ನವದೆಹಲಿ: ಕೋವಿಡ್ ಲಸಿಕೆಯ ಅಡ್ಡ ಪರಿಣಾಮಗಳ ಕುರಿತು ಅಧ್ಯಯನ ನಡೆಸಲು ಸರ್ಕಾರ ನೇಮಿಸಿರುವ ಸಮಿತಿಯು ದೇಶದಲ್ಲಿ ಕೋವಿಡ್-19 ಲಸಿಕೆಯ ಅಡ್ಡ ಪರಿಣಾಮದಿಂದ ಮೃತಪಟ್ಟ ಮೊದಲ ಪ್ರಕರಣವನ್ನು ದೃಢಪಡಿಸಿದೆ.
ಕೋವಿಡ್ ಲಸಿಕೆ ತೆಗೆದುಕೊಂಡ ನಂತರ ತೀವ್ರ ಅಲರ್ಜಿಯಿಂದ ಬಳಲುತ್ತಿದ್ದ 31 ಪ್ರಕರಣಗಳನ್ನು ‘ನ್ಯಾಷನಲ್ ಸೀರಿಯಸ್ ಅಡ್ವರ್ಸ್ ಈವೆಂಟ್ಸ್ ಫಾಲೋವಿಂಗ್ ಇಮ್ಯುನೈಸೇಷನ್’ (ಎಇಎಫ್‌ಐ) ಸಮಿತಿ ಮೌಲ್ಯಮಾಪನ ಮಾಡಿ ಈ ವರದಿ ನೀಡಿದೆ.
68 ವರ್ಷದ ಹಿರಿಯರೊಬ್ಬರು 2021ರ ಮಾರ್ಚ್ 8ರಂದು, ಲಸಿಕೆ ಹಾಕಿಸಿಕೊಂಡ ನಂತರ ತೀವ್ರ ಅಲರ್ಜಿಯಿಂದ ಸಾವಿಗೀಡಾಗಿದ್ದಾರೆ. ಇದನ್ನು ಲಸಿಕೆಯ ಪಡೆದ ನಂತರ ತೀವ್ರ ಅಲರ್ಜಿಯಿಂದ ಉಂಟಾದ ಮೊದಲ ಸಾವು ಎಂದು ಸಮಿತಿಯು ಹೇಳಿದೆ.
ಕೋವಿಡ್ -19 ಲಸಿಕೆ ಪಡೆದು ತೀವ್ರ ಅಲರ್ಜಿಗೊಳಗಾಗಿ (ಅನಾಫಿಲಕ್ಸಿಸ್) ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ. ಲಸಿಕೆ ಹಾಕಿಸಿಕೊಂಡವರು, ಲಸಿಕಾ ಕೇಂದ್ರದಲ್ಲಿ 30 ನಿಮಿಷಗಳ ಕಾಲ ಇರಬೇಕು ಎಂಬುದನ್ನು ಈ ಪ್ರಕರಣ ಒತ್ತಿ ಹೇಳುತ್ತಿದೆ. ಈ ಅವಧಿಯಲ್ಲಿ ತೀವ್ರ ಅಲರ್ಜಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಅದಕ್ಕೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಿದರೆ ಸಾವು ಸಂಭವಿಸುವುದು ತಪ್ಪಿಸಬಹುದು’ ಎಂದು ಸಮಿತಿ ಅಧ್ಯಕ್ಷ ಡಾ. ಕೆ. ಅರೋರಾ ಹೇಳಿದ್ದಾರೆ.
ಈ ಸಮಿತಿಯು ಐದು ಪ್ರಕರಣಗಳನ್ನು ಫೆಬ್ರುವರಿ 5ರಂದು, ಎಂಟು ಪ್ರಕರಣಗಳನ್ನು ಮಾರ್ಚ್ 9 ರಂದು ಮತ್ತು ಮಾರ್ಚ್ 31ರಂದು 18 ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಲಭ್ಯವಾದ ದತ್ತಾಂಶದ ಪ್ರಕಾರ, ಏಪ್ರಿಲ್ ಮೊದಲ ವಾರದಲ್ಲಿ ಲಸಿಕೆ ಪಡೆದು ತೀವ್ರ ಅಲರ್ಜಿಯಿಂದ ಸಾವಿಗೀಡಾದವರ ಸಂಖ್ಯೆ ಒಂದು ದಶಲಕ್ಷಕ್ಕೆ ಇಬ್ಬರು. ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ