡೆಸಿದರು. ತೋಳಿಗೆ ಕಪ್ಪುಪಟ್ಟಿ ಧರಿಸಿ ಅಂಬೇಡ್ಕರ್ ಫೋಟೊ ಹಿಡಿದುಕೊಂಡು ಅವರು ರಾಜಭವನ ಮುಂದೆ ಪ್ರತಿಭಟನೆ ನಡೆಸಿದರು. ದಯಾನಂದ ಅವರನ್ನು ಅಮಾನತುಗೊಳಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಪೊಲೀಸರಿಗೆ ರಕ್ಷಣೆ ನೀಡಬೇಕೆಂದು ಪ್ರತಿಭಟನೆ ನಡೆಸಿದ ಹೆಡ್ ಕಾನ್‌ಸ್ಟೇಬಲ್ ನರಸಿಂಹರಾಜು ಎಂಬವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಡ್ ಕಾನ್‌ಸ್ಟೇಬಲ್, “ಆರ್ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತವಾಗಿ 11 ಮಂದಿ ಸಾವನ್ನಪ್ಪಿರುವ ಸಂಬಂಧ ಆಯುಕ್ತರಾಗಿದ್ದ ದಯಾನಂದ ಅವರನ್ನು ಸರ್ಕಾರವು ಅಮಾನತು ಮಾಡಿರುವ ಆದೇಶವನ್ನು ಹಿಂಪಡೆದು ಪೊಲೀಸರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ದಯಾನಂದ ಸಾಹೇಬರು ಒಳ್ಳೆ ಕೆಲಸ ಮಾಡಿದ್ದಾರೆ. ಅವರನ್ನು ಅಮಾನತು ಮಾಡಿದ್ದು ಸರಿಯಲ್ಲ. ಹೀಗಾಗಿ ಅಮಾನತು ರದ್ದು ಮಾಡಬೇಕು” ಎಂದು ಒತ್ತಾಯಿಸಿದರು. ಈ ವೇಳೆ ವಿಧಾನಸೌಧ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ತಮ್ಮ ವೈಫಲ್ಯ ಮರೆಮಾಚಲು ಅಧಿಕಾರಿಗಳನ್ನು ಅಮಾನತು ಮಾಡಿರುವ ಕ್ರಮ ಸರಿಯಲ್ಲ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ