ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಸಚಿವ ನಾಗೇಂದ್ರ ರಾಜೀನಾಮೆ..?

ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡ ಬೆನ್ನಲ್ಲೇ ಸಚಿವ ಬಿ. ನಾಗೇಂದ್ರ ಗುರುವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾಗಿರುವ ನಾಗೇಂದ್ರ ಅವರಿಗೆ ತನಿಖೆ ಮುಗಿಯುವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿದ್ದರಾಮಯ್ಯ ಸೂಚಿಸಿದ್ದರಿಂದ ಇಂದೇ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಬಳಿಕ ಬಹುಕೋಟಿ ಹಗರಣ ಬಯಲಿಗೆ ಬಂದಿದೆ. ಸಚಿವ ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಇದೀಗ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಶರಣಾಗಿದ್ದು, ತಮ್ಮ 5 ಪುಟಗಳ ಡೆತ್ ನೋಟ್‌ನಲ್ಲಿ ಬೆ ಚಂದ್ರಶೇಖರನ್ ತಮ್ಮ ಮೇಲಧಿಕಾರಿಗಳು ಮತ್ತು ಸಚಿವರ ಹೆಸರನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಎಸ್‌ಟಿ ಕಲ್ಯಾಣಕ್ಕಾಗಿ ಮೀಸಲಿರಿಸಲಾಗಿದ್ದ 187 ಕೋಟಿ ರೂ.ಗಳಲ್ಲಿ 90 ಕೋಟಿ ರೂ.ಗಳ ಹಣವನ್ನು ಬಹು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಮೌಖಿಕವಾಗಿ ಸಚಿವರು ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಯೂನಿಯನ್ ಬ್ಯಾಂಕ್ ನೀಡಿದ ದೂರಿನ ಆಧಾರದ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿದ ಸುದ್ದಿ ಹೊರಬಿದ್ದ ನಂತರ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಈ ಕುರಿತು ಸಭೆ ನಡೆಸಿದ್ದಾರೆ. ಸಚಿವ ನಾಗೇಂದ್ರ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದು, ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿಗೆ ಇಡಿ ಶಾಕ್‌; ಹಲವು ಕಡೆ ದಾಳಿ

ಸಚಿವ ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ ಅವರನ್ನು ಎಸ್‌ಟಿಐ ಈಗಾಗಲೇ ಬಂಧಿಸಿದೆ. ಮತ್ತೊಂದೆಡೆ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಇಂದಿನಿಂದ ಪ್ರತಿಭಟನೆಗೆ ಕರೆ ನೀಡಿದೆ. ಹೀಗಾಗಿ ಇದಕ್ಕೂ ಮುನ್ನವೇ ನಾಗೇಂದ್ರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಇಂದು . ಮಧ್ಯಾಹ್ನವೇ ನಾಗೇಂದ್ರ ಅವರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ನಾಗೇಂದ್ರ ಅವರನ್ನು ಕರೆಸಿ ರಾಜೀನಾಮೆ ಕೇಳಲು ಕಾರಣವಾದ ಸಂದರ್ಭಗಳನ್ನು ವಿವರಿಸಿದ್ದಾರೆ ಎಂದು ವರದಿಯಾಗಿದೆ.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 94.73 ಕೋಟಿ ಮೊತ್ತವನ್ನು ಯೂನಿಯನ್ ಬ್ಯಾಂಕಿನ ವಸಂತನಗರ ಶಾಖೆಯಿಂದ ಎಂ.ಜಿ. ರಸ್ತೆಯ ಶಾಖೆಗೆ ವರ್ಗಾಯಿಸಲಾಗಿತ್ತು. ಅಲ್ಲಿಂದ ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್‌ ಸೊಸೈಟಿಯ 18 ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಸೊಸೈಟಿಯ ಖಾತೆಗಳಿಂದ ಹೈದರಾಬಾದ್‌ನ ರತ್ನಾಕರ ಬ್ಯಾಂಕ್ ಲಿಮಿಟೆಡ್‌ಗೆ (ಆರ್‌ಬಿಎಲ್‌) ವರ್ಗಾಯಿಸಿ, ಅಲ್ಲಿಂದ ಹಣವನ್ನು ಡ್ರಾ ಮಾಡಿಕೊಳ್ಳಲಾಗಿತ್ತು ಎಂಬ ಆರೋಪಗಳಿವೆ.
ಈ ಅಕ್ರಮದ ತನಿಖೆಗೆ ರಾಜ್ಯ ಸರ್ಕಾರಮನೀಶ ಖರ್ಬೀಕರ ನೇತೃತ್ವದಲ್ಲಿ ಎಸ್ಐಟಿ ತನಿಖೆಗೆ ಆದೇಶಿಸಿದೆ. ತನಿಖಾಧಿಕಾರಿಗಳು ಇದೀಗ ನಿಗಮದ ಅಧಿಕಾರಿಗಳನ್ನು ಹಾಗೂ ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ ಅವರನ್ನು ಬಂಧಿಸಿದೆ.
ಈ ಮಧ್ಯೆ ಸಚಿವ ನಾಗೇಂದ್ರ ರಾಜೀನಾಮೆ ಜೂನ್‌ 6ರವರೆಗೆ ಗಡುವು ನೀಡಿರುವ ಬಿಜೆಪಿ ನಾಯಕರು, ಇಂದು, ಗುರುವಾರ ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ. ಪ್ರತಿಪಕ್ಷಗಳು ಈ ವಿಚಾರನ್ನು ದೊಡ್ಡದಾಗಿ ಸರ್ಕಾರದ ಇಮೇಜಿಗೆ ಧಕ್ಕೆ ತರುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ನಾಗೇಂದ್ರ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು | ತನ್ನ ಒಪ್ಪಿಗೆಯಿಲ್ಲದೆ ಇನ್‌ಸ್ಟಾಗ್ರಾಮ್ ವೀಡಿಯೊ ಪೋಸ್ಟ್ ; ಮಹಿಳೆಯ ದೂರಿನ ನಂತರ ವ್ಯಕ್ತಿಯ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement