ಆರಾಧನಾ ಸ್ಥಳಗಳ ಕಾಯಿದೆಯಲ್ಲಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪ ಖಚಿತ ಪಡಿಸಿಕೊಳ್ಳುವುದು ನಿರ್ಬಂಧಿಸಿಲ್ಲ: ಸುಪ್ರೀಂಕೋರ್ಟ್

ನವದೆಹಲಿ:ಆರಾಧನಾ ಸ್ಥಳಗಳ ಕಾಯಿದೆಯಲ್ಲಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಖಚಿತ ಪಡಿಸಿಕೊಳ್ಳುವುದನ್ನು ನಿರ್ಬಂಧಿಸಿಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಮೌಖಿಕವಾಗಿ ಹೇಳಿದ್ದು, ದೇಶದಲ್ಲಿನ ಧಾರ್ಮಿಕ ರಚನೆಗಳ ಸ್ವರೂಪ ಮತ್ತು ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಮಹತ್ವದ ಅಭಿಪ್ರಾಯ ಎಂದು ಪರಿಗಣಿಸಲ್ಪಟ್ಟಿದೆ.
ಕಾಶಿ ವಿಶ್ವನಾಥ ದೇಗುಲ-ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌ ಅವರು “1991ರ ಕಾಯಿದೆ ಸೆಕ್ಷನ್‌ 3ರ ಅಡಿ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವನ್ನು ಖಚಿತ ಪಡಿಸಿಕೊಳ್ಳುವುದನ್ನು ನಿರ್ಬಂಧಿಸಿಲ್ಲ. ಒಂದು ಪಾರ್ಸಿ ದೇವಾಲಯವಿದ್ದು, ಅಲ್ಲಿ ಮೂಲೆಯಲ್ಲಿ ಒಂದು ಶಿಲುಬೆ ಇದೆ ಎಂದು ಭಾವಿಸೋಣ. ಆಗ ಆ ಶಿಲುಬೆಯ ಇರುವಿಕೆಯು ಆ ಸ್ಥಳವನ್ನು ಅಗ್ಯಾರಿ (ಪಾರ್ಸಿಗಳ ದೇವಾಲಯ) ಆಗಿಸುತ್ತದೆಯೋ ಅಥವಾ ಅಗ್ಯಾರಿ ಕ್ರಿಶ್ಚಿಯನ್‌ ಆಗಿಸುತ್ತದೆಯೋ? ಈ ಬಗೆಯ ಹೈಬ್ರಿಡ್‌ ಸ್ವರೂಪ ಹೊಸತೇನಲ್ಲ” ಎಂದರು.

ಆಗ ಮುಸ್ಲಿಮ್‌ ಪಕ್ಷಕಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹುಜೇಫಾ ಅಹ್ಮದಿ ಅವರು “1947ರ ಆಗಸ್ಟ್‌ 15ರವರೆಗೆ ಜ್ಞಾನವಾಪಿ ಮಸೀದಿಯ ಧಾರ್ಮಿಕ ಸ್ವರೂಪವು ವಿವಾದಾತೀತವಾಗಿದೆ” ಎಂದರು.
ಇದನ್ನು ತೀವ್ರವಾಗಿ ಪ್ರತಿಭಟಿಸಿದ ಹಿಂದೂ ಪಕ್ಷಕಾರರ ವಕೀಲರು “ಇದು ನಿಜಕ್ಕೂ ವಿವಾದತ್ಮಾಕವಾಗಿದೆ” ಎಂದರು.
ರಾಮಜನ್ಮ ಭೂಮಿ ಆಂದೋಲನದ ಸಂದರ್ಭದಲ್ಲಿ ಆರಾಧನಾ ಸ್ಥಳಗಳ ಕಾಯಿದೆ 1991ಯನ್ನು ಜಾರಿಗೆ ತರಲಾಗಿದೆ. 1947ರ ಆಗಸ್ಟ್‌ 15ರಲ್ಲಿ ಆರಾಧನಾ ಸ್ಥಳಗಳು ಯಾವ ರೀತಿಯಿದ್ದವೋ ಅದೇ ಯಥಾಸ್ಥಿತಿಯನ್ನು ರಕ್ಷಿಸುವ ಉದ್ದೇಶವನ್ನು ಕಾಯಿದೆ ಹೊಂದಿದೆ.
ಜ್ಞಾನವಾಪಿ-ಕಾಶಿ ವಿಶ್ವನಾಥ ವಿವಾದದ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸುವ ಕುರಿತು ಹಿಂದೂ ಮತ್ತು ಮುಸ್ಲಿಮ್‌ ಸಮುದಾಯಗಳೆರಡೂ ಹಕ್ಕು ಸಾಧಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಿವಿಲ್‌ ದಾವೆಯು ನಿರ್ವಹಣೆಯನ್ನು ಜಿಲ್ಲಾ ನ್ಯಾಯಾಧೀಶರು ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.
ವಾರಾಣಸಿಯ ಸಿವಿಲ್‌ ನ್ಯಾಯಾಧೀಶರ ಮುಂದಿರುವ ಈ ಪ್ರಕರಣವು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅದನ್ನು ವರ್ಗಾವಣೆ ಮಾಡಲಾಗಿದ್ದು, ಉತ್ತರ ಪ್ರದೇಶದ ಹಿರಿಯ ಮತ್ತು ಅನುಭವಿ ನ್ಯಾಯಾಂಗ ಅಧಿಕಾರಿಗಳು ಅದನ್ನು ನಿರ್ಧರಿಸಬೇಕು. ಹೀಗಾಗಿ, ವಾರಾಣಸಿಯ ಸಿವಿಲ್‌ ನ್ಯಾಯಾಧೀಶರಿಂದ (ಹಿರಿಯರ ವಿಭಾಗ) ಪ್ರಕರಣವನ್ನು ವಾರಾಣಸಿ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಲಾಗಿದೆ.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement