ಬೆಳ್ತಂಗಡಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಉಡುಪಿಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಧರ್ಮಸ್ಥಳ ವಿಚಾರದಲ್ಲಿ ಮಾತನಾಡುವಾಗ ಬಿಜೆಪಿ ನಾಯಕ ಬಿ.ಎಲ್. ಸಂತೋಷ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಆರೋಪಿಸಲಾಗಿದ್ದು, ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸರು ಮಹೇಶ ಶೆಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ನೋಟಿಸ್‌ಗೆ ಸೂಕ್ತ ಉತ್ತರ ನೀಡದ ಕಾರಣ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.
ರಾಜೀವ ಕುಲಾಲ ಎಂಬವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ BSN 196 (1), 352, 353 (2) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವಶಕ್ಕೆ ಪಡೆಯಲು ಉಡುಪಿ ಪೊಲೀಸರ ತಂಡ ಉಜಿರೆಯ ತಿಮರೋಡಿಯಲ್ಲಿರುವ ಮಹೇಶ ಶೆಟ್ಟಿ ನಿವಾಸಕ್ಕೆ ಆಗಮಿಸಿತ್ತು. ಈ ವೇಳೆ ಅವರನ್ನು ಬಂಧಿಸದಂತೆ ಬೆಂಬಲಿಗರು ಮಹೇಶ ಶೆಟ್ಟಿ ಪರ ಘೋಷಣೆ ಕೂಗಿದರು. ತಿಮರೋಡಿ ನಿವಾಸಕ್ಕೆ ತೆರಳಿದ್ದ ಸುಮಾರು 30 ಪೊಲೀಸರ ತಂಡ ಉಜಿರೆಯಲ್ಲಿರುವ ಅವರ ಮನೆಯಲ್ಲೇ ವಶಕ್ಕೆ ಪಡೆದಿದೆ. ನೊಟೀಸ್ ನೀಡದೇ ನನ್ನನ್ನು ಬಂಧಿಸಲಾಗುತ್ತಿದೆ. ಹೀಗೆ ಕರೆದೊಯ್ದು ನನ್ನನ್ನು ಏನು ಬೇಕಾದರೂ ಮಾಡುವ ಸಾಧ್ಯತೆ ಇದೆ ಎಂದು ಕೂಗಾಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ